ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಹಂತಹಂತವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಆರೋಗ್ಯ ಸಚಿವ ಡಾ ಕೆ ಸುಧಾಕರ್

ಬೆಂಗಳೂರು: ವಿಧಾನ ಮಂಡಲ ಅಧಿವೇಶನ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಜಬ್ಬಾರ್ ಸಾಬ್ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್‌ ಅವರು, ಕೆಲ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಗೊಂಡಿದ್ದು, ಕೆಲವೆಡೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಹಣಕಾಸು ಲಭ್ಯತೆಯನುಸಾರ ಎಲ್ಲ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು ಎಂದು ಹೇಳಿದರು.

ಈಗಿರುವ ಜಿಲ್ಲಾಸ್ಪತ್ರೆಗಳಲ್ಲಿ ಮೂರನೇ ಹಂತದ ಆರೋಗ್ಯ ಸೇವೆ ಸಿಗುತ್ತದೆ. ಹೊಸ ತಾಲ್ಲೂಕುಗಳಲ್ಲಿ ಆಸ್ಪತ್ರೆ ಸ್ಥಾಪನೆ ಆಗಬೇಕಿದೆ. ಎಲ್ಲಾ ಪಿಹೆಚ್​ಸಿಗಳನ್ನು ವಾರದ ಎಲ್ಲಾ ದಿನಗಳು 24 ಗಂಟೆಯೂ ಸೇವೆ ಸಿಗುವಂತೆ ಮಾಡಲಾಗುತ್ತದೆ. ಅಗತ್ಯ ಸಿಬ್ಬಂದಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕುಂದು ಕೊರತೆ ಆಲಿಸಲು ವ್ಯವಸ್ಥೆ ಮಾಡಲಾಗಿದೆ. ಯಾರೇ ದೂರು ನೀಡಿದರೂ 15 ದಿನಗಳ ಒಳಗಾಗಿ ಕ್ರಮವಹಿಸುವುದಾಗಿ ತಿಳಿಸಿದರು.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೆಲ ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಕೆಲವೆಡೆ ಕಾಮಗಾರಿ ನಡಿತಾ ಇದೆ. ದಾವಣಗೆರೆಯಲ್ಲಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಚಿಂತನೆ ಇದೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಯಂತ್ರ, ಸ್ಕ್ಯಾನಿಂಗ್ ಯಂತ್ರ ಅಳವಡಿಕೆ ಮಾಡಲಾಗುತ್ತಿದೆ ಎಂದರು.

ಜೆಡಿಎಸ್ ಸದಸ್ಯ ಸಿಎನ್ ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ. ಕೆ. ಸುಧಾಕರ್‌, ಈ ವರ್ಷ 438 ನಮ್ಮ ಕ್ಲಿನಿಕ್ ಆರಂಭ ಮಾಡಲಾಗುವುದು ಎಂದಿರುವ ಅವರು, 243 ಬಿಬಿಎಂಪಿ 195 ಇತರ ಜಿಲ್ಲೆಗಳಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಅಕ್ಟೋಬರ್ ಅಂತ್ಯದ ಒಳಗೆ ನಮ್ಮ ಕ್ಲಿನಿಕ್ ಗಳು ಆರಂಭಗೊಳ್ಳಲಿವೆ. ಅಗತ್ಯ ಸಿಬ್ಬಂದಿ, ಉಪಕರಣ ವ್ಯವಸ್ಥೆ ಕಲ್ಪಿಸಿ ಕಾರ್ಯಾರಂಭ ಮಾಡಲಾಗುತ್ತದೆ. ನಮ್ಮ ಕ್ಲಿನಿಕ್ ಅನ್ನು ಕೊಳಗೇರಿ ಮತ್ತು ದುರ್ಬಲ ವರ್ಗದ ಜನರಿರುವ ಕಡೆ ಸ್ಥಾಪಿಸುವ ಚಿಂತನೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಇವೆ. 107 ಕಡೆ ಮಾತ್ರ ಕಡಿಮೆ ಇವೆ. ಅಲ್ಲಿಯೇ ಜನಸಂಖ್ಯೆಗೆ ತಕ್ಕಂತೆ ಆರೋಗ್ಯ ಕೇಂದ್ರ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಳೆದ ಒಂದೂವರೇ ವರ್ಷದಲ್ಲಿ 2 ಸಾವಿರ ವೈದ್ಯರ ನೇಮಕಾತಿಯಾಗಿದೆ. ಕೆಲವೇ ಕೆಲವು ಪಿಹೆಚ್​ಸಿಗಳಲ್ಲಿ ಮಾತ್ರ ಕೊರತೆ ಇದೆ. ಬಹುತೇಕ ಕಡೆ ಅಗತ್ಯ ಸಿಬ್ಬಂದಿ ಇದೆ. ಕಡ್ಡಾಯ ಗ್ರಾಮೀಣ ಸೇವೆ ಅಡಿ ವೈದ್ಯರ ನೇಮಕ ಮಾಡಿಕೊಳ್ಳಲಾಗುತ್ತಿದೆ. 1 ವರ್ಷಕ್ಕೆ ಗುತ್ತಿಗೆ ಆಧಾರದಲ್ಲಿ 4000 ವೈದ್ಯಕೀಯ ಸಿಬ್ಬಂದಿಯನ್ನು ನಮ್ಮ ಕ್ಲಿನಿಕ್ ಗಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದರು.

ಮತ್ತೆರಡು ಪ್ರಶ್ನೆಗಳಿಗೆ ಉತ್ತರಿಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರು. ರಾಜ್ಯದಲ್ಲಿ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳ ಸಿಬ್ಬಂದಿಗೆ ಪಿಂಚಣಿ ಯೋಜನೆ ಮರಳಿ ಜಾರಿಗೊಳಿಸಲಾಗಿದೆ ಮತ್ತು ರಾಮನಗರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *