ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಧಿಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಸೇರಿದಂತೆ ಸರಿಸುಮಾರು 15 ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣವಿದೆ. ಮುಂದಿನ ನಾಲ್ಕು ದಿನಗಳು ರಾಜ್ಯದ ಹಲವು ಕಡೆಗಳಲ್ಲಿ ಮಳೆ ಸುರಿಯಲಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಕೆಲವು ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅಲ್ಲಿನ ಪರಿಸ್ಥಿತಿ ನೋಡಿಕೊಂಡು ಮುಂಜಾಗ್ರತೆ ಕ್ರಮವಾಗಿ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ದಿನಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಎನ್.ಆರ್ ಪುರ, ಕೊಪ್ಪ, ಶೃಂಗೇರಿ ಹಾಗೂ ಚಿಕ್ಕಮಗಳೂರು(ಲಕ್ಯಾ, ಅಂಬಳೆ ಹೋಬಳಿ ಹೊರತು ಪಡಿಸಿ) ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜುಲೈ 6ರಿಂದ ಜುಲೈ9ರ ತನಕ ರಜೆ ನೀಡಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಲವೆಡೆ ಭೂಕುಸಿತ ಉಂಟಾಗಿದೆ. ಮರಗಳು ಧರೆಗುರುಳಿವೆ. ರಸ್ತೆ, ಮನೆಗಳ ಮುಂದೆ ಪ್ರವಾಹ ಸ್ಥಿತಿ ಎದುರಾಗಿದೆ ಎಂದಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಜಿಲ್ಲೆಯ ಎಲ್ಲಾ ಅಂಗನವಾಡಿಗಳು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಮಂಗಳೂರಿನ ಗುರುಪುರ ಹೆದ್ದಾರಿ ಬಳಿ ಭಾರೀ ಭೂಕುಸಿತ ಉಂಟಾಗಿದ್ದು, ಒಂದು ಬದಿಯ ಸಂಚಾರ ನಿರ್ಬಂಧಿಸಲಾಗಿದೆ. ಬದಲಿ ಸಂಚಾರದ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಲಾಗಿದೆ. ಮಾಜಿ ಶಾಸಕ ಮೌವುದ್ದಿನ್ ಬಾವಾ ಗುರುಪುರ-ಆದ್ಯಪಾಡಿ ರಸ್ತೆಗೆ ಭೂಕುಸಿತ ಉಂಟಾದ ಹಿನ್ನೆಲೆಯಲ್ಲಿ ಭೇಟಿ ನೀಡಿ, ಸುತ್ತಮುತ್ತಲಿನ ಸುಮಾರು 800 ಕುಟುಂಬಗಳಿಗೆ ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲು ಜಿಲ್ಲಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಭಾರೀ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಕರಾವಳಿ ಭಾಗದ ಇನೊಲಿ, ಪವೂರು, ಹರೆಕಲ ಪ್ರದೇಶಗಳು ಮುಳುಗಡೆಯಾಗಿವೆ. ಕೃಷಿ ಭೂಮಿಯೂ ನೀರಿನಿಂದ ಆವರಿಸಿದೆ. ಈ ಮಧ್ಯೆ, ಹರೆಕಲದಿಂದ ಅಡ್ಯರ್ ವರೆಗೆ ದೋಣಿ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಬಂಟ್ವಾಳದಲ್ಲಿ ವಿದ್ಯುತ್ ಕಂಬ ಧರೆಗುರುಳಿದೆ. ಕುಡ್ತಮುಗೇರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮಳೆ ಆರ್ಭಟದಿಂದಾಗಿ, ರೈಲು ಮಾರ್ಗದ ಕುಲೇಂ ನಿಲ್ದಾಣದ ಬಳಿ ರೈಲು ಹಳಿಯ ಮೇಲೆ ಮರವೊಂದು ಬಿದ್ದ ಪರಿಣಾಮ ಲೋಂಡಾ-ಮಡಗಾಂವ ನಿಲ್ದಾಣಗಳ ನಡುವೆ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ.
ಕರ್ನಾಟಕದ ಕರಾವಳಿಯಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹೇಳಿರುವ ಹವಾಮಾನ ಇಲಾಖೆಯು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಿದೆ.
ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದ್ದು ಕೃಷಿ ಚಟುವಟಿಕೆಗಳು ಸರಾಗವಾಗಿ ಮುಂದುವರೆದಿದೆ. ಬಳ್ಳಾರಿ, ಕೊಪ್ಪಳ ಜಿಲ್ಲೆಯಲ್ಲೂ ಸಾಧಾರಣ ಮಳೆಯಾಗಿದೆ ಹಾಗೂ ರೈತರಲ್ಲಿ ಸಂತಸ ತಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಗೆ ಜೋಗ ಜಲಪಾತದ ವೈಭವವೂ ಮರುಕಳಿಸಿದ್ದು, ಪ್ರವಾಸಿಗರು ದೊಡ್ಡ ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ.
ಉಡುಪಿ ನಗರದಲ್ಲೂ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನಾಪೋಕ್ಲು- ಭಾಗಮಂಡಲ, ಮಡಿಕೇರಿ – ಭಾಗಮಂಡಲ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಬೋಟ್‌ನ ಸಹಾಯದ ಮೂಲಕ ಸಾರ್ವಜನಿಕರನ್ನು ಸ್ಥಳಂತರಿಸಲಾಗುತ್ತಿದೆ. ದಾವಣಗೆರೆಯಲ್ಲೂ ಮಳೆಗೆ 10 ಮನೆಗಳಿಗೆ ಹಾನಿಯಾಗಿದೆ.
ಕೇರಳ-ಕರ್ನಾಟಕ ಗಡಿ ಭಾಗವಾದ ವಿಟ್ಲ-ಪೆರ್ಲ ರಸ್ತೆಯ ಸಾರಡ್ಕದಲ್ಲಿ ಭೂಕುಸಿತ ಉಂಟಾಗಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಕೂಡ ಮಳೆಯ ಆರ್ಭಟ ಮುಂದುವರಿದಿದೆ.
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮಧ್ಯ ಕರ್ನಾಟಕದ ದಾವಣಗೆರೆ ಹಾಗೂ ಉತ್ತರ ಕರ್ನಾಟಕದ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ರಾಜ್ಯದ ಉಳಿದೆಡೆ ತುಂತುರು ಮಳೆ ಹಾಗೂ ಮೋಡ ಮುಸುಕಿದ ವಾತಾವರಣವಿದೆ. ಬುಧವಾರ ಕೂಡ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.