ಬೆಂಗಳೂರು: 2021ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ ಆಗಿದೆ. ‘777 ಚಾರ್ಲಿ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗೆ ರಕ್ಷಿತ್ ಶೆಟ್ಟಿ ಭಾಜನರಾಗಿದ್ದಾರೆ. ರಾಜ್ಯ
ಇನ್ನು ‘ಮ್ಯೂಟ್’ ಸಿನಿಮಾದ ಅಭಿನಯಕ್ಕಾಗಿ ಅರ್ಚನಾ ಜೋಯಿಸ್ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ದೊಡ್ಡಹಟ್ಟಿ ಬೋರೆಗೌಡ’ ಚಿತ್ರಕ್ಕೆ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದ್ದು, ‘777 ಚಾರ್ಲಿ’ ಸಿನಿಮಾ ‘2ನೇ ಅತ್ಯುತ್ತಮ ಚಿತ್ರ’ ಪ್ರಶಸ್ತಿಗೆ ಆಯ್ಕೆಯಾಗಿದೆ.
ಲೋಕೇಶ್ ಕೆ.ಎಂ ನಿರ್ಮಾಣ, ರಘು ಕೆ.ಎಂ. ನಿರ್ದೇಶನದಲ್ಲಿ ‘ದೊಡ್ಡಹಟ್ಟಿ ಬೋರೆಗೌಡ’ ಮೂಡಿಬಂದಿದೆ. ‘777 ಚಾರ್ಲಿ’ ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದು, ಕಿರಣ್ ರಾಜ್ ಕೆ. ನಿರ್ದೇಶಿಸಿದ್ದಾರೆ. ಹೃದಯಶಿವ ನಿರ್ದೇಶನ ಮಾಡಿದ ‘ಬಿಸಿಲು ಕುದುರೆ’ ಸಿನಿಮಾಗೆ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರು| ಅಕ್ಟೋಬರ್ 4ರಿಂದ ನಗರದಲ್ಲಿ ಜಾತಿಗಣತಿ ಸಮೀಕ್ಷೆ ಆರಂಭ; ಯಾವ ದಾಖಲೆಗಳು ಕಡ್ಡಾಯ?
‘ರತ್ನನ್ ಪ್ರಪಂಚ’ ಸಿನಿಮಾದ ಅಭಿನಯಕ್ಕಾಗಿ ಪ್ರಮೋದ್ ಅವರು ಅತ್ಯುತ್ತಮ ಪೋಷಕ ನಟ ಹಾಗೂ ಉಮಾಶ್ರೀ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಬಿಸಿಲು ಕುದುರೆ’ ಸಿನಿಮಾದ ಸಂಗೀತಕ್ಕಾಗಿ ಇಮ್ತಿಯಾಜ್ ಸುಲ್ತಾನ್ ಅವರಿಗೆ ‘ಅತ್ಯುತ್ತಮ ಸಂಗೀತ ನಿರ್ದೇಶನ’ ಪ್ರಶಸ್ತಿ ನೀಡಲಾಗಿದೆ. ‘ಕೇಕ್’ ಚಿತ್ರದ ನಟನೆಗೆ ಮಾಸ್ಟರ್ ಅತೀಶ್ ಶೆಟ್ಟಿಗೆ ಅತ್ಯುತ್ತಮ ಬಾಲನಟ ಪ್ರಶಸ್ತಿ ನೀಡಲಾಗಿದೆ. ‘ಭೈರವಿ’ ಸಿನಿಮಾದ ಅಭಿನಯಕ್ಕಾಗಿ ಬೇಬಿ ಭೈರವಿಗೆ ಅತ್ಯುತ್ತಮ ಬಾಲ ನಟಿ ಪ್ರಶಸ್ತಿ ನೀಡಲಾಗಿದೆ.
ವಿಶೇಷ ಸಾಮಾಜಿಕ ಕಳಕಳಿ ಚಿತ್ರ ಪ್ರಶಸ್ತಿಯನ್ನು ‘ಭಾರತದ ಪ್ರಜೆಗಳಾದ ನಾವು’ ಸಿನಿಮಾಗೆ ನೀಡಲಾಗಿದೆ. ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಚಿತ್ರಕ್ಕೆ ‘ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ’ ಪ್ರಶಸ್ತಿ ಘೋಷಿಸಲಾಗಿದೆ. ‘ಕೇಕ್’ ಸಿನಿಮಾಗೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಸಿಕ್ಕಿದೆ. ಶಂಕರ್ ಗುರು ಅವರಿಗೆ ‘ಬಡವ ರಾಸ್ಕಲ್’ ಚಿತ್ರಕ್ಕಾಗಿ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ ಪ್ರಶಸ್ತಿ ನೀಡಲಾಗಿದೆ.
ಕೊಡವ ಭಾಷೆಯ ‘ನಾಡ ಪೆದ ಆಶಾ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಭಾಷಾ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಯನ್ನು ಸಹನಾ ಎಂ. ಭಾರದ್ವಾಜ್ ಅವರಿಗೆ ನೀಡಲಾಗಿದೆ. ಅನೀಶ್ ಕೇಶವ ರಾವ್ ಅವರು ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ‘ಭಜರಂಗಿ 2’ ಸಿನಿಮಾಗಾಗಿ ರವಿ ಸಂತೇಹಕ್ಲು ಅವರು ‘ಅತ್ಯುತ್ತಮ ಕಲಾ ನಿರ್ದೇಶನ’ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಜಿಎಸ್ ಟಿ 1.O: ಲೂಟಿ ಉತ್ಸವ್, ಜಿಎಸ್ ಟಿ 2.O: ಜುಮ್ಲಾ ಉತ್ಸವ್ Janashakthi Media
