ಬೆಂಗಳೂರು: ಕೃಷಿ ಕಾಯ್ದೆ ವಾಪಸ್ಸಾತಿಗಾಗಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟಯ ಅಂಗವಾಗಿ ಒಂದು ದೇಶದ ಎಲ್ಲೆಡೆ ಚಳುವಳಿಯನ್ನು ನಡೆಸಬೇಕೆಂದು ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾದ ಕರೆಯ ಭಾಗವಾಗಿ ಕರ್ನಾಟಕದಲ್ಲಿಯೂ ಸಂಯುಕ್ತ ಹೋರಾಟ-ಕರ್ನಾಟಕ ನೇತೃತ್ವದಲ್ಲಿ ಹಲವು ಪ್ರಮುಖ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ತಡೆಯುವ ಮೂಲಕ ಪ್ರತಿಭಟನಾ ಧರಣಿ ನಡೆಸಿದ್ದಾರೆ.
ಐತಿಹಾಸಿಕ ರೈತ ಹೋರಾಟಕ್ಕೆ ಒಂದು ವರ್ಷದ ಆಚರಣೆಯೊಂದಿಗೆ, ಕರಾಳ ಕೃಷಿ ಕಾನೂನುಗಳು ಸಂಸತ್ತಿನಲ್ಲಿ ವಾಪಸ್ಸು ಪಡೆಯಬೇಕು, ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೊಳಿಸಬೇಕು. ಸಿ2+50% ಸೂತ್ರದ ಆಧಾರದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಖಾತ್ರಿ ಮಾಡಲು ಕಾನೂನು ಮಾಡಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ.
ವಿದ್ಯುತ್ ಮಸೂದೆ ವಾಪಸ್ಸು ಪಡೆಯಬೇಕು. ಕರ್ನಾಟಕದಲ್ಲಿ ಎಪಿಎಂಸಿ, ಭೂಸುಧಾರಣಾ, ಜಾರುವಾರು ಹತ್ಯಾ ಕಾನೂನುಗಳನ್ನು ವಾಪಸ್ಸು ಪಡೆಯಬೇಕು. ಕಾರ್ಮಿಕ ಸಂಹಿತೆಗಳನ್ನು ವಾಪಸ್ಸು ಪಡೆಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ಸಂಯುಕ್ತ ಹೋರಾಟ-ಕರ್ನಾಟಕದ ಜಂಟಿ ವೇದಿಕೆಯಲ್ಲಿರುವ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘಟನೆಗಳು, ಅಖಿಲ ಭಾರತ ಕಿಸಾನ್ ಸಭಾ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಸೆಂಟರ್ ಆಫ್ ಟ್ರೇಡ್ ಯೂನಿಯನ್, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಕನ್ನಡಪರ ಸಂಘಟನೆಗಳು, ದಲಿತ ಸಂಘಟನೆಗಳು, ರೈತರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಚಳುವಳಿ ನಡೆದಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕಿರಂಗೂರು ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದ ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು ಬಿಜೆಪಿ ಸರ್ಕಾರದ ಜನವಿರೋಧಿ, ರೈತ ವಿರೋಧಿ ನೀತಿಗಳನ್ನು ಖಂಡಿಸಿದರು.
ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಮೌರ್ಯ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ಅಲ್ಲಿಂದ ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲು ಬೈಕ್‌ಗಳ ಮೂಲಕ ಮೆರವಣಿಗೆ ನಡೆಸಿದರು.
ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು-ಹೈದಾರಬಾದ್ ರಾಷ್ಟ್ರೀಯ ಹೆದ್ದಾರಿ ಬಂದ್ ಅಂಗವಾಗಿ ಚಿಕ್ಕಬಳ್ಳಾಪುರ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಜನವಿರೋಧಿ ಬಿಜೆಪಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕರಗಳ ಕೃಷಿ ಹಾಗು ಜನ ವಿರೋಧಿ ನೀತಿಗಳನ್ನು ರದ್ದುಪಡಿಸಬೇಕು ಮತ್ತು ಸಂವಿಧಾನದ ರಕ್ಷಣೆಗಾಗಿ ಆಗ್ರಹಿಸಿ ಹಾಸನದ ಎನ್.ಆರ್. ವೃತ್ತದಲ್ಲಿ ಸಂಯುಕ್ತ ಹೋರಾಟ ಕರ್ನಾಟಕದ ನೇತೃತ್ವದಲ್ಲಿ ಹೆದ್ದಾರಿ ತಡೆದು ಹೋರಾಟ ನಡೆಸಲಾಯಿತು.
