ಬೆಳಗಾವಿ: ಅಶ್ಲೀಲ ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಇದೆ. ಹೀಗಾಗಿ ಬೈಎಲೆಕ್ಷನ್ ಪ್ರಚಾರಕ್ಕೆ ಅವರು ಬರುವ ಸಾಧ್ಯತೆ ಕಡಿಮೆ ಎಂದು ಭೈರತಿ ಬಸವರಾಜು ಬೆಳಗಾವಿಯಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಉಪಚುನಾವಣೆ ಪ್ರಚಾರಕ್ಕೆ ಕರೆಯುವ ಸಲುವಾಗಿ ನಾನು ರಮೇಶ್ ಜಾರಕಿಹೊಳಿ ಅವರಿಗೆ ಕರೆ ಮಾಡಿದ್ದೆ. ಆದರೆ, ಅವರು ಪ್ರಚಾರಕ್ಕೆ ಬರುವುದು ಅನುಮಾನ. ನಾನು ಫೋನ್ ಮಾಡಿದ್ದಾಗ ರಮೇಶ್ ಜಾರಕಿಹೊಳಿ ಅವರೇ ತಮಗೆ ಕೊರೊನಾ ಇರುವುದಾಗಿ ಮಾಹಿತಿ ನೀಡಿದ್ದಾರೆಂದು ಭೈರತಿ ಬಸವರಾಜು ತಿಳಿಸಿದ್ದಾರೆ.
ಇಂದು ವಿಚಾರಣೆಗೆ ಗೈರು?! : ಅಶ್ಲೀಲ ಸಿಡಿ ಬಹಿರಂಗವಾದ ನಂತರ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡೇ ಪ್ರಕರಣದಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಯೋಜನೆ ರೂಪಿಸುತ್ತಿದ್ದಾರೆ. ಸದ್ಯ ಅನಾರೋಗ್ಯದ ನೆಪವನ್ನೂ ಒಡ್ಡಿರುವ ರಮೇಶ್ ಜಾರಕಿಹೊಳಿ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಇಂದು ಸಹ ಆರೋಗ್ಯ ಸಮಸ್ಯೆಯ ಕಾರಣ ನೀಡಿ, ವಕೀಲರ ಮೂಲಕ ಎಸ್ಐಟಿ ಅಧಿಕಾರಿಗಳಿಗೆ ಮನವಿ ಮಾಡಲು ನಿರ್ಧರಿಸಿರುವ ರಮೇಶ್ ಜಾರಕಿಹೊಳಿ ವಿಚಾರಣೆಯಿಂದ ವಿನಾಯಿತಿ ಪಡೆಯಲಿದ್ದಾರೆ ಎನ್ನಲಾಗಿದೆ.
ಹೀಗಾಗಿ ಇಂದು ವಿಚಾರಣೆಗೆ ರಮೇಶ್ ಜಾರಕಿಹೊಳಿ ಹಾಜರಾಗುವುದು ಬಹುತೇಕ ಅನುಮಾನವಾಗಿದ್ದು, ಕಳೆದ ಎಂಟು ದಿನಗಳಿಂದ ಸಂಪರ್ಕಕ್ಕೆ ಸಿಗದ ಅವರು ತಮ್ಮ ವಕೀಲರ ಜೊತೆ ಈ ಬಗ್ಗೆ ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಮೇಶ್ ಜಾರಕಿಹೊಳಿ ತಮಗೆ ಕೊರೊನಾ ಬಂದಿದೆ ಎಂದು ಭೈರತಿ ಬಸವರಾಜು ಅವರಿಗೆ ತಿಳಿಸಿರುವುದನ್ನು ನೋಡಿದರೆ ಸದ್ಯ ಕೊರೊನಾ ನಿಯಮಾವಳಿಗಳನ್ನು ಪಾಲಿಸಿ, ಸೂಕ್ತ ಚಿಕಿತ್ಸೆ ಪಡೆದು ಮತ್ತೆ ತನಿಖೆಗೆ ಹಾಜರಾಗಲು ಕನಿಷ್ಠ 15 ದಿನಗಳಾಗುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಎಸ್ಐಟಿ ಅಧಿಕಾರಿಗಳು ಯಾವ ರೀತಿ ಹೆಜ್ಜೆ ಇಡಲಿದ್ದಾರೆ. ತನಿಖೆ ಯಾವ ಆಯಾಮ ಪಡೆದುಕೊಳ್ಳಲಿದೆ ಎಂಬುದು ಸದ್ಯದ ಕುತೂಹಲ.