ಜಯಪುರ: ‘ಅಯೋಧ್ಯೆ ಬಾಲರಾಮ ಮೂರ್ತಿ ಕೆತ್ತನೆಗೆ ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಬಾರದು’ ಎಂದು ಒತ್ತಾಯಿಸಿ ಹೋಬಳಿಯ ಹಾರೋಹಳ್ಳಿಯ ಗೇಟ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ, ಜೈಭೀಮ್ ಒಕ್ಕೂಟ ಹಾಗೂ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಪ್ರತಿಭಟಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ, ಮುಖಂಡ, ಮಾಜಿ ಮೇಯರ್ ಪುರುಷೋತ್ತಮ್, ‘ರಾಮಮಂದಿರ ಹೆಸರಲ್ಲಿ ಕೇಸರಿಕರಣ ಮಾಡಲು ಬಿಡವುದಿಲ್ಲ. ಹಾರೋಹಳ್ಳಿಯಲ್ಲಿ ಅಂಬೇಡ್ಕರ್ ಅನುಯಾಯಿಗಳ ಜಮೀನು ಬಳಸಿಕೊಂಡು ಗ್ರಾಮವನ್ನು ದಕ್ಷಿಣ ಅಯೋಧ್ಯೆಯಾಗಿ ಪರಿವರ್ತಿಸಿ ದೇವಸ್ಥಾನ ಕಟ್ಟಲು ಅಂಬೇಡ್ಕರ್ ವಿರೋಧಿಗಳು ಮುಂದಾಗಿದ್ದಾರೆ. ಪರಿಶಿಷ್ಟ ಸಮುದಾಯವನ್ನು ಮೌಢ್ಯಕ್ಕೆ ತಳ್ಳಲು ನಡೆದಿರುವ ದೊಡ್ಡ ಹುನ್ನಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಇದು ಆರ್ಎಸ್ಎಸ್ ಹುನ್ನಾರದ ಪೂರ್ವ ನಿಯೋಜಿತ ಕಾರ್ಯಕ್ರಮವಾಗಿದ್ದು, ಹಾರೋಹಳ್ಳಿ ಎಂದೆಂದಿಗೂ ಬುದ್ಧನ ನಾಡು. ದಕ್ಷಿಣ ಅಯೋಧ್ಯೆ ಹೆಸರಿನಲ್ಲಿ ದೇವಸ್ಥಾನ ಕಟ್ಟಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದೇ ಸ್ಥಳದಲ್ಲಿ ನಾವು ನಳಂದ ವಿಶ್ವವಿದ್ಯಾಲಯ ಹಾಗೂ ಶಿಕ್ಷಣ ಸಂಸ್ಥೆ ನಿರ್ಮಿಸಲು ಯೋಜಿಸಿದ್ದೇವೆ. ಸರ್ವೇ ನಂಬರ್ 196 ಮತ್ತು 197ರ ಜಮೀನು ಮಾಲೀಕರ ಅನುಮತಿ ಪಡೆದುಕೊಂಡಿದ್ದೇವೆ’ ಎಂದರು.
ಇದನ್ನೂ ಓದಿ: ಬಿಜೆಪಿಯ 18 ಶಾಸಕರ ಅಮಾನತು: ಮೇ 25ರಂದು ಸಭೆ
ಮುಖಂಡ ಹಾರೋಹಳ್ಳಿ ಸುರೇಶ್ ಕುಮಾರ್ ಮಾತನಾಡಿ, ‘ಗ್ರಾಮ ವ್ಯಾಪ್ತಿಯಲ್ಲಿ ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ವರ್ಗದವರು, ದಲಿತರು ಸೇರಿದಂತೆ ಎಲ್ಲರೂ ಸೌಹಾರ್ದದಿಂದ ಇದ್ದೇವೆ. ಅಯೋಧ್ಯೆ ಇರುವ ಉತ್ತರ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಕರ್ನಾಟಕ ಶಾಂತಿಗೆ ಹೆಸರುವಾಸಿಯಾಗಿದೆ. ಸಮುದಾಯದ ಅಸ್ತಿತ್ವ ನಾಶ ಮಾಡಲು ಮುಂದಾಗಿರುವವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಹಾರೋಹಳ್ಳಿ ಸುರೇಶ್ ಕುಮಾರ್, ಧನಗಹಳ್ಳಿ ಸ್ವಾಮಿ, ಮುರುಡಗಹಳ್ಳಿ ಮಹದೇವು, ನಟರಾಜು, ಕುಮಾರ್, ಕಡಕೋಳ ಭರತ್, ಮಾವಿನಹಳ್ಳಿ ನಾಗೇಶ್, ಜಿ.ಜಿ.ಪುರ ಹರೀಶ್ ಸೇರಿದಂತೆ ಮುಖಂಡರು ಪಾಲ್ಗೊಂಡಿದ್ದರು.
ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತನೆಗೆ ಬಳಸಿದ ಕೃಷ್ಣಶಿಲೆ ಹಾರೋಹಳ್ಳಿಯ ಪರಿಶಿಷ್ಟ ಸಮುದಾಯದ ರಾಮದಾಸ್ ಎಂಬುವವರ ಜಮೀನಿನಲ್ಲಿ ದೊರೆತಿತ್ತು. ಇತ್ತೀಚೆಗೆ ಪೂಜೆ ಪುನಸ್ಕಾರಗಳು ಜರುಗಿದ್ದವು.
ಕಾರ್ಯಕ್ರಮ ರದ್ದು
ಜಮೀನು ಮಾಲೀಕ ರಾಮದಾಸ್ ಅವರು ಬಿ.ಆರ್.ಕೆ.ಎಸ್. ಹೆಸರಿನಲ್ಲಿ ಟ್ರಸ್ಟ್ ನೋಂದಣಿ ಮಾಡಿಸಿದ್ದರು. ಆ ಟ್ರಸ್ಟ್ ಮೂಲಕ ಶುಕ್ರವಾರ ಹಾರೋಹಳ್ಳಿಯಲ್ಲಿ ಮತ್ತೊಂದು ಬಾಲರಾಮನ ಮೂರ್ತಿ ಕೆತ್ತನೆಗೆ ಚಾಲನೆ ನೀಡಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶಾಸಕ ಜಿ.ಟಿ. ದೇವೇಗೌಡ ಆಗಮಿಸಬೇಕಿತ್ತು.
ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಯಿತು. ‘ರಾಮನ ಮೂರ್ತಿ ಕೆತ್ತನೆಗೆ ಚಾಲನೆ ನೀಡಲು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಡಿಎಸ್ಎಸ್ ಸಂಘಟನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು. ಮುಂಜಾಗ್ರತೆ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ ಕಾರ್ಯಕ್ರಮ ನಿಲ್ಲಿಸಲಾಯಿತು.
ಕುಟುಂಬದಿಂದಲೇ ಮೂರ್ತಿ ಕೆತ್ತನೆಗೆ ಪೂಜಾ ಕಾರ್ಯಗಳನ್ನು ಮಾಡಿ ಚಾಲನೆ ನೀಡಲಾಗುವುದು’ ಎಂದು ಜಮೀನು ಮಾಲೀಕ ರಾಮದಾಸ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಇದನ್ನೂ ನೋಡಿ: ಜಯಂತಿಗಳಿಗೆ ಜಾತಿಮಿತಿ ಬಂದಿರುವ ಕಾಲ ಇದು – ಬರಗೂರು ರಾಮಚಂದ್ರಪ್ಪ Janashakthi Media