ಡಿಸೆಂಬರ್ 10 ರ ಬಳಿಕ ಸಂಪುಟ ವಿಸ್ತರಣೆ : ಕುತೂಹಲ ಮೂಡಿಸಿದ ಯತ್ನಾಳ, ಜಾರಕಿಹೊಳಿ ಹೇಳಿಕೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಹಗರಣ ಬಿರುಗಾಳಿ ಎಬ್ಬಿಸಿರುವ ಬೆನ್ನಲ್ಲೇ ನಾಯಕತ್ವ ಬದಲಾವಣೆ ವದಂತಿ ಸಹ ಹಬ್ಬಿದೆ. ಇದರ ಬೆನ್ನಲ್ಲೇ ಡಿಸೆಂಬರ್ 10ರ ನಂತರ ರಾಜ್ಯದಲ್ಲಿ ಭಾರೀ ಬದಲಾವಣೆ ಆಗುತ್ತದೆ ಎಂದು ಬಿಜೆಪಿ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಇವರಿಬ್ಬರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಎಬ್ಬಿಸಿದೆ. ಹತ್ತು ದಿನಗಳಲ್ಲಿ ನಾನು ಮತ್ತೆ ಮಂತ್ರಿಯಾಗುತ್ತೇನೆ ಎಂದು ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಭೇಟಿ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

 

 

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಯತ್ನಾಳ್, ಡಿಸೆಂಬರ್ 10ರ ಬಳಿಕ ರಾಜ್ಯದಲ್ಲಿ ಬಹಳ ದೊಡ್ಡ ಬದಲಾವಣೆಯಾಗಲಿದೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಅಲ್ಲದೆ ಬಸನಗೌಡ ಪಾಟೀಲ್ ಯತ್ನಾಳ್, ಪೂರ್ಣ ಸಚಿವ ಸಂಪುಟವೇ ಪುನಾರಚನೆಯಾಗಬಹುದು ಎಂದು ಹೇಳುವ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದಾರೆ. ಜೊತೆಗೆ ಪರೋಕ್ಷವಾಗಿ ಕೆಲ ಸಚಿವರುಗಳ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಅವರುಗಳು ವಿಧಾನಸೌಧಕ್ಕೆ ಬರುವುದಿಲ್ಲ. ಶಾಸಕರುಗಳ ಸಮಸ್ಯೆಗೂ ಸ್ಪಂದಿಸುವುದಿಲ್ಲ. ದಿನಬೆಳಗಾದರೆ ಮುಖ್ಯಮಂತ್ರಿಗಳ ಬಾಲಂಗೋಚಿಯಂತೆ ತಿರುಗಾಡುತ್ತಾರೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಯತ್ನಾಳ್ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದರು. ಅಲ್ಲದೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವುದು ಖಚಿತ ಎಂದು ಹೇಳಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದಂತೆ ಯಡಿಯೂರಪ್ಪನವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ರಮೇಶ್ ಜಾರಕಿಹೊಳಿ ಅವರು ನವೆಂಬರ್ 21 ರಂದು ವಿಜಯಪುರ ಯತ್ನಾಳ ಅವರ ಮನೆಯಲ್ಲಿ ರಹಸ್ಯ ಸಭೆ ನಡೆಸಿದ್ದರು. ಸುಮಾರು ಒಂದು ಗಂಟೆಗಿಂತ ಹೆಚ್ಚಿನ ಕಾಲ ಇಬ್ಬರೂ ನಾಯಕರು ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತೇ ಅಲ್ಲೋಲ್ಲ ಕಲ್ಲೋಲ್ಲ ಸಂಭವ ಇದೆ ಎನ್ನಲಾಗುತ್ತಿದೆ ಏನಾಗಬಹುದು? ಕಾದ ನೋಡಬೇಕಷ್ಟೆ.

Donate Janashakthi Media

Leave a Reply

Your email address will not be published. Required fields are marked *