ರಮೇಶ್‌ ಜಾರಕಿಹೊಳಿ ಅವರದ್ದು ಷಡ್ಯಂತ್ರದ ಹಗೆತನವಷ್ಟೇ: ರಮೇಶ್ ಬಾಬು

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಈ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರ ವಿರುದ್ಧ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಷಡ್ಯಂತ್ರ ರೂಪಿಸಿ, ಹಗೆತನಕ್ಕೆ ಇಳಿದಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಅಭಿಪ್ರಾಯಪಟ್ಟರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಕೀಳುಮಟ್ಟದ ಆರೋಪಗಳಾಗಿವೆ ಎಂದು ತಿಳಿಸಿದರು.

ಇದನ್ನು ಓದಿ: ಮತದಾರರಿಗೆ ಹಣದ ಅಮಿಷ: ಬಿಜೆಪಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು

ರಮೇಶ್​ ಜಾರಕಿಹೊಳಿ ವೈಯಕ್ತಿಕ ದ್ವೇಷ, ಹಗೆತನವನ್ನು ತೋರಿಸಿದ್ದಾರೆ. ಅವರ ಮಾಧ್ಯಮಗೋಷ್ಟಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬೊಮ್ಮಾಯಿ, ಹಾಗೂ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಧಾರವಾಡದಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿರುವುದು, ಈ ಪ್ರಕರಣದ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಈ ವಿಚಾರವಾಗಿ ಅವರು ಯಾವುದೇ ಪೊಲೀಸ್ ಠಾಣೆಗಳಲ್ಲಿ ದೂರು ನೀಡದೇ ಈಗ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಲು ಕೋರುವುದಾಗಿ ಹೇಳಿಕೆ ನೀಡಿದ್ದಾರೆ. ಇದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲದೆ ಸ್ವತಃ ತಾಣು ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿರುವುದಾಗಿ ಹೇಳಿಕೆ ನೀಡಿದ್ದು ಇದು ಮತ್ತಷ್ಟು ಅನುಮಾನವನ್ನು ಹುಟ್ಟು ಹಾಕಿದೆ ಎಂದರು.

ಇದನ್ನು ಓದಿ: ಕಾಂಗ್ರೆಸ್‌ ಜೆಡಿಎಸ್‌ ವಿರುದ್ಧ ಅಮಿತ್‌ ಶಾ ವಾಗ್ದಾಳಿ ; ಈ ಬಾರಿ ಬಿಜೆಪಿ ಗೆಲ್ಲಲ್ಲ – ಡಿಕೆಶಿ

ರಮೇಶ್​ ಜಾರಕಿಹೊಳಿಗೆ ಕ್ಲೀನ್ ಚಿಟ್ ದೊರೆತಿಲ್ಲ

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿಯ ಅವರು ಸಾರ್ವಜನಿಕ ಒತ್ತಡಕ್ಕೆ ಮಣಿದು ಮಾರ್ಚ್ 2021 ರಲ್ಲಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್ ವಿಚಾರವಾಗಿ ಎಸ್ಐಟಿ ನೀಡಿರುವ ವರದಿ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಬಾಕಿ ಇದ್ದು, ಸಿಡಿ ಪ್ರಕರಣದಲ್ಲಿ ಇಲ್ಲಿಯವರೆಗೆ ಅವರಿಗೆ ಕ್ಲೀನ್ ಚಿಟ್ ದೊರೆತಿಲ್ಲ ಎಂಬುದನ್ನು ಗಮನಿಸಬೇಕೆಂದು ರಮೇಶ್‌  ಬಾಬು ತಿಳಿಸಿದರು.

ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಇಂದು ಶಾಸಕಿಯಾಗಿ ತಮ್ಮ ಸಾಮರ್ಥ್ಯದ ಆಧಾರದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಆದರೆ ರಮೇಶ್ ಜಾರಕಿಹೊಳಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೀಳು ಮಟ್ಟದ ಟೀಕೆಗೆ ಮುಂದಾಗಿದ್ದಾರೆ. ಸಾಮಾನ್ಯವಾಗಿ ಸಂತ್ರಸ್ತರು ದೂರು ನೀಡುತ್ತಾರೆ. ಈ ಪ್ರಕರಣದಲ್ಲಿ ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಮಾಡದೇ, ಆರೋಪಿಯ ನಿರ್ದೇಶನದಂತೆ ಎಸ್ಐಟಿ ರಚಿಸಿ ತನಿಖೆ ಮಾಡಲಾಗಿದೆ. ಸಿಬಿಐ ತನಿಖೆ ಆಗಬೇಕು ಎನ್ನುತ್ತಿರುವ ರಮೇಶ್ ಜಾರಕಿಹೊಳಿ ಅವರಿಗೆ ರಾಜ್ಯ ಪೊಲೀಸರ ಮೇಲೆ ನಂಬಿಕೆ ಇಲ್ಲವೇ ಅಥವಾ ಸಿಬಿಐ ಮೂಲಕ ಬೇರೆಯವರ ಮೇಲೆ ಪ್ರಕರಣ ದಾಖಲಿಸಲು ಪ್ರಯತ್ನಿಸುತ್ತಿದ್ದಾರಾ? ಎಂದು ರಮೇಶ್​ ಬಾಬು ಪ್ರಶ್ನಿಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *