ಹುಬ್ಬಳ್ಳಿ: ನೀರಾವರಿ ಯೋಜನೆಗಳ ವಿಷಯದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ರಾಜ್ಯದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಹದಾಯಿಗೆ ಸಂಬಂಧಿಸಿದಂತೆ ಬೆಳಗಾವಿಯಿಂದ, ಕೃಷ್ಣಾ ಯೋಜನೆ ಕುರಿತು ಆಲಮಟ್ಟಿ, ಮೇಕೆದಾಟುಗಾಗಿ ತಲಕಾವೇರಿ ಹಾಗೂ ಸಕಲೇಶಪುರದಿಂದ ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದಂತೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ʻಮಹದಾಯಿ ಯೋಜನೆಗೆ ಪರಿಸರ, ಅರಣ್ಯ ಇಲಾಖೆ ಸಮ್ಮತಿ ಇದ್ದರು. ನೀರಿನ ಬಳಕೆ ವಿಚಾರದಲ್ಲಿ ಗೋವಾ ದೂರು ಸಲ್ಲಿಸಿತ್ತು. ಆ ಕುರಿತು ವರದಿ ನೀಡಲು ನೇಮಿಸಿದ್ದ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ ಅಧೀಕ್ಷಕ ಎಂಜಿನಿಯರ್‌ಗಳ ನೇತೃತ್ವದ ಸಮಿತಿ ಇಂದಿಗೂ ವರದಿ ನೀಡಿಲ್ಲ. ಗೋವಾ ಒತ್ತಡಕ್ಕೆ ಮಣಿದು ಮಹದಾಯಿ ಯೋಜನೆ ಜಾರಿ ವಿಷಯದಲ್ಲೂ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ಬಿಜೆಪಿ ಸಂಸದರು ತುಟಿ ಬಿಚ್ಚುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದರೂ, ತಮಿಳುನಾಡಿನ ಒತ್ತಡಕ್ಕೆ ಮಣಿದಿದ್ದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು. ಆದರೆ, ಮಹದಾಯಿ ಮತ್ತು ಕೃಷ್ಣಾ ವಿಷಯದಲ್ಲಿ ಮೌನವಾಯಿತು. ಇದು ಕೇಂದ್ರದ ಇಬ್ಬಗೆಯ ನೀತಿಗೆ ಸಾಕ್ಷಿ’ ಎಂದರು.
ಪಾಲಿಕೆ ಚುನಾವಣೆ
‘ಹುಬ್ಬಳ್ಳಿ–ಧಾರವಾಡ, ಕಲಬುರ್ಗಿ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ತಂತ್ರ ಹೆಣೆಯಲಾಗಿದೆ. ಪಕ್ಷದ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ಹುಬ್ಬಳ್ಳಿ–ಧಾರವಾಡದಲ್ಲಿ 70 ವಾರ್ಡ್‌ಗಳಿಂದ, ಕಲಬುರ್ಗಿಯಿಂದ 55 ಹಾಗೂ ಬೆಳಗಾವಿಯಲ್ಲಿ 22 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ವೈದ್ಯರು, ವಕೀಲರು, ಸಾಹಿತಿಗಳು ಸೇರಿದಂತೆ ವಿದ್ಯಾವಂತರಿಗೆ ಟಿಕೆಟ್ ನೀಡಲಾಗಿದೆ’ ಎಂದರು.
ಬಿಜೆಪಿ–ಕಾಂಗ್ರೆಸ್ನಿಂದ ಕೋವಿಡ್ ನಿಯಮ ಉಲ್ಲಂಘನೆ
‘ನೂತನವಾಗಿ ನೇಮಕವಾದ ಕೇಂದ್ರ ಸಚಿವರುಗಳಿಂದ ನಡೆಯುತ್ತಿರುವ ಜನಾಶೀರ್ವಾದ ಯಾತ್ರೆಯಲ್ಲಿ ಜನಪ್ರತಿನಿಧಿಗಳೇ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಕಾಂಗ್ರೆಸ್‌ನವರೂ ಪಕ್ಷದ ಉಸ್ತುವಾರಿ ನೇತೃತ್ವದಲ್ಲಿ ಸಮಾವೇಶ ಮಾಡುತ್ತಾ ನಿಯಮ ಮೀರುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಆರೋಪಿಸಿದರು.