ರಾಜ್ಯದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ: ಡಿ.ಕೆ. ಶಿವಕುಮಾರ್

ಬೆಂಗಳೂರು; ಜ, 04, :  ‘ರಾಜ್ಯದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ. ಕೊರೋನಾ ಸಮಯದಲ್ಲಿ ಸರ್ಕಾರವೇ ಲಾಕ್ ಡೌನ್, ಸೀಲ್ ಡೌನ್ ಮಾಡಿ ಈಗ ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಕೊರೋನಾ ಮತ್ತು ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ರಾಜ್ಯ ಸರಕಾರವು ಜನರ ಮೇಲೆ ನಾನಾ ತೆರಿಗೆ ವಿಧಿಸಿರುವುದನ್ನು ಖಂಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೋಮವಾರ ಪ್ರತಿಭಟನೆ ನಡೆಸಿತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿಕೆಶಿ ‘ಈ ವರ್ಷವನ್ನು ಎಲ್ಲ ಕ್ಷೇತ್ರಗಳ ಸ್ಥಳೀಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೋರಾಟ ಹಾಗೂ ಸಂಘಟನೆ ವರ್ಷವಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ರಾಜ್ಯದ ಸಮಸ್ಯೆ ಬೇರೆ. ಸ್ಥಳೀಯ ಸಮಸ್ಯೆಗಳೇ ಬೇರೆ.

ಕೊರೋನಾದಿಂದಾಗಿ ಜನ ತತ್ತರಿಸಿದ್ದಾರೆ. ವ್ಯಾಪಾರ ವಹಿವಾಟು ಇಲ್ಲ. ಆದರೂ ಪಾಲಿಕೆ ಹೆಚ್ಚಿನ ತೆರೆಗೆ ಹಾಕಿದೆ. ನಾವು ತೆರಿಗೆ ಮನ್ನಾ ಮಾಡಿ ಎಂದು ಆಗ್ರಹಿಸಿದರೆ, ಇವರು ಹೆಚ್ಚು ಮಾಡುತ್ತಿದ್ದಾರೆ.

ಹೈದರಾಬಾದ್ ನಲ್ಲಿ ಶೇ.50ರಷ್ಟು ಕಡಿಮೆ ಮಾಡಿದ್ದು, ನಾವು ಇಲ್ಲಿ ಪೂರ್ಣ ಪ್ರಮಾಣದಲ್ಲಿ ಎಂದು ಹೇಳಿದ್ದೆವು. ಲಾಕ್ ಡೌನ್, ಸೀಲ್ ಡೌನ್ ಎಲ್ಲವನ್ನು ಮಾಡಿದ್ದು ಸರ್ಕಾರವೇ. ಇಲ್ಲಿ ಜನರ ತಪ್ಪಿಲ್ಲ. ಯಾರಿಗೂ ವ್ಯಾಪಾರ ಇಲ್ಲದೆ ಆದಾಯವಿಲ್ಲ. ಈ ಸಮಯದಲ್ಲಿ ತೆರಿಗೆ ಹೆಚ್ಚಿಸಿದ್ದಾರೆ.

ಕೊರೋನಾ ಸಮಯದಲ್ಲಿ ಸೋಂಕಿತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಈ ಅವಧಿಯಲ್ಲಿ ಒಂದು ಕೆಲಸವೂ ಆಗಿಲ್ಲ. ಅನೇಕ ಗುತ್ತಿಗೆದಾರರು ಬಿಲ್ ಬಾಕಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮನೆ ಕಟ್ಟುವ ಯೋಜನೆ ಶುಲ್ಕವನ್ನು 3 ಪಟ್ಟು ಹೆಚ್ಚಿಸಲಾಗಿದ್ದು ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ.

ಕಸ ವಿಲೇವಾರಿ ವಿಚಾರ. ನಮ್ಮ ಸರ್ಕಾರ ಇದ್ದಾಗ ಮಾತನಾಡುತ್ತಿದ್ದವರು ಈಗೇನು ಮಾಡುತ್ತಿದ್ದೀರಿ. ರಸ್ತೆಗಳಲ್ಲಿ ಕಸ ತುಂಬಿ ತುಳುಕುತ್ತಿದೆ. ಇದು ಪಕ್ಷದ ವಿಚಾರ ಅಲ್ಲ. ನಾಕರೀಕರ ಬದುಕಿನ ವಿಚಾರ. ಸರ್ಕಾರ ಕಸ ವಿಲೇವಾರಿ ಸರಿಯಾಗಿ ಮಾಡುತ್ತಿಲ್ಲ. ಕೇವಲ ಜಾಹೀರಾತು ಮೂಲಕ ಪ್ರಚಾರ ಪಡೆಯುತ್ತಿದ್ದೀರಿ.

