ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಪರ್ಯಾಯ ಶಕ್ತಿಯಾಗಿ ರೂಪಿಸುವ ನಿಟ್ಟಿನಲ್ಲಿ ಲೋಕ್ ಶಕ್ತಿ ಪಕ್ಷಕ್ಕೆ ಮತ್ತೆ ಚಾಲನೆ ದೊರೆತಿದೆ. ಕಾಂಗ್ರೆಸ್ – ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಪಕ್ಷ ಸಂಘಟಿಸಲು ತೀರ್ಮಾನಿಸಿರುವ ಲೋಕ್ ಶಕ್ತಿ ಪಕ್ಷವು ನಗರದ ಮಲ್ಲೇಶ್ವರಂನಲ್ಲಿ ಪ್ರಧಾನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು.
ಜಾತಿ ಆಧಾರಿತ ರಾಜಕಾರಣ ಹೊರತುಪಡಿಸಿ ಜಾತ್ಯತೀತ ತತ್ವ ಸಿದ್ಧಾಂತ, ಸಹಬಾಳ್ವೆಯ ಮೂಲ ತತ್ವಗಳ ಆಧಾರದ ಮೇಲೆ ಪಕ್ಷವನ್ನು ಮುನ್ನಡೆಸಲು ತೀರ್ಮಾನಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಲೋಕಜನಶಕ್ತಿ ಪಕ್ಷ ಅಸ್ಥಿತ್ವದಲ್ಲಿದ್ದು, ರಾಜ್ಯದಲ್ಲಿ ಪಕ್ಷದ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಪರಂಪರೆಯನ್ನು ಮುನ್ನಲೆಗೆ ತರಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಲಿಮಾಯ ತಿಳಿಸಿದರು.
ಲೋಕ್ ಶಕ್ತಿ ಪಕ್ಷವನ್ನು ಸಂಘಟಿಸಿ ಭವಿಷ್ಯದ ಎಲ್ಲಾ ಚುನಾವಣೆಗಳಲ್ಲೂ ಸಕ್ರಿಯವಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಕರ್ನಾಟಕ ರಾಜ್ಯದಲ್ಲಿನ ಇಂದಿನ ರಾಜಕೀಯ ದುಸ್ಥಿತಿಯನ್ನು ಕಂಡು ಕರ್ನಾಟಕ ಮಣ್ಣಿನ ಹಾಗೂ ಕನ್ನಡದ ಅಸ್ಮಿತೆಯನ್ನು ಹೊಂದಿರುವ ಪರ್ಯಾಯ ರಾಜಕೀಯ “ಶಕ್ತಿ”ಯನ್ನು ಹುಟ್ಟು ಹಾಕಬೇಕೆಂಬುದೆ ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಂದ ಸ್ಥಾಪಿತವಾದ “ಲೋಕ್ ಶಕ್ತಿ” ಕನ್ನಡ ನೆಲದ ಹಾಗೂ ಕನ್ನಡಿಗರ ಪಕ್ಷ. ಆದ್ದರಿಂದ ನಾವು “ಲೋಕ್ ಶಕ್ತಿ” ಯನ್ನು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕಕ್ಕಾಗಿ, ಕನ್ನಡಗರಿಗಾಗಿ “ಲೋಕಾರ್ಪಣೆ” ಮಾಡುತ್ತಿದ್ದೇವೆ. ಗಾಂಧಿ ಜಯಂತಿ ಪವಿತ್ರದಿನದಂದು ಈ ಕಾರ್ಯ ನೆರವೇರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು.
ರಾಜ್ಯಾಧ್ಯಕ್ಷ ಚಂದ್ರಶೇಖರ ವಿ. ಸ್ಥಾವರಮಠ ಮಾತನಾಡಿ ಸಿಂಧಗಿ, ಹಾನಗಲ್ ವಿಧಾನಸಭೆ, ಜಿಲ್ಲಾ ತಾಲ್ಲೂಕು, ಸೇರಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ಉದ್ದೇಶಿಸಲಾಗಿದೆ. 25 ವರ್ಷಗಳ ಹಿಂದೆ ಎನ್.ಡಿ.ಎ ಜತೆ ಹೊಂದಾಣಿಕೆ ಮಾಡಿಕೊಂಡು ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಲೋಕ್ ಶಕ್ತಿ ಗೆದ್ದಿತ್ತು. ಇದೀಗ ಮತ್ತೆ ತನ್ನ ಗತ ವೈಭವವನ್ನು ಮರಳಿ ತರಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಶ್ಯಾಮ್ ಶಾಮಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯ್ ಪಾಲ್ ಸಿಂಗ್, ರಾಷ್ಟ್ರೀಯ ಕಾರ್ಯದರ್ಶಿ ರಾಕೇಶ್ ಚಿಕ್ಕಾರೆಡ್ಡಿ, ರಾಜ್ಯ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ವಿರೇಶ್, ಉಪಾಧ್ಯಕ್ಷ ನಂದೀಶ್, ಹಿರಿಯ ಉಪಾಧ್ಯಕ್ಷ ಅಬ್ದುಲ್ ಬಶೀರ್, ಕೆ.ಎಂ. ಪಾಲಾಕ್ಷ ಮತ್ತಿತರ ಉಪಸ್ಥಿತರಿದ್ದರು.