ರಾಜ್ಯಪಾಲರಿಂದ ಸರ್ಕಾರಕ್ಕೆ ಬಹುಪರಾಕು

ಫೆಬ್ರುವರಿ 10 ರಂದು ನಡೆದ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರ ಥಾವರ್ ಚಂದ ಗೆಹಲೋತ್ ಮಾಡಿದ ಭಾಷಣವು ನಿರೀಕ್ಷೆಯಂತೆ ಬೊಮ್ಮಾಯಿ ಸರ್ಕಾರದ ಬೆನ್ನು ತಟ್ಟಲು, ಅದನ್ನು ಹಾಡಿ ಹೋಗಲು ಬಳಸಿಕೊಂಡದ್ದು ಸ್ಪಷ್ಟವಾಗಿತ್ತು. ‘ನಮಸ್ಕಾರ’ ಎಂದು ಕನ್ನಡದಲ್ಲಿ ತಮ್ಮ ಭಾಷಣವನ್ನು ಆರಂಭಿಸಿದ ಅವರು ಉಳಿದ 34 ಪುಟಗಳ ಭಾಷಣವನ್ನು ಹಿಂದಿಯಲ್ಲಿ ಓದಿ ಮುಗಿಸಲು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ತೆಗೆದುಕೊಂಡರು.

15ನೇ ವಿಧಾನ ಮಂಡಲದ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ ತೀರಾ ನಿರಸವಾಗಿತ್ತು. ಅದರಲ್ಲಿ ಯಾವ ಹೊಸ ಘೋಷಣೆ ಇರಲಿಲ್ಲ. ಯಾವುದೇ ವಿವಾಸ್ದದ ಅಂಶಗಳನ್ನು ಇತ್ಯರ್ಥ ಪಡಿಸುವ ಉದ್ದೇಶವನ್ನು ಪ್ರಸ್ತಾಪಿಸಲಾಗಿರಲಿಲ್ಲ. ಕೇವಲ ಸರ್ಕಾರದ ಯೋಜನೆಗಳನ್ನು ಪ್ರಸಂಶಿಸಿ ಪ್ರಗತಿಯ ವರದಿಯನ್ನು ನೀಡುವುದಕಷ್ಟೇ ಸೀಮಿತವಾಗಿತ್ತು. ನಾಡಿನ ಜನರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಯಾವ ಪ್ರಸ್ತಾಪವೂ ಅದು ಒಳಗೊಂಡಿರಲಿಲ್ಲ. ರೈತರು, ಕಾರ್ಮಿಕರು, ಬಡವರು, ದುರ್ಬಲ ವರ್ಗಕ್ಕೆ ಸೇರಿದವರ ಕಲ್ಯಾಣಕ್ಕೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ರಾಜ್ಯಪಾಲರು ಪರೋಕ್ಷವಾಗಿ ಕಳೆದ 4 ವರ್ಷಗಳಲ್ಲಿ ಭ್ರಷ್ಟಾಚಾರ ಹಾಗೂ ಕೋಮು ಸಂಘರ್ಷವನ್ನು ಬಿಟ್ಟರೆ ಬೇರೆ ಏನನ್ನು ಮಾಡಲಾಗಿಲ್ಲ ಎಂದು ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಇದನ್ನು ಓದಿ: ವಿಶ್ವದೆಲ್ಲೆಡೆ ನಿರ್ದಯ ಲೂಟಿಗೆ ವಿಧ-ವಿಧ ಪರಿಕಲ್ಪನೆ

