ಬೆಂಗಳೂರು: ರಾಜ್ಯಪಾಲ ಹುದ್ದೆ ಪಡೆಯಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ವಂಚಕ ಯುವರಾಜ್ ಸ್ವಾಮಿಗೆ ಲಂಚ ನೀಡಿದ್ದಾರೆಂಬ ವಿಷಯವು ನಿಜಕ್ಕೂ ದುರದೃಷ್ಟಕರ ಎಂದು ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ.
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ರಾಜ್ಯಪಾಲರಾಗಲು ಮಧ್ಯವರ್ತಿಯಾದ ಜ್ಯೋತಿಷಿಗೆ ಲಂಚ ನೀಡಿರುವುದು ನ್ಯಾಯಾಧೀಶರು ಮತ್ತು ರಾಜ್ಯಪಾಲರ ಹುದ್ದೆಯ ಘನತೆಯನ್ನು ಕುಗ್ಗಿಸಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಇದನ್ನು ಓದಿ: ನೆಗಟಿವ್ ವರದಿ ಬಂದು ಕೋವಿಡ್ ರೋಗ ಲಕ್ಷಣವಿದ್ದರೂ ಆಸ್ಪತ್ರೆಗೆ ದಾಖಲು: ಸಚಿವ ಡಾ. ಕೆ.ಸುಧಾಕರ್
ಯುವರಾಜ್ ವರ್ಸಸ್ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ನ್ಯಾಯಮೂರ್ತಿಯಾದ ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ರಾಜಕಾರಣಿಗಳು, ಉದ್ಯಮಿಗಳು ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ಹಲವರು ವಂಚನೆಗೊಳಗಾಗಿದ್ದಾರೆ. ಈ ಪ್ರಕರಣದ ಆರೋಪಿಗೆ ಯುವರಾಜ್ ಸ್ವಾಮಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಉದ್ಯಮಿ ಸುರೇಂದ್ರ ರೆಡ್ಡಿ ಎಂಬುವರಿಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಒಂದು ಕೋಟಿ ರೂ.ಗಳ ಲಂಚ ಪಡೆದ ಯುವರಾಜ್ ಸ್ವಾಮಿ ಸೇರಿ ಒಟ್ಟು ಆರು ವಂಚನೆ ಪ್ರಕರಣಗಳಲ್ಲಿ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳಿಸಿದ ವೇಳೆ ನ್ಯಾ.ಕೆ. ನಟರಾಜನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಗುಂಪಿನ ಸದಸ್ಯ ಮಾಡಿದ ಪೋಸ್ಟ್‌ಗೆ ವಾಟ್ಸಾಪ್ ಗುಂಪಿನ ನಿರ್ವಾಹಕನನ್ನು ಹೊಣೆಗಾರರನ್ನಾಗಿ ಮಾಡಲಾಗದು: ಬಾಂಬೆ ಹೈಕೋರ್ಟ್
ಕೇಂದ್ರದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಿವೃತ್ತ ನ್ಯಾಯಾಧೀಶರ ಬಳಿ ಸುಮಾರು 8.8 ಕೋಟಿ ಹಣ ಪಡೆದಿರುವ ಬಗ್ಗೆ ನಿವೃತ್ತ ನ್ಯಾಯಾಧೀಶರು ಈ ಹಿಂದೆ ಹೇಳಿಕೆ ನೀಡಿದ್ದರು. ಈ ಬಗ್ಗೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಪೊಲೀಸ್ ಆಧಿಕಾರಿಯೊಬ್ಬರ ಮೂಲಕ ಯುವರಾಜ್ ನನಗೆ ಪರಿಚಯವಾಗಿದ್ದು, ಬಿಜೆಪಿ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ಯುವರಾಜ್ ನನಗೆ ನಂಬಿಸಿದ್ದಾನೆ ಎಂದು ಆ ನಿವೃತ್ತ ನ್ಯಾಯಾಧೀಶರು ಸಿಸಿಬಿಗೆ ಹೇಳಿಕೆ ನೀಡಿದ್ದರು.
ಯುವರಾಜ್ ಸ್ವಾಮಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ಬೆಂಗಳೂರಿನ ಹೈಗ್ರೌಂಡ್ ಮತ್ತು ಜ್ಞಾನಭಾರತಿ ಪೊಲೀಸ್ ಠಾಣೆಯ ಸೈಬರ್ ಅಪರಾಧ ವಿಭಾಗದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಇದನ್ನು ಓದಿ : ರೆಮ್ಡೆಸಿವಿರ್ ಚುಚ್ಚುಮದ್ದಿನ ಹಾಹಾಕಾರದ ಹಿಂದಿರುವ ಷಡ್ಯಂತ್ರವೇನು?
ಅಲ್ಲದೆ, ಆರೋಪಿಯು ಪ್ರಭಾವಿಗಳೊಂದಿಗೆ ಸಂಪರ್ಕ ಇದ್ದು, ಹಣ ಪಡೆದು ಕೆಲಸ ಕೊಡಿಸುವ ಬಗ್ಗೆ ಯಾರಿಗೆ ಲಂಚ ನೀಡಿದ್ದಾರೆ ಎಂಬ ಅಂಶವನ್ನು ತಿಳಿಸಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆರೋಪಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಟೋನಿ ಸೆಬಾಸ್ಟಿಯನ್, ಆರೋಪಿಯ ಮೇಲೆ ಪೊಲೀಸರು ಇಲ್ಲಸಲ್ಲದ ಆರೋಪ ಹೋರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಜಾಮೀನು ನಿರಾಕರಿಸಿದ ನ್ಯಾ. ನಟರಾಜನ್ ಅವರು ವಿದ್ಯಾವಂತರು ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗೆ ವಂಚಿಸುವ ಮೂಲಕ ಆರೋಪಿಯು ಗಂಭೀರ ಅಪರಾಧ ಎಸಗಿದ್ದಾನೆ. ಆರೋಪಿಯು ಪ್ರಭಾವಶಾಲಿ ವ್ಯಕ್ತಿಯಾಗಿದ್ದು ಜಾಮೀನು ನೀಡಿದರೆ ಪ್ರಕರಣದ ತನಿಖೆಯ ದಾರಿ ತಪ್ಪಿಸುವ ಸಾಧ್ಯತೆಯೂ ಇದೆ ಎಂದು ನ್ಯಾಯಾಲಯ ಹೇಳಿದೆ.