ಬೆಂಗಳೂರು: ಈ ಭಾರಿಯ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಬಾಕಿ ಇದೆ. ಹೀಗಿರುವಾಗ ಭಾರತೀಯ ಜನತಾ ಪಾರ್ಟಿ ಟಿಕೆಟ್ ಯಾರಿಗೆ ನೀಡುತ್ತಾರೆ ಎಂಬ ಕುತೂಹಲಕ್ಕೆ ತೆರೆ ಇದೀಗ ನೀಡಲಾಗಿದೆ ಕರ್ನಾಟಕದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕನ್ನಡದ ಖ್ಯಾತ ನಟ ನವರಸ ನಾಯಕ ಜಗ್ಗೇಶ್ ಅವರಿಗೆ ರಾಜ್ಯಸಭಾ ಟಿಕೆಟ್ ಘೋಷಿಸಿದೆ.
ಭಾರತೀಯ ಜನತಾ ಪಕ್ಷವು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಕರ್ನಾಟಕವೂ ಸೇರಿದಂತೆ 15 ರಾಜ್ಯಗಳಲ್ಲಿನ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ನೇ ತಾರೀಕಿನಂದು ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯಲಿದೆ. ಹೀಗಾಗಿ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಜಗ್ಗೇಶ್ ಅವರನ್ನು ರಾಜ್ಯಸಭೆಯ ಅಭ್ಯರ್ಥಿಯನ್ನಾಗಿ ಪರಿಗಣಿಸುವಂತೆ ಶಿಫಾರಸ್ಸು ಮಾಡಿ ಕಳುಹಿಸಲಾಗಿತ್ತು ಎನ್ನಲಾಗಿದೆ.
ಉತ್ತರ ಪ್ರದೇಶವೊಂದರಲ್ಲೇ 11 ಸ್ಥಾನಗಳಿವೆ. ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಆರು ಸ್ಥಾನಗಳಿವೆ. ಬಿಹಾರದಲ್ಲಿ ಐದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ ನಾಲ್ಕು ಸ್ಥಾನಗಳು ತೆರವಾಗಿದ್ದು, ಚುನಾವಣೆ ನಡೆಯಲಿದೆ
ಕರ್ನಾಟಕದಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಕಾಂಗ್ರೆಸ್ಗೆ ಒಂದು ಸ್ಥಾನ ಗೆಲ್ಲುವ ಅವಕಾಶವಿದೆ. ಬಿಜೆಪಿಗೆ ಎರಡು ಸ್ಥಾನಗಳು ನಿಶ್ಚಿತವಾಗಿವೆ. ಇನ್ನೊಂದು ಸ್ಥಾನ ಮಾತ್ರ ಅತಂತ್ರ ಸ್ಥಿತಿಯಲ್ಲಿದೆ. ಜೆಡಿಎಸ್ ಬೆಂಬಲ ಇದ್ದವರಿಗೆ ಆ ಸ್ಥಾನ ಸಿಗಲಿದೆ. ಜೆಡಿಎಸ್ ಆ ಒಂದು ಸ್ಥಾನದ ನಿರೀಕ್ಷೆಯಲ್ಲಿದೆ. ಬಿಜೆಪಿ ಮೂರು ಅಭ್ಯರ್ಥಿಗಳನ್ನು ನಿಲ್ಲಿಸಿದರೆ ಜೆಡಿಎಸ್ಗೆ ಕಷ್ಟವಾಗುತ್ತದೆ. ಮೂರನೇ ಅಭ್ಯರ್ಥಿಯನ್ನು ನಿಲ್ಲಿಸಬೇಡಿ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಬಿಜೆಪಿಯ ವರಿಷ್ಠರನ್ನು ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಜೈರಾಮ್ ರಮೇಶ್ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ. ಇದು ಇಂದಿನ ಸಭೆಯಲ್ಲಿ ತೀರ್ಮಾನವಾಗಲಿದೆ.