ರಾಜ್ಯೋತ್ಸವ ವಿಶೇಷ: ವಿದ್ಯಾರ್ಥಿಗಳಿಗೆ ‘ಕನ್ನಡವನ್ನು ಬೆಳೆಸಲು ನಾನೇನು ಮಾಡುತ್ತೇನೆ?’ ಸ್ಪರ್ಧೆ

ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ‘ಕನ್ನಡಕ್ಕಾಗಿ ನಾವು’ ಅಭಿಯಾನ ಆಯೋಜನೆ ಮಾಡಿದೆ. ಈ ಅಭಿಯಾನದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸುಂದರ ಕನ್ನಡ ಕೈಬರಹದಲ್ಲಿ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ದೇಶದ ಯಾವುದೇ ಭಾಗದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಏಳನೆಯ ತರಗತಿವರೆಗಿನ ಒಂದು ವಿಭಾಗ, ಎಂಟರಿಂದ ದ್ವಿತೀಯ ಪಿಯುಸಿವರೆಗೆ ಒಂದು ವಿಭಾಗ, ಪದವಿ ಮತ್ತು ಸ್ನಾತಕೋತ್ತರ ಪದವಿವರೆಗೆ ವಿಭಾಗ ಎಂಬ ಮೂರು ವಿಭಾಗಗಳನ್ನು ವಿಂಗಡಿಸಲಾಗಿದೆ.

ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿಭಾಗದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿ ವಿವಿಧ ವೃತ್ತಿಪರ ಪದವಿಗಳೂ ಸೇರಿದಂತೆ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರತಿ ವಿಭಾಗದಲ್ಲೂ ಅತ್ಯುತ್ತಮ ಕನ್ನಡ ಕೈಬರಹದೊಂದಿಗೆ ವಿಚಾರಗಳನ್ನು ಮಂಡಿಸಿದ ಮೂವರು ವಿದ್ಯಾರ್ಥಿಗಳಿಗೆ, ಅಂದರೆ ಒಟ್ಟು ಒಂಬತ್ತು ವಿದ್ಯಾರ್ಥಿಗಳಿಗೆ ತಲಾ ₹ 5 ಸಾವಿರ ಬಹುಮಾನವಿರುತ್ತದೆ ಎಂದು ಪ್ರಾಧಿಕಾರ ಪ್ರಕಟಣೆ ನೀಡಿದೆ.

‘ಕನ್ನಡವನ್ನು ಬೆಳೆಸಲು ನಾನೇನು ಮಾಡುತ್ತೇನೆ?’ ಎಂಬ ವಿಷಯದ ಬಗ್ಗೆ ಎ4 ಹಾಳೆಯ ಒಂದು ಪುಟದಲ್ಲಿ ಸುಂದರ ಕೈಬರಹದಲ್ಲಿ ಬರೆದು ಕನ್ನಡದಲ್ಲಿ ಸಹಿ ಮಾಡಬೇಕು. ಅದೇ ಹಾಳೆಯ ಹಿಂದಿನ ಪುಟದಲ್ಲಿ ಸ್ಪರ್ಧಿಗಳು ತಮ್ಮ ಹೆಸರು, ತರಗತಿ ಮತ್ತು ತಾವು ಕಲಿಯುತ್ತಿರುವ ವಿದ್ಯಾಸಂಸ್ಥೆಯ ವಿಳಾಸ ಮತ್ತು ತಮ್ಮ ಅಥವಾ ಪೋಷಕರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಅದರ ಬಳಿಕ ವಿದ್ಯಾಸಂಸ್ಥೆಯ ಮುಖ್ಯಸ್ಥರ, ಸಹಿ, ಮೊಹರು ಮತ್ತು ದೂರವಾಣಿ ಸಂಖ್ಯೆ ಇರಬೇಕು.

ಸ್ಪರ್ಧಿಗಳು ತಮ್ಮ ಬರಹವನ್ನು ತ್ವರಿತ ಅಂಚೆ ಅಥವಾ ಕೊರಿಯರ್ ಮೂಲಕ ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ ಅಂಚೆ, ಬೆಂಗಳೂರು- 560 056. ಇಲ್ಲಿಗೆ ಕಳುಹಿಸಿಕೊಡಬೇಕು. ಲಕೋಟೆಯ ಹೊರಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿ ಸಹಿತ ವಿದ್ಯಾಸಂಸ್ಥೆಯ ವಿಳಾಸ ನಮೂದಿಸಬೇಕು. ಪ್ರವೇಶಿಕೆಗಳು ಮೇಲೆ ನೀಡಲಾದ ವಿಳಾಸಕ್ಕೆ ತಲುಪಲು ಕೊನೆಯ ದಿನಾಂಕ ಅಕ್ಟೋಬರ್ 29 ಕೊನೆಯ ದಿನ. ಹೊರರಾಜ್ಯಗಳಿಂದ ಬರುವ ಪ್ರವೇಶಿಕೆಗಳಿಗೆ ಅಕ್ಟೋಬರ್ 30 ಕೊನೆಯ ದಿನ. ಸಂಪರ್ಕ ಸಂಖ್ಯೆ 080 23183312.

Donate Janashakthi Media

Leave a Reply

Your email address will not be published. Required fields are marked *