ಬೆಂಗಳೂರು : ಘೋಷಣೆಯಾಗಿರುವ ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ 4 ಸ್ಥಾನಗಳಿಗೆ ಸಲ್ಲಿಕೆಯಾದ ನಾಮಪತ್ರಗಳಲ್ಲಿ ಯಾರೊಬ್ಬರೂ ಸ್ಪರ್ಧೆಯಿಂದ ಹಿಂದೆ ಸರಿಯದ ಹಿನ್ನೆಲೆಯಲ್ಲಿ ಜೂನ್ 10ರಂದು ಮತದಾನ ನಡೆಯಲಿದೆ. ಚುನಾವಣಾ ಕಣದಲ್ಲಿ ಆರು ಮಂದಿ ಸ್ಪರ್ಧೆಯಲ್ಲಿದ್ದಾರೆ.
ಚುನಾವಣಾಧಿಕಾರಿ ಎಂ.ಕೆ. ವಿಶಾಲಕ್ಷಿ ಅವರು ಹೇಳಿಕೆ ಬಿಡುಗಡೆಗೊಳಿಸಿದ್ದು, ರಾಜ್ಯಸಭಾ ಚುನಾವಣೆಗೆ ಆರು ನಾಮಪತ್ರ ಸಲ್ಲಿಕೆ ಆಗಿವೆ. ನಾಮಪತ್ರ ಹಿಂಪಡೆಯುವುದಕ್ಕೆ ಇಂದು ಕೂನೆ ದಿನ ಆಗಿತ್ತು. ಆದರೆ ಇಲ್ಲಿಯವರೆಗೆ ಯಾರೂ ನಾಮಪತ್ರ ವಾಪಸ್ಸು ಪಡೆದಿಲ್ಲ, ಚುನಾವಣೆ ನಡೆಯಲಿದೆ ಎಂದರು.
ಬಿಜೆಪಿ ಪಕ್ಷದಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್, ಕಾಂಗ್ರೆಸ್ ನ ಜೈರಾಂ ರಮೇಶ್, ಮನ್ಸೂರ್ ಅಲಿಖಾನ್ ಹಾಗೂ ಜೆಡಿಎಸ್ ನ ಕುಪ್ಪೇಂದ್ರ ರೆಡ್ಡಿ ಈಗ ಕಣದಲ್ಲಿ ಇದ್ದಾರೆ.
ಘೋಷಿತ ನಾಲ್ಕು ಸ್ಥಾನ ಗೆಲ್ಲಲು ವಿಧಾನಸಭೆ ಸದಸ್ಯರು ಮತದಾನ ಮಾಡಲಿದ್ದು, ಪ್ರತಿ ಅಭ್ಯರ್ಥಿಯು 45 ಮತ ಪಡೆಯಬೇಕು. ಅದರಂತೆ, ಪಕ್ಷವಾರು ವಿಧಾನಸಭಾ ಸದಸ್ಯರ ಲೆಕ್ಕಚಾರದಂತೆ ಬಿಜೆಪಿ 2 ಹಾಗೂ ಕಾಂಗ್ರೆಸ್ 1 ಸ್ಥಾನವನ್ನು ಅನಾಯಸವಾಗಿ ಗೆಲ್ಲಲಿದೆ.
ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯದ ಮತ ವಿಭಜನೆ ನಂತರ ಹೆಚ್ಚುವರಿಯಾಗಿ 32 ಮತಗಳು ಉಳಿಯಲಿದೆ. ಮೂರನೇ ಅಭ್ಯರ್ಥಿಯ ಗೆಲುವಿಗೆ ಇನ್ನೂ 13 ಮತಗಳ ಅಗತ್ಯತೆ ಇದೆ.
ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಜೈರಾಮ್ ರಮೇಶ್‌ಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿದ ಬಳಿಕ ಕಾಂಗ್ರೆಸ್ ಬಳಿ ಕೇವಲ 25 ಮತಗಳು ಉಳಿಯಲಿವೆ. ಎರಡನೇ ಅಭ್ಯರ್ಥಿ ಗೆಲುವಿಗೆ ಇನ್ನೂ 20 ಮತಗಳ ಅವಶ್ಯಕತೆ ಇದೆ.
ಕಾಂಗ್ರೆಸ್ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕೆ ಇಳಿಸಿದೆ. ಎಷ್ಟೇ ಒತ್ತಡ ಬಂದರೂ ನಾಮಪತ್ರ ವಾಪಾಸ್ಸು ಪಡೆಯದೆ ಜೆಡಿಎಸ್ ಗೆ ದೊಡ್ಡ ಪಾಠ ಕಲಿಸಲು ಮುಂದಾಗಿದೆ. ಎರಡನೇ ಅಭ್ಯರ್ಥಿಗೆ ಸೋಲು ಪಕ್ಕಾ ಎಂಬುದು ಗೊತ್ತಿದ್ದರೂ ಜೆಡಿಎಸ್ ಸೋಲಿಸಬೇಕೆಂಬುದು ಕಾಂಗ್ರೆಸ್ ನಾಯಕರದ್ದಾಗಿದೆ.
ಈ ನಡುವೆ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ಬೆಂಬಲವನ್ನು ನೀಡುವಂತೆ ಜೆಡಿಎಸ್ ನಾಯಕರು ಕಾಂಗ್ರೆಸ್ ಮುಖಂಡರ ಬಳಿ ಮನವಿ ಮಾಡಿದ್ದರು. ಅದು ಕೈಗೂಡಲಿಲ್ಲ. ಈ ನಡುವೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆಯಂತೆ ವಿಪ್ ಜಾರಿಗೊಳಿಸಲಾಗಿದ್ದು, ಕಡ್ಡಾಯವಾಗಿ ಮತದಾನಕ್ಕೆ ಹಾಜರಾಗಬೇಕೆಂದು ಸೂಚಿಸಿದೆ.
ಬಿಜೆಪಿ ಗೆಲ್ಲಿಸಲು ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡಿದೆ ಎಂದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಅವರನ್ನು ಗೆಲ್ಲಿಸಲು ಸಿದ್ದರಾಮಯ್ಯ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಅಡ್ಡ ಮತದಾನ ನಡೆಯುವ ಸಾಧ್ಯತೆಗಳಿದ್ದು, ನಾಲ್ಕನೇ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ನಾಲ್ಕನೇ ಸ್ಥಾನಕ್ಕೆ ಬಿಜೆಪಿಯ ಲೇಹರ್ ಸಿಂಗ್, ಕಾಂಗ್ರೆಸ್‌ನ ಮನ್ಸೂರ್ ಅಲಿಖಾನ್ ಅಥವಾ ಜೆಡಿಎಸ್ ಪಕ್ಷದ ಕುಪೇಂದ್ರ ರೆಡ್ಡಿ ಆಯ್ಕೆಯಾಗುತ್ತಾರೆ ಎಂಬುದು ಮತದಾನ ಫಲಿತಾಂಶ ಹೊರಬಿದ್ದ ಬಳಿಕ ತಿಳಿಯಲಿದೆ.
2022ರ ಜೂನ್ 10ರ ಶುಕ್ರವಾರದಂದು ವಿಧಾನಸೌಧದ ಮೊದಲನೆ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106 ರಲ್ಲಿ ಬೆಳಗ್ಗೆ 09 ರಿಂದ ಸಂಜೆ 04 ಗಂಟೆಯವರೆಗೆ ರಾಜ್ಯಸಭಾ ಸ್ಥಾನಕ್ಕೆ ಚುನಾವಣೆಯು ನಡೆಯಲಿದೆ.