ಹಿಸಾರ್: ರೈತರನ್ನು ‘ನಿರುದ್ಯೋಗಿ ಮದ್ಯವ್ಯಸನಿಗಳು’ ಎಂದಿದ್ದ ಬಿಜೆಪಿ ರಾಜ್ಯಸಭಾ ಸದಸ್ಯ ರಾಮ್ ಚಂದರ್ ಜಂಗ್ರಾ ವಿರುದ್ದ ರೈತರು ಕಪ್ಪು ಬಾವುಟ ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದ್ದಾರೆ.
ಹರ್ಯಾಣಾದ ಹಿಸಾರ್ ಜಿಲ್ಲೆಯ ನಮೌಂದ್ ನಗರಕ್ಕೆ ಧರ್ಮಶಾಲೆಯೊಂದರ ಉದ್ಘಾಟನೆಗೆ ಆಗಮಿಸಿದಾಗ ರೈತರಿಂದ ಪ್ರತಿಭಟನೆಯನ್ನು ಎದುರಿಸಬೇಕಾಯಿತು.
ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಬ್ಯಾರಿಕೇಡ್ ಹಾಕಲಾಗಿತ್ತು. ಆದರೆ ಅಪಾರ ಪ್ರಮಾಣದಲ್ಲಿ ಆಗಮಿಸಿದ್ದ ರೈತರು ಜಂಗ್ರಾ ವಿರುದ್ಧ ಹಾಗೂ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವಲ್ಲಿ ಯಶಸ್ವಿಯಾದರು.
ನಂತರ ಪೊಲೀಸರು ಮತ್ತು ರೈತರ ನಡುವಿನ ಜಟಾಪಟಿಯಲ್ಲಿ ರಾಮ್ ಚಂದರ್ ಅವರ ಕಾರಿನ ಗಾಜು ಪುಡಿಯಾಗಿದೆ. ಅವರ ಈ ಹೇಳಿಕೆಗಳೇ ಇಂದಿನ ಪ್ರತಿಭಟನೆಗೆ ಕಾರಣವಾಗಿವೆ ಎನ್ನಲಾಗಿದೆ.
ಘಟನೆಯ ಹಿನ್ನಲೆ : ಗುರುವಾರ ರೋಹ್ಟಕ್‌ನಲ್ಲಿ ಗೋಶಾಲೆಯೊಂದರಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ರಾಮ್ ಚಂದರ್ ಅಲ್ಲಿಯೂ ರೈತರ ಪ್ರತಿಭಟನೆ ಎದುರಿಸಿದಾಗ ಪ್ರತಿಭಟನಾಕಾರರನ್ನು ‘ನಿರುದ್ಯೋಗಿ ಮದ್ಯವ್ಯಸನಿಗಳು’ ಎಂದು ಅವರು ಟೀಕಿಸಿದ್ದರಲ್ಲದೆ ಪ್ರತಿಭಟಿಸುತ್ತಿರುವವರಲ್ಲಿ ಯಾರೂ ರೈತರಲ್ಲ, ಇವರೆಲ್ಲಾ ಕೆಟ್ಟ ಶಕ್ತಿಗಳು ಅವರನ್ನು ಜನರೂ ವಿರೋಧಿಸುತ್ತಿದ್ದಾರೆ, ದಿಲ್ಲಿಯಲ್ಲಿ ನೋಡಿದಾಗ ಪ್ರತಿಭಟನಾ ಸ್ಥಳದಲ್ಲಿನ ಟೆಂಟುಗಳು ಖಾಲಿಯಾಗಿವೆ, ಈ ಸಮಸ್ಯೆ ಶೀಘ್ರ ಇತ್ಯರ್ಥಗೊಳ್ಳಲಿದೆ,” ಎಂದು ಅವರು ಹೇಳಿದ್ದರು. ಇದು ಪ್ರತಿಭಟನಾಕಾರರನ್ನು ಕೆರಳಿಸಿತ್ತು. ಹಾಗಾಗಿ ರಾಮ್ ಚಂದರ್ ವಿರುದ್ಧ ಸರಣಿ ಪ್ರತಿಭಟನೆ ನಡೆಸಲು ರೈತರು ಸಿದ್ದತೆ ನಡೆಸಿಕೊಂಡಿದ್ದರು. ಇವರ ವಿರುದ್ಧ ಪ್ರತಿಭಟನೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.