ರಾಜ್ಯದ ಮಕ್ಕಳ ಭವಿಷ್ಯವನ್ನು ಸರ್ಕಾರವೇ ಕಾಪಾಡಬೇಕು: ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಮರು ಪರಿಷ್ಕರಣೆಯ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮಕ್ಕಳ ಭವಿಷ್ಯವನ್ನು ಸರ್ಕಾರವೇ ಕಾಪಾಡಬೇಕು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಪ್ರಿಯಾಂಕ್‌ ಖರ್ಗೆ ಒತ್ತಾಯಿಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಪ್ರಿಯಾಂಕ್‌ ಖರ್ಗೆ “ಶಿಕ್ಷಣ ತಜ್ಞರು, ವಿದ್ವಾಂಸರು ಇರಬೇಕಾದ ಪಠ್ಯಪುಸ್ತಕ ಸಮಿತಿಗೆ ₹2 ಟ್ರಾಲ್‌ಗಳು, ಬಿಜೆಪಿಯ ಬಾಡಿಗೆ ಭಾಷಣಕಾರರನ್ನು ಕೂರಿಸಿ ಮಕ್ಕಳಿಗೆ ಸುಳ್ಳಿನ ಶೂರರ ಪಾಠ ಹೇಳಿಸುವುದು ವಿಪರ್ಯಾಸ. ನಾಡು, ನುಡಿಗೆ, ಕುವೆಂಪುರಂತಹವರಿಗೆ ಅವಮಾನಿಸಿದ ಈತನ ಟ್ರಾಲ್ ಪಾಂಡಿತ್ಯವೇ ಅರ್ಹತೆಯೇ? ಕೂಡಲೇ ಈತನನ್ನು ಕಿತ್ತೆಸೆದು ಮಕ್ಕಳ ಭವಿಷ್ಯ ಕಾಪಾಡಬೇಕು ಸರ್ಕಾರ” ಎಂದು ಬರೆದಿದ್ದಾರೆ.

ಇದನ್ನು ಓದಿ: ಲಿಂಗ ಸಮಾನತೆಗೆ ಚ್ಯುತಿ ತರುವ ವ್ಯವಸ್ಥಿತ ತಂತ್ರ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ: ಜನವಾದಿ ಮಹಿಳಾ ಸಂಘಟನೆ

ಪಠ್ಯಪುಸ್ತಕದಲ್ಲಿ ಭಗತ್‌ ಸಿಂಗ್, ನಾರಾಯಣ ಗುರು ಸೇರಿದಂತೆ ಕೆಲವು ಲೇಖಕರ ಪಠ್ಯವನ್ನು ತೆಗೆದು ಹಾಕಿ ಆರ್‌ ಎಸ್‌ ಎಸ್‌ ಸ್ಥಾಪಕ ಕೆ.ಬಿ. ಹೆಡ್ಗೆವಾರ್ ಭಾಷಣ ಸೇರಿಸಿರುವುದು ಹಾಗೂ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪದ್ಯವನ್ನು ಸೇರಿರುವುದು ಈಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

ಈ ಬಗ್ಗೆ ಟ್ವಿಟ್ಟರ್‌ ಅಭಿಯಾನವು ನಡೆದಿದ್ದು, ಬ್ಯಾಹ್ಮಣ್ಯ ಪಠ್ಯವನ್ನು ತಿರಸ್ಕಾರ ಮಾಡಿ ಎಂಬ ಕೂಗು ಕೇಳಿ ಬಂದಿದೆ. ಪಠ್ಯ ವಿವಾದ ಇದೀಗ ರಾಜಕೀಯವಾಗಿಯೂ ಚರ್ಚೆಗೆ ಗ್ರಾಸವಾಗಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್‌ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್‌ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

ರೋಹಿತ್ ಚಕ್ರತೀರ್ಥರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕಿತ್ತು ಹಾಕಿ

ಮೊದಲು ರೋಹಿತ್ ಚಕ್ರತೀರ್ಥರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಸ್ಥಾನದಿಂದ ಕಿತ್ತು ಹಾಕಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಅವರು, “ನಾಡಗೀತೆಯನ್ನು ಅವಹೇಳನ‌ ಮಾಡಿದ, ರಾಷ್ಟ್ರಕವಿಯನ್ನು ಗೇಲಿ ಮಾಡಿದ ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿಸಿರುವುದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಮೊದಲು ಈತನನ್ನು ಕಿತ್ತುಹಾಕಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನು ಓದಿ: ಸರ್ಕಾರದಿಂದಲೇ ಪಠ್ಯಪುಸ್ತಕಗಳಲ್ಲಿ ಕೋಮುವಾದಿ ವಿಷಬೀಜ ಬಿತ್ತುವ ಅಂಶಗಳ ಸೇರ್ಪಡೆ: ಎಸ್ಎಫ್ಐ ವಿರೋಧ

