ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ʻ108 ಆ್ಯಂಬುಲೆನ್ಸ್ ಸೇವೆʼಯಲ್ಲಿರುವ ಸಿಬ್ಬಂದಿಗಳಿಗೆ ವೇತನ ನೀಡಲು ಜಿವಿಕೆ ಸಂಸ್ಥೆಯು ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ(ನವೆಂಬರ್ 17)ದಿಂದ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದಾರೆ ಸಿಬ್ಬಂದಿಗಳು.
ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಮಂದಿ ಸಿಬ್ಬಂದಿ 108 ಆ್ಯಂಬುಲೆನ್ಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸುಮಾರು 750 ಆ್ಯಂಬುಲೆನ್ಸ್ ವಾಹನಗಳಿವೆ. ಜಿವಿಕೆ ಸಂಸ್ಥೆಯು ತನ್ನ ಸಿಬ್ಬಂದಿಗಳಿಗೆ ಕಳೆದ ಹಲವು ತಿಂಗಳುಗಳಿಂದ ವೇತನ ನೀಡಲು ಸತಾಯಿಸುತ್ತಿದೆ ಎಂಬುದು ಸಿಬ್ಬಂದಿಗಳ ಆರೋಪ.
ಕೆಲ ದಿನಗಳ ಹಿಂದೆ, ಸರ್ಕಾರ ಜಿವಿಕೆ ಸಂಸ್ಥೆಯವರೊಂದಿಗೆ ಮಾತುಕತೆ ನಡೆಸಿ ಸಿಬ್ಬಂದಿಗೆ ಕೂಡಲೇ ಮೂರು ತಿಂಗಳ ವೇತನ ಬಿಡುಗಡೆ ಮಾಡುವಂತೆ ಸೂಚನೆ ನೀಡಿತ್ತು. ಹದಿನೈದು ದಿನಗಳ ಹಿಂದೆ ನಡೆದ ಸಭೆಯಲ್ಲಿ ಸಂಬಳ ನೀಡಲು ಆರೋಗ್ಯ ಇಲಾಖೆ ಅಯುಕ್ತ ರಂದೀಪ್ ಸೂಚಿಸಿದ್ದರು. ಆಯುಕ್ತರ ಸೂಚನೆಗೂ ಸರಿಯಾದ ಸ್ಪಂದಿಸದ ಸಂಸ್ಥೆಯು ಕೇವಲ ಒಂದು ತಿಂಗಳ ವೇತನ ಮಾತ್ರ ಪಾವತಿ ಮಾಡಿದೆ. ಉಳಿದ ವೇತನ ಬಿಡುಗಡೆ ಮಾಡದೆ ಸಿಬ್ಬಂದಿಗಳ ಬದುಕಿನೊಂದಿಗೆ ಜಿವಿಕೆ ಸಂಸ್ಥೆ ಚೆಲ್ಲಾಟವಾಡುತ್ತಿದೆ ಎಂದು ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಳೆ ಸಂಜೆ ವೇಳೆಗೆ ಬಾಕಿ ಇರುವ ಮೂರು ತಿಂಗಳ ವೇತನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಗುರುವಾರದಿಂದ ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಆ್ಯಂಬುಲೆನ್ಸ್ ನೌಕರರ ಸಂಘದ ಕಾರ್ಯದರ್ಶಿ ಪರಮಶಿವಯ್ಯ ಎಚ್ಚರಿಕೆ ನೀಡಿದ್ದಾರೆ. ಆ್ಯಂಬುಲೆನ್ಸ್ ಸೇವೆ ಸ್ಥಗಿತಗೊಂಡಲ್ಲಿ, ಆಸ್ಪತ್ರೆಗಳಲ್ಲಿ ಸಾಕಷ್ಟು ಎದುರಾಗುವ ಸಾಧ್ಯತೆಗಳಿವೆ.