ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಕಳೆದ ಒಂದೂವರೆ ವರ್ಷದಿಂದಲೂ ಮಕ್ಕಳ ಶಿಕ್ಷಣದಲ್ಲಿ ಸಾಕಷ್ಟು ತೊಡಕುಗಳು ಎದುರಾಗುತ್ತಲೇ ಇವೆ. ಕಳೆದ 15 ತಿಂಗಳಿಂದ ಶಾಲೆಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ. ಆದರೆ, ಸರಕಾರ ಅನ್‌ಲೈನ್ ಶಿಕ್ಷಣ ಜಾರಿಗೊಳಿಸಿತ್ತು. 2020-2021ರ ಸಾಲಿನಲ್ಲಿ ಅನ್‌ಲೈನ್ ಶಿಕ್ಷಣ ವಿದ್ಯಾಭ್ಯಾಸ ಮುಂದುವರೆಸಿದ್ದು, ಅದರಲ್ಲಿ ಕೇವಲ ಶೇಕಡಾ 60ರಷ್ಟು ಮಕ್ಕಳು ಮಾತ್ರ ಎಂದು ಶಿಕ್ಷಣ ಇಲಾಖೆಯು ಕೈಗೊಂಡ ಸರ್ವೆ ಮೂಲಕ ವಿಚಾರ ಬೆಳಕಿಗೆ ಬಂದಿದೆ.
ಹೈಕೋರ್ಟ್ ನಿರ್ದೇಶನದ ಮೇರೆಗೆ ಶಿಕ್ಷಣ ಇಲಾಖೆಯು ಈ ಸಮೀಕ್ಷೆಯನ್ನು ಕೈಗೊಂಡಿತ್ತು. ರಾಜ್ಯದಲ್ಲಿ ಸರಿಸುಮಾರು ಶೇಕಡಾ 40ರಷ್ಟು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. 2020-21ನೇ ಶೈಕ್ಷಣಿಕ ಸಾಲಿನ 1 ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ನಡೆಸಿದ ಸರ್ವೆಯ ಮೂಲಕ ಸಾಕಷ್ಟು ಅಂಶಗಳು ಬಹಿರಂಗಗೊಂಡಿವೆ.
ಇದನ್ನು ಓದಿ: ನಾಲ್ಕು ವರ್ಷಗಳ ಪದವಿ ಶಿಕ್ಷಣ: ಬೆಂಕಿಯಿಂದ ಬಾಣಲೆಗೆ
ಶೈಕ್ಷಣಿಕ ಚಟುವಟಿಕೆಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕೋವಿಡ್‌ನಿಂದ ಅತ್ಯಂತ ಪ್ರಮುಖ ಕ್ಷೇತ್ರಗಳು ಸಂಪೂರ್ಣವಾಗಿ ಸ್ತಬ್ಧಗೊಂಡಂತೆಯೇ ಇತ್ತು. ಇನ್ನೂ ಚೇತರಿಕೆ ಕಂಡಿಲ್ಲ. ಇದರ ಮಧ್ಯೆಯೂ ಶಿಕ್ಷಣ ರಂಗಕ್ಕೂ ಸಹ ಭಾರಿ ಪ್ರಮಾಣದಲ್ಲಿ ತೊಡಕುಂಟಾಗಿದೆ.
ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ಕರೆತರಲಾಗದಿರುವುದು ಅತ್ಯಂತ ಪ್ರಮುಖ ಅಂಶವಾಗಿದೆ. ಶೇಕಡಾ 60ರಷ್ಟು ವಿದ್ಯಾರ್ಥಿಗಳನ್ನು ಮಾತ್ರ ಆನ್‌ಲೈನ್ ಶಿಕ್ಷಣ ತಲುಪಿದೆ ಎನ್ನುವುದು ವರದಿಯಲ್ಲಿ ತಿಳಿಸಲಾಗಿದೆ. ಇನ್ನುಳಿದ ಶೇಕಡಾ 40ರಷ್ಟು ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದರೂ ಶಿಕ್ಷಣದಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿರುವ ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿ ಬಳಿ ಸ್ಮಾರ್ಟ್‌ಫೋನ್ ಇದೆ. ಸ್ಮಾರ್ಟ್‌ಫೋನ್ ಇದ್ದರೂ ಇಂಟರ್ನೆಟ್ ಸೌಲಭ್ಯ ಇರುವವರ ಪ್ರಮಾಣ ಎಷ್ಟು ಎನ್ನುವುದರ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಲಾಗಿದೆ.
- ಕರ್ನಾಟಕ ರಾಜ್ಯದಲ್ಲಿ 1 ರಿಂದ 10ನೇ ತರಗತಿವರೆಗಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1,05,09,367.
- ಅಧಿಕೃತವಾಗಿ ಶಾಲೆಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 93,01,805.
- ಮೊಬೈಲ್ ಬಳಸುವ ವಿದ್ಯಾರ್ಥಿಗಳ ಸಂಖ್ಯೆ 79,03,329.