ತುಮಕೂರಿನಲ್ಲಿ ಕಾಯ್ದೆಗಳನ್ನು ರದ್ದು ಮಾಡುವಂತೆ ಆಗ್ರಹಿಸಿದ ರೈತರು ಪ್ರತಿಭಟನೆ ನಡಸಿದರು. ಹೊಸಪೇಟೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿಯನ್ನು ಹಾಗೂ ಸೊಲ್ಲಾಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ರೈತರು ಪ್ರತಿಭಟನೆ ನಡೆಸಿದರು.
ರಾಯಚೂರಿನ ಹೊರಭಾಗದಲ್ಲಿರುವ ಸಾತ್ ಮೈಲ್ ಸಿಂಧೂರು ನಗರದ ಮುಖ್ಯರಸ್ತೆ ಸೇರಿದ ರೈತರು ರಸ್ತೆ ತಡೆದು ಪ್ರತಿಭಟನೆಯನ್ನು ನಡೆಸಿದರು. ವಿಜಯನಗರ ಜಿಲ್ಲೆಯಲ್ಲಿ ಸೊಲ್ಲಾಪುರದಿಂದ ಚಿತ್ರದುರ್ಗ ಮಾರ್ಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ-50, ತುಂಗಭದ್ರಾ ಅಣೆಕಟ್ಟು, ಗಣೇಶ ಗುಡಿ ಹತ್ತಿರ, ಹೊಸಪೇಟೆ ಇಲ್ಲಿ ರೈತರ ಪ್ರತಿಭಟನೆಯನ್ನು ನಡೆಸಿದ್ದಾರೆ.
ವಿಜಯಪುರದ ರಾಷ್ಟ್ರೀಯ ಹೆದ್ದಾರಿ-13ರ ಟೋಲ್ ಬಳಿ ಸೇರಿದ ರೈತರು ಕೇಂದ್ರ-ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿದರು. ಕೊಡಗು ಜಿಲ್ಲೆಯ ಹಲವು ಭಾಗಗಳಿಂದ ಜಿಲ್ಲಾ ಕೇಂದ್ರಕ್ಕೆ ಬೈಕ್ ರ‍್ಯಾಲಿ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಧರಣಿಯನ್ನು ನಡೆಸಿದರು.
ಚಿಕ್ಕಬಳ್ಳಾಪುರದ ಚಲದಪುರ ಹಳೆ ಡಿಸಿ ಕಛೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ ಬಳಿ, ರಾಮನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಚಾಮರಾಜನಗರ – ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ, ಶಿವಮೊಗ್ಗ ಬಸ್ ಸ್ಟ್ಯಾಂಡ್ ಸರ್ಕಲ್ ಬಳಿ, ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ-1ರ ಕ್ಯಾದಿಗೆರಿ ಹತ್ತಿರ ಪ್ರತಿಭಟನಾ ಧರಣಿಗಳು ನಡೆದಿವೆ.
ಬಳ್ಳಾರಿ ಜಿಲ್ಲೆಯ ನಂದೂರು ಬಳಿ ಇರುವ ಬೆಂಗಳೂರು ಬೈಪಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ, ದಾವಣಗೆರೆ ಜಿಲ್ಲೆಯ ಜಯದೇವ ಸರ್ಕಲ್‌ನಿಂದ ಎಸಿ ಕಛೇರಿವರೆಗೆ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲಾಗಿದೆ. ಅಲ್ಲದೆ, ಹಾಸನ, ಧಾರವಾಡ, ಯಾದಗಿರಿ, ಕಲಬುರಗಿ, ಬೆಳಗಾವಿ ಸೇರಿದಂತೆ ಇತರೆ ಜಿಲ್ಲೆಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ.