ಪಾಟ್ನಾ: “ನಾನು ರಾಮನನ್ನು ನಂಬುವುದಿಲ್ಲ. ರಾಮನು ದೇವರಲ್ಲ. ರಾಮನು ತುಳಸಿದಾಸ್ ಮತ್ತು ವಾಲ್ಮೀಕಿ ಅವರ ಸಂದೇಶವನ್ನು ಹರಡಲು ಸೃಷ್ಟಿಸಿದ ಪಾತ್ರ” ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ) ಮುಖ್ಯಸ್ಥ ಮಾಂಝಿ ಭಾರತದ ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಈ ರೀತಿ ಹೇಳಿಕೆಗಳನ್ನು ನೀಡಿದರು.
“ತುಳಸಿದಾಸ್ ಹಾಗೂ ವಾಲ್ಮೀಕಿ ರಾಮಾಯಣವನ್ನು ಬರೆದಿದ್ದಾರೆ ಹಾಗೂ ಅವರ ಬರಹಗಳಲ್ಲಿ ಅನೇಕ ಉತ್ತಮ ಪಾಠಗಳಿವೆ. ನಾವು ಅದನ್ನು ನಂಬುತ್ತೇವೆ. ನಾವು ತುಳಸಿದಾಸ್ ಮತ್ತು ವಾಲ್ಮೀಕಿಯನ್ನು ನಂಬುತ್ತೇವೆಯೇ ಹೊರತು ರಾಮನನ್ನಲ್ಲ,” ಎಂದು ಮಾಂಝಿ ಹೇಳಿದರು. ಮಾಂಝಿ ಅವರ ಮಗ ಸಂತೋಷ್ ಮಾಂಝಿ ಬಿಹಾರದಲ್ಲಿ ನಿತೀಶ್ ಕುಮಾರ್-ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದಾರೆ.
“ನಿಮಗೆ ರಾಮನಲ್ಲಿ ನಂಬಿಕೆಯಿದ್ದರೆ, ರಾಮನು ಶಬರಿಯು ನೀಡಿದ ರುಚಿಯಾದ ಹಣ್ಣನ್ನು ತಿಂದಿದ್ದಾನೆ ಎಂಬುದು ನಾವು ಯಾವಾಗಲೂ ಕೇಳುವ ಕಥೆ. ನಾವು ಕಚ್ಚಿದ ಹಣ್ಣನ್ನು ನೀವು ತಿನ್ನುವುದಿಲ್ಲ. ಆದರೆ ನಾವು ಮುಟ್ಟಿದ್ದನ್ನು ತಿನ್ನುತ್ತೀರಿ” ಎಂದು ಮಾಂಝಿ ಹೇಳಿದ್ದು, ದೇಶದಲ್ಲಿ ಜಾತಿ ವಿಭಜನೆಯನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.
ಈ ಜಗತ್ತಿನಲ್ಲಿ ಕೇವಲ ಎರಡು ಜಾತಿಗಳಿವೆ. ಅದುವೇ- ಶ್ರೀಮಂತ ಹಾಗೂ ಬಡವ. ಬ್ರಾಹ್ಮಣರು ದಲಿತರ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂದು ಮಾಂಝಿ ಆರೋಪಿಸಿದರು.