- ಸ್ಮಾರ್ಟ್‌ಫೋನ್ ಹೊಂದಿದ ಮಕ್ಕಳ ಸಂಖ್ಯೆ 58,59,907.
- ಸ್ಮಾರ್ಟ್‌ಫೋನ್ ಇದ್ದು, ಇಂಟರ್ನೆಟ್ ಸೌಲಭ್ಯವುಳ್ಳ ಮಕ್ಕಳ ಸಂಖ್ಯೆ 37,79,965.
- ಸುಮಾರು 8,65,259 ವಿದ್ಯಾರ್ಥಿಗಳಿಗೆ ಟಿವಿ, ರೇಡಿಯೋ ಸೌಲಭ್ಯವಿಲ್ಲ
- ಬೇಸಿಕ್ ಮೊಬೈಲ್ ಹೊಂದಿರುವ ಮಕ್ಕಳ ಪ್ರಮಾಣ 21 ಲಕ್ಷಕ್ಕೂ ಹೆಚ್ಚು
ಶಿಕ್ಷಣ ಇಲಾಖೆ ಪ್ರಕಾರ ಸುಮಾರು 21 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಳಿ ಬೇಸಿಕ್ ಮೊಬೈಲ್‌ಗಳಿವೆ. ಇದರಲ್ಲಿ ಸುಮಾರು 14 ಲಕ್ಷಕ್ಕೂ ಹೆಚ್ಚು ಮಕ್ಕಳ ಬಳಿ ಮೊಬೈಲ್ ಇಲ್ಲ. ಇವೆಲ್ಲದರ ಪರಿಣಾಮವಾಗಿ ದೊಡ್ಡ ಸಂಖ್ಯೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಒಟ್ಟಾರೆ ಎಲ್ಲಾ ಅಂಶಗಳನ್ನು ಪರಿಗಣಿಸಿದ್ದಲ್ಲಿ 60 ಲಕ್ಷ ಮಕ್ಕಳಿಗೆ ಮಾತ್ರ ಆನ್‌ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಬಾಕಿ ಉಳಿದ 40 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಮಕ್ಕಳ ಬಳಿ ಟಿವಿ, ಇಂಟರ್ನೆಟ್, ಮೊಬೈಲ್, ಡಿಜಿಟಲ್ ತಂತ್ರಜ್ಞಾನದ ಸೌಲಭ್ಯವಿಲ್ಲದ ಕಾರಣ ಶಿಕ್ಷಣದಿಂದ ದೂರ ಉಳಿದಿದ್ದಾರೆ.
ಮಕ್ಕಳು ಸ್ಮಾರ್ಟ್‌ಫೋನ್ ಇದ್ದು ಅದನ್ನು ಬಳಸಿಕೊಂಡು ಮತ್ತು ದೂರದರ್ಶನದ ಮೂಲಕವೂ ವ್ಯಾಸಂಗದಲ್ಲಿ ತೊಡಗಿದ್ದಾರೆ. ಅದೇ ರೀತಿಯಲ್ಲಿ 10,45,288 ವಿದ್ಯಾರ್ಥಿಗಳು ರೇಡಿಯೋ ಮೂಲಕ ಪಾಠ, ಪ್ರವಚನಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ.
ಅಂದರೆ, ಟಿವಿ, ರೇಡಿಯೋ ಸೌಲಭ್ಯವನ್ನು ಹೊಂದದ ದೊಡ್ಡ ಪ್ರಮಾಣದ ಮಕ್ಕಳು ಶಾಲೆಗೆ ತೆರಳಿಯೇ ಶಿಕ್ಷಣ ಕಲಿಯಬೇಕಾದ ಅನಿವಾರ್ಯತೆ ಇದೆ ಅಥವಾ ಶಿಕ್ಷಕರೊಂದಿಗೆ ನೇರ ಸಂವಹನ ನಡೆಸಿ ಪಾಠ ಕಲಿಯುವುದು ಬಿಟ್ಟರೇ ಬೇರೆ ಮಾರ್ಗಗಳು ಇಲ್ಲ.
ಇದನ್ನು ಓದಿ: ಆನ್-ಲೈನ್ ಶಿಕ್ಷಣ ಎಂದರೆ ಗಾಳಿಯಲ್ಲಿ ಗೋಪುರಗಳನ್ನು ಕಟ್ಟುವುದೇ ?
ಶಿಕ್ಷಣ ಇಲಾಖೆಯ ಸರ್ವೆಯು ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಒಳಗೊಂಡಿದ್ದು, ಶಿಕ್ಷಣ ಇಲಾಖೆಯ SATs ವೆಬ್‌ಸೈಟ್‌ನಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಪರಾಮರ್ಶೆ ನಡೆಸಿದಾಗ ಡಿಜಿಟಲ್ ಯುಗದಲ್ಲೂ ಅಂತರ್ಜಾಲ ಶಿಕ್ಷಣ ಪಡೆಯದಿರುವವರ ಪ್ರಮಾಣ ದೊಡ್ಡ ಪ್ರಮಾಣದಲ್ಲಿದೆ ವಾಸ್ತವ ಅಂಶಗಳು ಬಯಲಾಗಿದೆ.
