ಬೆಂಗಳೂರು: ರಾಜ್ಯದ ವಿವಿದೆಡೆ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ತಮ್ಮ ತಮ್ಮ ಜಿಲ್ಲೆ ಮತ್ತು ಕ್ಷೇತ್ರಗಳಲ್ಲೆ ಇದ್ದು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು ಜನ–ಜಾನುವಾರು ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರವಾಹ ಪೀಡಿತ ಇತರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೂ ಮಾನ್ಯ ಮುಖ್ಯಮಂತ್ರಿಗಳು ಸಂಪರ್ಕದಲ್ಲಿದ್ದು, ನಿರಂತರ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಸೇರಿದಂತೆ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಮಾತನಾಡಿ, ನದಿ ಪಾತ್ರದ ಹಳ್ಳಿಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚಿಸಿದ್ದಾರೆ.
ಇದನ್ನು ಓದಿ: ರಾಜ್ಯದ ಹಲವೆಡೆ ಭಾರೀ ಮಳೆ: ಜುಲೈ 26ರವರೆಗೂ ಮಳೆ ಮುಂದುವರಿಕೆ ಹವಾಮಾನ ಇಲಾಖೆ ಸೂಚನೆ
ಅಗತ್ಯಬಿದ್ದರೆ ಗ್ರಾಮಸ್ಥರನ್ನು ತೆರವುಗೊಳಿಸುವಂತೆ ಸೂಚಿಸಿದ್ದೂ, ಸರ್ಕಾರದಿಂದ ಹೆಚ್ಚಿನ ನೆರವು ಬೇಕಾದಲ್ಲಿ ಕೂಡಲೇ ಕರೆ ಮಾಡಲು ತಿಳಿಸಿದ್ದಾರೆ. ಅದೇ ರೀತಿ ಬೇರೆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಮುಖ್ಯಮಂತ್ರಿಗಳು ಕರೆ ಮಾಡಿ ಮಳೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.
ಬೆಳಗಾವಿ ನಗರದಲ್ಲಿ ಭಾರೀ ಮಳೆಯಿಂದಾಗಿ ಘಟಪ್ರಭ, ಮಲಪ್ರಭಾ ನದಿಗಳು ಸೇರಿದಂತೆ ಉಪ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ತೀರದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ ನೀಡಲಾಗಿದೆ. ವೇದಗಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣ ಸ್ಥಗಿತಗೊಂಡಿದೆ.