ರಾಜ್ಯಪಾಲರ ಭಾಷಣದೊಂದಿಗೆ ಆರಂಭವಾದ 11 ದಿನಗಳ ಬಜೆಟ್ ಅಧಿವೇಶನದ 4 ದಿನಗಳ ಕಾಲ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯಲಿದೆ. ಫೆಬ್ರುವರಿ 17 ರಂದು ರ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಭಾಷಣದ ಅಂಶಗಳು ತೀವ್ರ ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ. ಸರ್ಕಾರದ ಸಾಧನೆಯನ್ನೇ ರಾಜ್ಯಪಾಲರು ಬಣ್ಣಿಸಿದಂತಿತ್ತು. ರಾಜ್ಯದ ಅಭಿವೃದ್ಧಿಗೆ ಸರ್ಕಾರದ ಬಳಿ ಯಾವ ದೂರ ದೃಷ್ಟಿಯೂ ಇರಲಿಲ್ಲ ಎಂದು ಚರ್ಚೆಯಲ್ಲಿ ಬಯಲಿಗೆ ಬರಲಿದೆ. ಭಾಷಣದಲ್ಲಿನ ಅಂಕಿ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂಬುವುದು ಬಯಲಾಗಲಿದೆ. ಸುಳ್ಳುಗಳನ್ನು ಸತ್ಯ ಎಂದು ರಾಜ್ಯಪಾಲರ ಮೂಲಕ ಹೇಳಲು ಪ್ರಯತ್ನಪಟ್ಟದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಭ್ರಷ್ಟಾಚಾರದ ವಿಷಯದಲ್ಲಿ ರಾಜ್ಯಪಾಲರು ಸರ್ಕಾರದ ಕಿವಿ ಹಿಂಡಿ ಬುದ್ಧಿ ಹೇಳಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರದ ರಬ್ಬರ್ ಸ್ಟಾಂಪ್ ಆಗಿರುವ ರಾಜ್ಯಪಾಲರು ಭ್ರಷ್ಟಾಚಾರಕ್ಕೆ ಕುಮಕ್ಕು ನೀಡಿದಂತಾಗಿದೆ.

ಇತ್ತೀಚಿಗೆ ಕರಾವಳಿ ಜಿಲ್ಲೆಗಳಲ್ಲಿ, ಅಲ್ಲದೆ ಕೊಡಗು, ಹುಬ್ಬಳ್ಳಿ ಮೊದಲಾದ ಕಡೆ ಹಿಂದುತ್ವ ಪಡೆಗಳು ಭಯಾನಕ ಪರಿಸ್ಥಿತಿಯನ್ನು ಸೃಷ್ಟಿಸುತ್ತಿವೆ. ಅಮಾಯಕರನ್ನು ಕೊಲ್ಲಲಾಗುತ್ತದೆ. ಆದರೆ ಈ ಆತಂಕದ ಬೆಳವಣಿಗೆ ನಮ್ಮ ರಾಜ್ಯಪಾಲರನ್ನು ಕಾಡುತ್ತಿಲ್ಲ. ಈ ಕ್ರೂರ ಶಕ್ತಿಗಳ ವಿರುದ್ಧ ರಾಜ್ಯಪಾಲರು ಧ್ವನಿ ಎತ್ತುವುದಿಲ್ಲ. ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಎಚ್ಚರಿಕೆ ನೀಡುವುದಿಲ್ಲ.

ಇದನ್ನು ಓದಿ: ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ; ಸರ್ಕಾರದ ಕಾರ್ಯಗಳ ವರದಿ ಮಂಡನೆ

ಕರ್ನಾಟಕವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಮುಂಚೂಣಿ ರಾಜ್ಯ ಎಂದು ರಾಜ್ಯಪಾಲರು ಬೊಮ್ಮಾಯಿ ಸರ್ಕಾರವನ್ನು ಹಾಡಿ ಹೊಗಳುತ್ತಿರುವುದು ಖೇದದ ಸಂಗತಿಯಾಗಿದೆ. ಶಾಂತಿ ಸೌಹಾರ್ದತೆ ಇಲ್ಲದ ಒಂದು ಸಮಾಜ ಪ್ರಗತಿ ಪಥದಲ್ಲಿ ಸಾಗುವುದು ಹೇಗೆ ಸಾಧ್ಯ? ಕಾರ್ಪೊರೇಟ್ ಕಂಪನಿಗಳ ಅಧಿಪತ್ಯವನ್ನು ಬೆಳೆಸಲು ಬದ್ಧವಾಗಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನರನ್ನು ಒಡೆದ ಆಳುವ ನೀತಿಯನ್ನು ಜಾರಿಗೆ ತರಲು ಅಷ್ಟೇ ಬದ್ಧವಾಗಿದೆ. ಇಂತಹ ಸರ್ಕಾರ ಬೀಸುವ ಮೋಸದ ಬಲೆಗೆ ನಮ್ಮ ಜನ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರ ವಹಿಸಬೇಕಾಗಿರುವುದು ಸಮಯದ ಕರೆ. ಬಜೆಟ್ ಭರವಸೆಗಳು ನಮ್ಮನ್ನು ದಾರಿ ತಪ್ಪಿಸದಂತೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

Donate Janashakthi Media

Leave a Reply

Your email address will not be published. Required fields are marked *