ಕೆಲವು ಪ್ರಮುಖ ಜಿಲ್ಲೆಗಳ ಅಂಕಿಅಂಶಗಳ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 1.1 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 42,309 ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸಂಪರ್ಕವಿಲ್ಲ. ಕಲಬುರಗಿ ಜಿಲ್ಲೆಯಲ್ಲಿ 5.4 ಲಕ್ಷ ವಿದ್ಯಾರ್ಥಿಗಳ ಪೈಕಿ 1.7 ಲಕ್ಷ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸೌಲಭ್ಯವಿಲ್ಲ. ಅಲ್ಲಿಯೇ 1.4 ಲಕ್ಷ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್ ಸಹ ಲಭ್ಯವಿಲ್ಲ.
ಬಳ್ಳಾರಿ ಜಿಲ್ಲೆಯಲ್ಲಿ ಇಂಟರ್‌ನೆಟ್ ಸೌಲಭ್ಯವಿಲ್ಲದೆ 2.6 ಲಕ್ಷ ವಿದ್ಯಾರ್ಥಿಗಳಿದ್ದಾರೆ. 2.2 ಲಕ್ಷ ವಿದ್ಯಾರ್ಥಿಗಳ ಬಳಿ ಡಿಜಿಟಲ್ ಸಾಧನವಿಲ್ಲ. 44,295 ವಿದ್ಯಾರ್ಥಿಗಳ ಮನೆಯಲ್ಲಿ ದೂರದರ್ಶನ, ರೇಡಿಯೋ ಸಂಪರ್ಕವೂ ಇಲ್ಲ. ವಿಜಯಪುರದಲ್ಲಿ 5 ಲಕ್ಷ ವಿದ್ಯಾರ್ಥಿಗಳ ಪೈಕಿ 2.2 ಲಕ್ಷ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್ ಸೌಲಭ್ಯವಿಲ್ಲ. 1.8 ಲಕ್ಷ ವಿದ್ಯಾರ್ಥಿಗಳ ಬಳಿ ಡಿಜಿಟಲ್ ಸಾಧನವಿಲ್ಲ. 75,419 ವಿದ್ಯಾರ್ಥಿಗಳ ಮನೆಯಲ್ಲಿ ದೂರದರ್ಶನ, ರೇಡಿಯೋ ಇಲ್ಲ. ಈ ಅಂಕಿಅಂಶಗಳೇ ರಾಜ್ಯದಲ್ಲಿ ಅರ್ಧಕ್ಕರ್ಧ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವುಳಿದಿದ್ದಾರೆ ಎಂಬ ಅಂಶಗಳು ತಿಳಿದುಬಂದಿವೆ.
2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲೇ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಈ ಬಾರಿಯೂ ಅದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿಯೇ ಇದೆ. ಸರಕಾರವು ಮಕ್ಕಳ ಭವಿಷ್ಯದ ಬಗ್ಗೆ ತೀರಾ ಗಂಭೀರವಾಗಿ ಆಲೋಚಿಸಬೇಕಾದ ಅನಿವಾರ್ಯತೆ ಇದೆ.
ಕೇರಳದಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿದೆ. ಮೊಬೈಲ್, ಲ್ಯಾಪ್‌ಟಾಪ್ ವಂಚಿತ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ ನ್ನು ಸರಕಾರವೇ ನೀಡಿದೆ. ಯಾವೊಬ್ಬ ಮಗವೂ ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವುದು ಕೇರಳದ ಎಡರಂಗ ಸರಕಾರದ ಉದ್ದೇಶ. ನೆಟ್ವರ್ಕ ಸಮಸ್ಯೆಯಾಗದಂತೆ ನೆಟ್‌ವರ್ಕ್ ಗಳ ಗುತ್ತಿಗೆದಾರರ ಸಭೆ ಕರೆದು ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೆಟ್ವರ್ಕ್ ಬಲಪಡಿಸುವ ಕುರಿತು ಚರ್ಚೆಯೂ ನಡೆದಿದೆ. ಆದರೆ ರಾಜ್ಯದಲ್ಲಿ ಮಾತ್ರ ಇಂತಹ ಪ್ರಯತ್ನಗಳು ನಡೆಯುತ್ತಿಲ್ಲ. ಕೇರಳದ ಡಿಜಿಟಲ್ ಶಿಕ್ಷಣ ಪ್ರಕ್ರಿಯೆಯನ್ನು ರಾಜ್ಯ ಸರಕಾರ ಅಧ್ಯಯನ ಮಾಡಬೇಕಿದೆ. ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡಬೇಕಿದೆ.