ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿದ್ದು, ನದಿ, ಕೆರೆಕಟ್ಟೆಗಳು ತುಂಬಿಕೊಂಡಿವೆ. ಕರಾವಳಿ ಭಾಗಗಳಲ್ಲಿ ದಾಖಲೆಯ ಮಳೆಯಾಗಿದ್ದು, ಉತ್ತರ ಒಳನಾಡಿನಲ್ಲಿ ಮುಂದಿನ ಐದು ದಿನ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆ ಸೂಚನೆ ಮೇರೆಗೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ರಾಜ್ಯದ ಬಹುತೇಕ ಕಡೆಗಳಲ್ಲಿ ಇಂದಿನಿಂದ 4 ದಿನ, ಅಂದರೆ ಆಗಸ್ಟ್ 6ರವರೆಗೆ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಗಸ್ಟ್ 02ರ ದಿನಾಂಕದವರೆಗೆ ರಾಜ್ಯದಲ್ಲಿ ಮಳೆ ಹಾನಿಯಿಂದಾಗಿ ಸದ್ಯದ ವರದಿಯ ಪ್ರಕಾರ ಒಟ್ಟು 3,499 ಹೆಕ್ಟೇರ್ ಕೃಷಿಯ ಬೆಳೆ ನಾಶವಾಗಿದೆ. 2,057 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾಳಾಗಿದ್ದು ರೈತರು ಕಂಗಾಲಾಗಿದ್ದಾರೆ. ಸುಮಾರು 2,430 ಮನೆಗಳು ಸಂಪೂರ್ಣ ಹಾನಿಗೊಂಡಿದ್ದರೆ, 4,378 ಮನೆಗಳು ಭಾಗಶಃ ಹಾನಿಗೆ ತುತ್ತಾಗಿವೆ.
ಕರಾವಳಿ, ಮಲೆನಾಡು, ಉತ್ತರ ಒಳನಾಡು ಸೇರಿದಂತೆ ರಾಜ್ಯಲ್ಲಿ ಒಟ್ಟು 629 ಸೇತುವೆಗಳು ಹಾನಿಯಾಗಿದ್ದು, 3,264 ಶಾಲಾ ಕಟ್ಟಡಗಳು ಕುಸಿದು ಬಿದ್ದಿವೆ. 29 ಪ್ರಾಥಮಿಕ ಆರೋಗ್ಯ ಕಟ್ಟಡಗಳಿಗೂ ಹಾನಿಯಾಗಿವೆ. 11,796 ವಿದ್ಯುತ್ ಕಂಬಗಳು ನೆಲಕ್ಕುರುಳಿದರೆ 759 ವಿದ್ಯುತ್ ಟ್ರಾನ್ಸ್ ಫಾರ್ಮ್ ಗಳು ಹಾನಿಗೊಂಡಿವೆ.
ಹಾಸನದ ಶ್ರವಣಬೆಳಗೊಳದಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ವಿಂದ್ಯಾಗಿರಿಯಲ್ಲಿ ಪುರಾತನ ಕಾಲದ ಕಲ್ಲು ಗೋಡೆ ಕುಸಿದಿದೆ. ಸಾವಿರಾರು ವರ್ಷ ಇತಿಹಾಸವಿರುವ ಶ್ರವಣಬೆಳಗೊಳ ಕೋಟೆ ಕುಸಿತವಾಗಿದೆ. ಭಾರಿ ಮಳೆಗೆ ಕೋಟೆಯ ಕಲ್ಲುಗಳು ಉರುಳಿ ಬಿದ್ದಿವೆ. ಮೆಟ್ಟಿಲುಗಳ ಮೇಲೆ ದೊಡ್ಡ ದೊಡ್ಡ ಕಲ್ಲುಗಳು ಬಿದ್ದಿರುವುದರಿಂದ ಬೆಟ್ಟ ಹತ್ತಲು ನಿರ್ಬಂಧಿಸಲಾಗಿದೆ. ಈ ಬದಿಯಲ್ಲಿ ದೊಡ್ಡ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಚಿಂಗೋಳಿ ತಾಲ್ಲೂಕಿನ ದೇಗಲಮುಡಿ ಗ್ರಾಮದ ಪೂಡು ರಸ್ತೆ ಬದಿಯಲ್ಲಿನ ಸೇತುವೆ ಮುಳುಗಡೆಯಾಗಿದೆ.
ಕೊಡುಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ದೇವರಕೊಲ್ಲಿ ಹಾಗು ಕೊಯ್ನಾಡು ನಡುವಿನ ರಸ್ತೆ ಬಿರುಕು ಬಿಟ್ಟಿದೆ. ಖಾಸಗಿ ಹಾಗೂ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಗಡಿಭಾಗವಾದ ಕಲ್ಲುಗುಂಡಿ, ಸಂಪಾಜೆ, ಗೂನಡ್ಕ ಗ್ರಾಮಗಳು ಜಲಾವೃತಗೊಂಡಿವೆ.
