ರಾಜ್ಯದ ಶಾಂತಿ ಸೌಹಾರ್ಧತೆ ಕಾಪಾಡಿ-ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಗೆ ಭಾಗಿಯಾಗಲು ಅನುವು ಮಾಡಿಕೊಡಿ: ಸಿಪಿಐ(ಎಂ) ಮನವಿ

ಬೆಂಗಳೂರು: ಹೈಕೋರ್ಟ್ ತೀರ್ಪಿನಿಂದ ಅಲ್ಪಸಂಖ್ಯಾತ ಸಮುದಾಯ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮಾತ್ರವಲ್ಲ, ಹಿಜಾಬ್ ಧರಿಸಿ ಶಾಲಾ – ಕಾಲೇಜುಗಳಿಗೆ ತೆರಳುವುದನ್ನು ಮುಂದುವರೆಸಿದ್ದಾರೆ. ರಾಜ್ಯದಾದ್ಯಂತ ಹಲವೆಡೆ ಶಾಲಾ – ಕಾಲೇಜು ಆಡಳಿತ ಮಂಡಳಿಗಳು ಅವರು ತರಗತಿಗಳಿಗೆ ಹಾಜರಾಗದಂತೆ ತಡೆಯುವುದು ಮುಂದುವರೆಯುತ್ತಿದೆ. ಕರ್ನಾಟಹ ಹೈಕೋರ್ಟಿನ ತೀರ್ಪು ಉಂಟು ಮಾಡಿದ ಅಸಮಾಧಾನವು ರಾಜ್ಯದ ಅಲ್ಪಸಂಖ್ಯಾತ ವಲಯದಲ್ಲಿ ಮೌನ ಪ್ರತಿಭಟನೆ ಹಾಗೂ ವ್ಯಾಪಾರ ವಹಿವಾಟು ನಿಲ್ಲಿಸುವ ಪ್ರತಿಭಟನೆಗೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಕೆಲವು ಮತಾಂಧ ಶಕ್ತಿಗಳು ಈ ತೀರ್ಪಿನಿಂದ ಮುಸ್ಲಿಂ ವಿದ್ಯಾರ್ಥಿನಿಯರ ತಾರತಮ್ಯವಿಲ್ಲದ ಸಾರ್ವತ್ರಿಕ ಶಿಕ್ಷಣದ ಹಕ್ಕಿಗೆ ಉಂಟಾದ ಧಕ್ಕೆಯನ್ನು ಗಮನಿಸದೆ, ತಮಗೆ ಸಿಕ್ಕ ಜಯವೆಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಆತಂಕದ ವಿಚಾರವಾಗಿದೆ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದ್ದಾರೆ.

ಈ ಎಲ್ಲವೂ ರಾಜ್ಯದೊಳಗೆ ಮತಾಂಧತೆ ಬೆಳೆಯಲು ಮತ್ತು ಸೌಹಾರ್ಧತೆಯ ವಾತಾವರಣವನ್ನು ದುರ್ಬಲಗೊಳಿಸುವ ಅವಕಾಶಗಳನ್ನು ಹೆಚ್ಚು ಮಾಡಿವೆ. ಈ ಸಂದರ್ಭದಲ್ಲಿ ಪರ-ವಿರೋಧದ ಚಟುವಟಿಕೆಗಳು ಜಾತ್ಯತೀತ ಪರಂಪರೆಗೆ ಭಂಗ ಉಂಟು ಮಾಡುತ್ತವೆ ಮತ್ತು ಜಾತ್ಯಾತೀತ ಶಕ್ತಿಗಳು ದುರ್ಬಲಗೊಳ್ಳುವುದಕ್ಕೆ ಕಾರಣವಾಗುತ್ತವೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ, ಮೇಲ್ಮನವಿ ಮೂಲಕ ಈ ವಿಚಾರವು ಸರ್ವೋಚ್ಛ ನ್ಯಾಯಾಲಯ ವ್ಯಾಪ್ತಿಗೆ ಸೇರಿರುವುದರಿಂದ ಅದರ ತೀರ್ಪಿಗಾಗಿ ಕಾಯುತ್ತಾ, ರಾಜ್ಯದೊಳಗೆ ಶಾಂತಿ ಹಾಗೂ ಸೌಹಾರ್ಧತೆಯನ್ನು ಬಲಗೊಳಿಸಲು ಅಗತ್ಯ ಕ್ರಮವಹಿಸುವಂತೆ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ರಾಜ್ಯ ಸಮಿತಿಯ ಒತ್ತಾಯವಾಗಿದೆ. ರಾಜ್ಯದ ನಾಗರೀಕರು, ಅಲ್ಪಸಂಖ್ಯಾತರು, ಜಾತ್ಯಾತೀತ ಶಕ್ತಿಗಳು ಮತ್ತು ಸಮಸ್ತ ವಿದ್ಯಾರ್ಥಿ ಸಮುದಾಯಗಳಲ್ಲಿ ಮನವಿ ಮಾಡುತ್ತದೆ ಎಂದು ತಿಳಿಸಿದರು.

ಅದೇ ರೀತಿ, ರಾಜ್ಯ ಸರಕಾರವು ರಾಜ್ಯದ ಶಾಂತಿ ಸೌಹಾರ್ಧತೆಗೆ ಪೂರಕವಾಗಿ ಎಲ್ಲರ ವಿಶ್ವಾಸವನ್ನು ಪಡೆಯಲು ಮತ್ತು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ತರಗತಿಗಳ ಪರೀಕ್ಷೆಗಳಲ್ಲಿ ಪಾಲ್ಗೊಂಡು ತಮ್ಮ ಶೈಕ್ಷಣಿಕ ಹಕ್ಕನ್ನು ಪಡೆಯುವಂತೆ ಅಗತ್ಯವಾದ ವಾತಾವರಣವನ್ನು ನಿರ್ಮಿಸಲು ಕ್ರಮವಹಿಸುವಂತೆ ಸಿಪಿಐ(ಎಂ) ಒತ್ತಾಯಿಸುತ್ತದೆ.

ಎಲ್ಲ ಮುಸ್ಲಿಂ ಬಾಂಧವರು, ಹಿರಿಯರು, ಧಾರ್ಮಿಕ ಸಂಸ್ಥೆಗಳು, ತಂದೆ, ತಾಯಿಗಳು, ಪೋಷಕರು ಒಟ್ಟಾಗಿ, ಸರ್ವೋಚ್ಛ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಲೇ, ಎಲ್ಲ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಲ್ಲಿ ತೊಡಗುವಂತೆ ಮತ್ತು ಅವರು ಪರೀಕ್ಷೆ ಬರೆದು ಶಿಕ್ಷಣವನ್ನು ಪೂರೈಸುವಂತೆ ಸೂಕ್ತ ಕ್ರಮವಹಿಸಲು ಸಿಪಿಐ(ಎಂ) ಮನವಿ ಮಾಡಿದೆ.

Donate Janashakthi Media

Leave a Reply

Your email address will not be published. Required fields are marked *