ನವದೆಹಲಿ: ಅಶೋಕ್ಗಸ್ತಿ ನಿಧನದಿಂದ ತೆರವಾಗಿರುವ ಒಂದು ರಾಜ್ಯಸಭಾ ಸ್ಥಾನದ ಚುನಾವಣೆಗೆ ಆರೆಸ್ಸೆಸ್ ಮೂಲದ ಡಾ. ಕೆ. ನಾರಾಯಣ್ ಅವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ.
ರಾಜ್ಯ ಬಿಜೆಪಿಯಿಂದ ಕಳುಹಿಸಲಾಗಿದ್ದ ಮೂರೂ ಹೆಸರನ್ನ ಹೈಕಮಾಂಡ್ ಕೈಬಿಟ್ಟು ಹೊಸಬರಿಗೆ ಮಣೆ ಹಾಕಿದೆ. ಕಳೆದ ಬಾರಿಯ ಎರಡು ಸ್ಥಾನಗಳ ರಾಜ್ಯಸಭಾ ಚುನಾವಣೆ ವೇಳೆಯಲ್ಲಿ ಮೂಡಿಸಿದಂತೆ ಈ ಬಾರಿಯೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ವರಿಷ್ಠರು ಅಚ್ಚರಿ ಮೂಡಿಸಿದ್ದಾರೆ.
ಮೃತ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ಅವರ ಪತ್ನಿ ಸುಮಾ ಗಸ್ತಿ, ಮಾಜಿ ವಿಧಾನಪರಿಷತ್ ಸದಸ್ಯ ಶಂಕರಪ್ಪ ಹಾಗೂ ಮಾಜಿ ಶಾಸಕ ನಿರ್ಮಲ್ ಸುರಾನಾ ಅವರ ಹೆಸರಿರುವ ಪಟ್ಟಿಯನ್ನು ರಾಜ್ಯ ಬಿಜೆಪಿಯಿಂದ ಹೈಕಮಾಂಡ್ಗೆ ಕಳುಹಿಸಲಾಗಿತ್ತು. ಆದರೆ, ಈ ಮೂರೂ ಹೆಸರನ್ನು ಹೈಕಮಾಂಡ್ ಕೈಬಿಟ್ಟು, ಮಂಗಳೂರು ಮೂಲದ ಡಾ. ಕೆ ನಾರಾಯಣ್ ಅವರಿಗೆ ಅಂತಿಮವಾಗಿ ಟಿಕೆಟ್ ನೀಡಿದೆ.
ಮಂಗಳೂರು ಮೂಲದ ಡಾ. ಕೆ ನಾರಾಯಣ್ ಅವರು ಬೆಂಗಳೂರಿನಲ್ಲಿ ಸ್ಪಾನ್ ಪ್ರಿಂಟ್ ಎಂಬ ಪ್ರಕಾಶನಾಲಯ ಹೊಂದಿದ್ದಾರೆ. 68 ವರ್ಷದ ನಾರಾಯಣ್ ಅವರು ದೇವಾಂಗ ಜನಾಂಗದವರಾಗಿದ್ದು ಆರೆಸ್ಸೆಸ್ ಮೂಲದವರೂ ಹೌದು. ಮುದ್ರಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು 1981ರಲ್ಲಿ ಜಪಾನ್ನಿಂದ ಮಲ್ಟಿ ಕಲರ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬೆಂಗಳೂರಿನಲ್ಲಿ ಮೊದಲಿಗೆ ಪರಿಚಯ ಮಾಡಿದವರು. ಇವರ ಸಂಸ್ಥೆ ಈ ಮುದ್ರಣ ಕ್ಷೇತ್ರದಲ್ಲಿ ಈಗ ಮುಂಚೂಣಿಯಲ್ಲಿದೆ. ಸಂಸ್ಕೃತ ಭಾಷೆಯ ಏಕೈಕ ಮಾಸಿಕ ಸಂಭಾಷಣಾ ಸಂದೇಶ ಪತ್ರಿಕೆಯನ್ನು ಮುದ್ರಿಸುತ್ತಿರುವುದು ಇವರ ಸಂಸ್ಥೆಯೇ.
ಹಿಂದೂ ಸೇವಾ ಪ್ರತಿಷ್ಠಾನ ಸೇರಿದಂತೆ ಸಂಘಪರಿವಾರದ ಅನೇಕ ಚಟುವಟಿಕೆಗಳಲ್ಲಿ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ತುಳು ಪತ್ರಿಕೆಯೊಂದಕ್ಕೆ ಸಂಪಾದಕರಾಗಿಯೂ ಇವರು ಕೆಲಸ ಮಾಡಿದ್ದಾರೆ.