ಭಾರೀ ಮಳೆಯಿಂದಾಗಿ ಸುಳ್ಯ ತಾಲ್ಲೂಕಿನ ಪಯಸ್ವಿನಿ ನದಿ ಉಕ್ಕಿ ಹರಿಯುತ್ತಿದೆ. ಮೈಸೂರು, ಮಂಗಳೂರು ಹೆದ್ದಾರಿ ಬಂದ್ ಆಗಿದೆ. ಸುಳ್ಯ ತಾಲ್ಲೂಖಿನ ಪೆರಾಜೆ, ಹರಂಬೂರು ಹೆದ್ದಾರಿ ಜಲಾವೃತವಾಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅವಾಂತರ ಸೃಷ್ಟಿ ಮಾಡಿದ್ದು, 30ಕ್ಕೂ ಹೆಚ್ಚು ದೋಣಿಗಳು ಸಮುದ್ರ ಪಾಲಾಗಿರುವ ಘಟನೆ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮದಲ್ಲಿ ನಡೆದಿದೆ. ಮೀನುಗಾರಿಕೆಗೆ ಇಟ್ಟಿದ್ದ ದೋಣಿಗಳು ಸಮುದ್ರ ಪಾಲಾಗಿದ್ದು, ಮೀನುಗಾರಿಕೆ ಬಲೆಗಳು ಸಹ ಸಂಪೂರ್ಣ ಹಾನಿಯಾಗಿವೆ.
ಕಲಬುರಗಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಚಿಂಚೋಳಿ-ದೇಗಲಮಡಿ ಮಾರ್ಗದ ಸೇತುವೆ ಮುಳುಗಡೆಯಾಗಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಜಲಾವೃತವಾಗಿದೆ.
ಕೋಲಾರದಲ್ಲಿ ಕಳೆದ ಮೂರು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿರುವುದರಿಂದ ಕೆಲವೆಡೆ ಮನೆಗಳು ಕುಸಿದಿದೆ. ಕೆಲವು ಕಡೆಗಳಲ್ಲಿ ರಸ್ತೆ ಸಂಪರ್ಕಕ್ಕೂ ಅಡ್ಡಿಯುಂಟಾಗಿದೆ. ಮಳೆಯ ನೀರಿನಲ್ಲಿ ಮೀನು ಹಿಡಿಯಲು ಹೋದ ಯುವಕನೊಬ್ಬ ನೀರಿನಲ್ಲಿ ಕೊಚ್ವಿಹೋಗಿರುವ ಘಟನೆ ಕೋಲಾರ ತಾಲ್ಲೂಕು ಕೋಡಿಕಣ್ಣೂರು ಬಳಿ ನಡೆದಿದೆ. ಯುವಕನಿಗಾಗಿ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಧಾರಕಾರ ಮಳೆಗೆ ಕೆರೆಗಳು ಉಕ್ಕಿ ಹರಿಯುತ್ತಿದ್ದು, ಕೊರಟಗೆರೆ ತಾಲೂಕಿನ ಮಾವತ್ತೂರು ಕೆರೆ ಕೋಡಿ ಬಿದ್ದಿದೆ. ಇಲ್ಲಿ ಅತಿ ರಭಸವಾಗಿ ನೀರು ಹರಿಯುತ್ತಿದೆ. ಕೊರಟಗೆರೆ ತಾಲೂಕಿನ ಅರ್ಧ ತಾಲೂಕಿಗೆ ಆಸರೆಯಾಗಿರುವ ಮಾವತ್ತೂರು ಕೆರೆ ಸಂಪೂರ್ಣ ಭರ್ತಿಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿದೆ.
ಬೆಂಗಳೂರು ನಗರ ಪ್ರದೇಶಗಳಲ್ಲಿ ಕೆಲವೆಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಸಂಜೆ ಅಥವಾ ರಾತ್ರಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ನಿನ್ನೆ ಇಡೀ ದಿನ ಆಗಾಗ್ಗೆ ಮಳೆಯಾಗಿದ್ದು ನಗರದ ಜನರು ತತ್ತರಿಸುವಂತೆ ಮಾಡಿತ್ತು.
ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಮಡಿಕೇರಿ, ಅರಕಲಗೂಡು, ಕೊರಟಗೆರೆ, ಗೌರಿಬಿದನೂರು, ಯಲಹಂಕ, ಹೊಸಕೋಟೆ, ರಾಮನಗರ, ಕೆಆರ್.ಪೇಟೆ, ಮದ್ದೂರು, ಮಳವಳ್ಳಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ ಎಂದು ವರದಿಯಾಗಿದೆ.
ಕೊಡಗು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಉಳಿದಂತೆ ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ.
ದಾವಣಗೆರೆ, ಹಾವೇರಿ, ವಿಜಯನಗರ, ಚಿತ್ರದುರ್ಗ, ಉಡುಪಿ, ಶಿವಮೊಗ್ಗ, ಧಾರವಾಡ, ಬೆಳಗಾವಿ , ಬಳ್ಳಾರಿ ಜಿಲ್ಲೆಗಳಲ್ಲಿ ಅತಿ ಕಡಿಮೆ ಪ್ರಮಾಣದ ಮಳೆಯಾಗಿದೆ.
ಕರ್ನಾಟಕದ 7 ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಸತತವಾಗಿ ಬೀಳುತ್ತಿರುವ ಮಳೆಯಿಂದ ಈಗಾಗಲೇ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ಈಗಾಗಲೇ ಸಣ್ಣ ಕೆರೆಕಟ್ಟೆಗಳು ತುಂಬಿವೆ. ಜೊತೆಗೆ ಅತಿವೃಷ್ಟಿ ಉಂಟಾಗಿ ಸಾಕಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯೂ ಸಂಭವಿಸಿದೆ.