ಪಠ್ಯ ಪುಸ್ತಕದಲ್ಲಿ ಆರ್.ಎಸ್.ಎಸ್ ಸಂಸ್ಥಾಪಕ ಹೆಗಡೇವಾರ್ ಅದ್ಯಾಯ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿ.ಸಿ ನಾಗೇಶ್ ಅವರು ಆರ್​ಎಸ್​ಎಸ್​ನವರು. ಹೆಗ್ಡೆವಾರ್ ಆರ್​ಎಸ್​ಎಸ್​ ಸ್ಥಾಪಕರು, ಚಕ್ರತೀರ್ಥ ಅವರು ಆರ್​ಎಸ್​ಎಸ್​ನವರು. ಹೆತ್ತವರಿಗೆ ಹೆಗ್ಗಣ ಮುದ್ದು. ಹೀಗಾಗಿ ಹೆಗ್ಡೆವಾರ್ ಪಾಠ ಇರಲಿ ಅಂತಾರೆ. ನಾಳೆ ಗೋಡ್ಸೆ ಬಗ್ಗೆಯೂ ಪಠ್ಯದಲ್ಲಿ ಇರಲಿ ಎಂದು ಹೇಳುತ್ತಾರೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಇತಿಹಾಸ ಪಠ್ಯದಲ್ಲಿ ಸೇರಿಸಲಿ. ಅದಕ್ಕೆ ನಮ್ಮ ವಿರೋಧ ಇಲ್ಲ ಎಂದರು.

ʻಟಿಪ್ಪು ಒಬ್ಬ ನರಭಕ್ಷಕ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.

ಟಿಪ್ಪುವಿನ ಪೋಷಾಕು ಧರಿಸಿ ಪೋಸು ನೀಡಿದ್ದನ್ನು ಜಗದೀಶ್ ಶೆಟ್ಟರ್ ಮರೆತಿರಬೇಕು. ಚಿತ್ರಗಳು ಬರೀ ಮಾತಾಡುವುದಿಲ್ಲ ಶೆಟ್ಟರ್ ಅವರೇ, ಸತ್ಯವನ್ನ ಬೆತ್ತಲೆ ಕೂಡ ಮಾಡುತ್ತೆ. ಕೋಮುವಾದದ ಕನ್ನಡಕ ಕಳಚಿಟ್ಟು ಓದುವುದಾದರೇ ತಾವೇ ಸಿಎಂ ಆಗಿದ್ದಾಗ ಪ್ರಕಟಿಸಿರುವ ಪುಸ್ತಕ ಕಳಿಸಿ‌ಕೊಡಬೇಕಾ? ಎಂದು ಪ್ರಶ್ನಿಸಿದ್ದಲ್ಲದೆ, ಜಗದೀಶ್ ಶೆಟ್ಟರ್ ಟಿಪ್ಪುವಿನ ವೇಷ ಧರಿಸಿದ್ದ ಫೋಟೋವನ್ನು ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಾಥಮಿಕ, ಪ್ರೌಢ ಶಾಲೆಯ ಪಠ್ಯ ಪುಸ್ತಕ ಪರಿಷ್ಕರಣೆ  ವಿವಾದ ಬಳಿಕಯೂ,   ಶಿಕ್ಷಣ ಇಲಾಖೆಯಿಂದ ಸದ್ದಿಲ್ಲದೇ ದ್ವಿತೀಯ ಪಿಯು ಇತಿಹಾಸ ಪಠ್ಯಪುಸ್ತಕ ಪರಿಷ್ಕರಣೆಗೆ ತಯಾರಿ ನಡೆಸಿದೆ ಎನ್ನಲಾಗಿದೆ. ಅಲ್ಲದೇ ಈ ಪಠ್ಯಪುಸ್ತಕ ಪರಿಷ್ಕರಣೆ ಹೊಣೆಗಾರಿಕೆಯನ್ನು ಕೂಡ ರೋಹಿತ್ ಚಕ್ರತೀರ್ಥ ವಹಿಸುವಂತೆ ಸ್ವತಹ ಶಿಕ್ಷಣ ಸಚಿವರೇ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಪತ್ರಬರೆದು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Donate Janashakthi Media

Leave a Reply

Your email address will not be published. Required fields are marked *