ಹುಬ್ಬಳ್ಳಿ: ರಾಜ್ಯದಲ್ಲಿ ಒಬ್ಬ ಭ್ರಷ್ಟ ಮುಖ್ಯಮಂತ್ರಿಯನ್ನು ತೆಗೆದು ಇನ್ನೊಬ್ಬ ಭ್ರಷ್ಟನನ್ನು ಮುಖ್ಯಮಂತ್ರಿಯಾಗಿ ಮಾಡಿದರೆ ಏನು ಪ್ರಯೋಜನ? ಅದರ ಬದಲು ಬಿಜೆಪಿಯು ಅಧಿಕಾರ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ಅಧಿಕಾರ ಬಿಟ್ಟು ತೊಲಗಿದರೆ ರಾಜ್ಯದ ಜನರು ನೆಮ್ಮದಿಯ ಬದುಕು ನಡೆಸುವಂತಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಯಿಂದ ಇದುವರೆಗೂ 9 ಮಂದಿ ನಿಧನರಾಗಿದ್ದಾರೆ. ಸಾವಿರಾರು ಮನೆಗಳು ಕುಸಿದು ಬಿದ್ದಿವೆ ಹಾಗೂ ಬೆಳೆ ಹಾನಿಯಾಗಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರಕಾರ ನೆರವಿಗೆ ಧಾವಿಸಬೇಕು. ಕಳೆದ ಬಾರಿಯ ನೆರೆ ಪರಿಹಾರ ಇನ್ನೂ ಕೊಟ್ಟಿಲ್ಲ. ಕನಿಷ್ಠ ಈ ಬಾರಿಯಾದರೂ ಪರಿಹಾರ ನೀಡಲಿ ಎಂದು ಹೇಳಿದರು.
ಇದನ್ನು ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬದಲಾವಣೆಯಿಂದ ರಾಜ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಬಿಜೆಪಿಯೇ ರಾಜ್ಯ ಬಿಟ್ಟು ತೊಲಗಬೇಕು. ಬಿಜೆಪಿಯಿಂದ ರಾಜ್ಯದ ಹಿತಕಾಪಾಡಲು ಸಾಧ್ಯವಿಲ್ಲ ಎಂದರು.
ಯಡಿಯೂರಪ್ಪ ಬದಲಾಗುವ ಬಗ್ಗೆ 6 ತಿಂಗಳ ಹಿಂದೆಯೇ ನನಗೆ ಮಾಹಿತಿ ಇತ್ತು. ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಅವರಿಗೆ ಅವಧಿ ಪೂರೈಸಲು ಆಗಲಿಲ್ಲ. ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆಂದು ನನಗೆ ಗೊತ್ತಿಲ್ಲ. ಅದು ನರೇಂದ್ರ ಮೋದಿ, ಅಮಿತ್ ಶಾಗೆ ಮಾತ್ರ ಗೊತ್ತು. ಬಿಜೆಪಿಯವರಿಗೂ ಗೊತ್ತಿಲ್ಲ ಸಿದ್ದರಾಮಯ್ಯ ಎಂದು ಟೀಕಿಸಿದ್ದಾರೆ.
ಪ್ರವಾಹದಿಂದಾಗಿ ಜಾನುವಾರುಗಳು ಸಾವಿಗೀಡಾಗಿವೆ. ಜನರ ಕಷ್ಟ ಅರಿತು ಅವರ ನೆರವಿಗೆ ಧಾವಿಸಬೇಕಿದ್ದ ರಾಜ್ಯ ಬಿಜೆಪಿ ನಾಯಕರು ನಾಯಕರು ಮುಖ್ಯಮಂತ್ರಿ ಬದಲಾವಣೆ, ಮಂತ್ರಿ ಪದವಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ. ಜನ ಕಷ್ಟದಲ್ಲಿರುವಾಗ ಮುಖ್ಯಮಂತ್ರಿ ಬದಲಾವಣೆ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಇಷ್ಟಾದರೂ ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆ ಮಾತಿನಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರಿಗೆ ಬಿಎಸ್ವೈ ಅವರೇ ಉತ್ತಮ ಮುಖ್ಯಮಂತ್ರಿಯಾಗಿ ಕಂಡಿದ್ದಾರೆ ಎಂದು ಟೀಕಿಸಿದ್ದಾರೆ.