ಸರ್ಕಾರಕ್ಕೆ ನಗರ ಪಾಲಿಕೆ ಚುನಾವಣೆ ಮಾಡಲು, ನಾಗರೀಕರ ಸಮಸ್ಯೆ ಕೇಳುವ ಮನಸ್ಥಿತಿ ಇಲ್ಲ. ಹೀಗಾಗಿ ನಾವು ಇಂದು ನಮ್ಮ ಬೇಡಿಕೆಗಳನ್ನು ನಿಮ್ಮ ಮುಂದಿಟ್ಟು ಹೋರಾಟ ಮಾಡಲು ಬಂದಿದ್ದೇವೆ.

ಬೀದಿ ವ್ಯಾಪಾರಿಗಳಿಗೆ, ಅಸಂಘಟಿತ ಕಾರ್ಮಿಕರು, ಸಾಂಪ್ರದಾಯಿಕ ವೃತ್ತಿ ಮಾಡುತ್ತಿರುವವರಿಗೆ 5 ಸಾವಿರ ನೀಡುವುದಾಗಿ ತಿಳಿಸಿದ್ದಿರಿ. ಅವರಿಗೆ ಕೇವಲ ಒಂದು ತಿಂಗಳಲ್ಲ. ಕನಿಷ್ಠ 6 ತಿಂಗಳು ಅವರಿಗೆ ನೀಡಬೇಕು.

ಮೊನ್ನೆ ರಾತ್ರೋರಾತ್ರಿ ಕರ್ಫ್ಯು ಮಾಡಲು ಹೊರಟಿದ್ದಿರಿ. ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಇದನ್ನು ಪ್ರತಿಭಟಿಸಿ, ಜನರ ಧ್ವನಿಯಾಗಿ, ಜನರ ಭಾವನೆ ನಿಮಗೆ ತಿಳಿಸಲು ಇಂದು ನಿಮ್ಮ ಬಾಗಿಲಿಗೆ ಬಂದಿದ್ದೇವೆ. ಈ ವಿಚಾರದಲ್ಲಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತೆರಿಗೆ ಮನ್ನಾ ಮಾಡಿ ನಮ್ಮ ಬೇಡಿಕೆ ಈಡೇರಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ.’

ಪ್ರತಿಭಟನೆಯಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡುತ್ತ ಬಿಜೆಪಿ ಈ‌ ಹಿಂದೆ ಅಧಿಕಾರದಲ್ಲಿ ಇದ್ದಾಗ ಒಂದು‌ ಕೋಟಿ‌ ಆಸ್ತಿ ಅಡ ಇಟ್ಟಿದೆ, ಕೋವಿಡ್ ಸಂದರ್ಭದಲ್ಲಿ ಜನರ ಮೇಲೆ‌ ತೆರೆಗೆ ವಿಧಿಸಿದೆ. ಸ್ವಚ್ಚ ಬೆಂಗಳೂರು ಅಂತ ಹಣ ಬಿಡುಗಡೆ ಮಾಡ್ತು ಆದರೆ ಎಲ್ಲಿ ನೋಡಿದ್ರು ಕಸ ಕಾಣುತ್ತಿದೆ. ಟೆಂಡರು ದಾರರಿಗೆ ಹಣ ಪಾವತಿ‌ ಮಾಡಿಲ್ಲ.

ನಮ್ಮ ಸರ್ಕಾರ ಜಾರಿಗೆ ತಂದ ಇಂದಿಗಾಂಧಿ ಹೆಸರಿನಲ್ಲಿ‌ ಬಡವರು  ಊಟ ಮಾಡ್ತಾ ಇದ್ದಾರೆ. ಹತ್ತು ರುಪಾಯಿಗೆ ನಗರದಲ್ಲಿ ಊಟ‌ ಸಿಗೋ ಯೋಜನೆ‌ ಅದು. ಆದ್ರೆ ಬಿಜೆಪಿ ಯವರಿ ಇಂದಿರಾ ಗಾಂದಿ ಹೆಸರು‌ಹಿಟ್ಟಿದೆ ಅವರಿಗೆ ಹೊಟ್ಟೆ ಉರಿ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಶಾಸಕ ರಿಜ್ವಾನ್ ಅರ್ಶದ್, ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್, ಡಿಸಿಸಿ ಅಧ್ಯಕ್ಷರಾದ ಕೃಷ್ಣಪ್ಪ, ರಾಜಕುಮಾರ್ ಮತ್ತಿತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *