ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಹಲವು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅಲ್ಲದೆ, ಮುಂದಿನ 48 ಗಂಟೆಗಳಲ್ಲಿ ಚಂಡಮಾರುತ ರೀತಿಯಲ್ಲಿ ಅಪ್ಪಳಿಸಲಿದ್ದು, ಉತ್ತರ ಆಂಧ್ರಪ್ರದೇಶ ಅಥವಾ ಒಡಿಶಾಗೆ ಪ್ರವೇಶಿಸಲಿದೆ ಎಂದು ಅಂದಾಜಿಸಲಾಗಿದೆ. ಇದೇ ರೀತಿ ದೇಶದ ವಿವಿದೆಡೆ ಭಾರೀ ಮಳೆಯಾಗುತ್ತಿದ್ದರೆ, ಕರ್ನಾಟಕ ಸೇರಿ ರಾಜ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ಅಕ್ಟೋಬರ್ 14 ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಜಿಲ್ಲೆಗಳಲ್ಲಿ 72 ಗಂಟೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ 48 ಗಂಟೆ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ವ್ಯಾಪಕ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ, ಅಂಡಮಾನ್ ಮತ್ತು ನಿಕೊಬಾರ್, ಆಂಧ್ರಪ್ರದೇಶ, ತೆಲಂಗಾಣ, ಲಕ್ಷದ್ವೀಪ, ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದ್ದು, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಒಡಿಶಾ ಮತ್ತು ಗುಜರಾತ್‌ನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಬಹುದು ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರು ನಗರದಲ್ಲಿಯೂ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಭಾಗಗಳು ಜಲಾವೃತಗೊಂಡಿವೆ. ನೆನ್ನೆ ಸಂಜೆ ಆಗುತ್ತಲೇ ಸುರಿದ ಭಾರೀ ಮಳೆಯಿಂದಾಗಿ ಕೆಲಸ ಮುಗಿಸಿ ಮನೆಗಳತ್ತ ಹೊರಟಿದ್ದ ಜನರು, ವಾಹನ ಸವಾರರು ಪರದಾಟ ನಡೆಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯವ ವಿಮಾನ ನಿಲ್ದಾಣ ಸುತ್ತಮುತ್ತ ಸಂಪೂರ್ಣ ಜಲಾವೃತವಾಗಿದ್ದವು. ಇದರಿಂದಾಗಿ ರನ್‌ವೇ, ಟರ್ಮಿನಲ್, ಸಂಪರ್ಕ ರಸ್ತೆಗಳು ಜಲಾವೃತಗೊಂಡು ಸವಾರರು ಪರದಾಟ ನಡೆಸುವಂತಾಯಿತು. ಕೆಲವು ಪ್ರಯಾಣಿಕರು ಟ್ರ್ಯಾಕ್ಟರ್ ಮೂಲಕ ತೆರಳಿದ ಘಟನೆ ನಡೆದಿದೆ.
ಕೆ.ಆರ್.ಪುರ, ಮಹದೇವಪುರ, ಹೊಸಕೋಟೆ, ಜಾಲಹಳ್ಳಿ, ಯಶವಂತಪುರ, ಮೆಜೆಸ್ಟಿಕ್, ಹೊರಮಾವು, ಬಾಣಸವಾಡಿ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಮಳೆಯಿಂದ ಚರಂಡಿಗಳು ತುಂಬಿ ಹರಿದಿದ್ದು, ರಸ್ತೆಗಳು ಜಲಾವೃತಗೊಂಡಿವೆ.
ಇಂದು ಮಧ್ಯಾಹ್ನ ಮಳೆ ಶುರುವಾಗಿದ್ದು, ವಿಧಾನಸೌಧ, ಕೆ.ಆರ್.ಸರ್ಕಲ್, ಯಶವಂತಪುರ, ಮಲ್ಲೇಶ್ವರಂ, ಸದಾಶಿವನಗರ, ಮತ್ತಿಕೆರೆ, ಹೆಬ್ಬಾಳ, ಯಲಹಂಕ ಸೇರಿದಂತೆ ಬೆಂಗಳೂರಿನ ಹಲವೆಡೆ ಮಳೆ ಭಾರಿ ಮಳೆಯಾಗಿದೆ.
ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತ 131.1 ಮಿಲಿ ಮೀಟರ್ ಮಳೆಯಾಗಿದೆ. ನಿನ್ನೆ ಒಂದೇ ರಾತ್ರಿ ಬರೋಬ್ಬರಿ 131.1 ಮಿ.ಮೀ. ಮಳೆಯಾಗಿದೆ.
ನಗರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು.