ಬೆಂಗಳೂರು: ಕರ್ನಾಟಕ ಸರ್ಕಾರದ ತನ್ನ ಬಜೆಟ್ ಅಧಿವೇಶನದಲ್ಲಿ ಕಾರ್ಖಾನೆಗಳ ಕಾಯಿದೆಗೆ ಹಲವು ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ತಂದಿದೆ. ಅದರಲ್ಲೂ ಪ್ರಮುಖವಾಗಿ ಕೆಲಸದ ಅವಧಿಯನ್ನು 12 ಗಂಟೆಗೆ ಹೆಚ್ಚಿಸಿದೆ ಮತ್ತು ಮಹಿಳೆಯರಿಗೆ ರಾತ್ರಿ ಪಾಳೆಯಲ್ಲಿ ಕೆಲಸ ಮಾಡುವಂತೆ ಅವಕಾಶ ಕಲ್ಪಿಸುವಂತ ಕಾಯ್ದೆ ತಿದ್ದುಪಡಿಗಳನ್ನು ಮಾಡಿರುವುದನ್ನು ಖಂಡಿಸಿರುವ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಮಾರ್ಚ್ 23ರಂದು ಒಂದು ದಿನದ ಕೈಗಾರಿಕಾ ಮುಷ್ಕರಕ್ಕೆ ಕರೆ ನೀಡಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಜೆಸಿಟಿಯು, ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ 2023 ಕೂಡಲೇ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದೆ. ಅಲ್ಲದೆ, ಇನ್ನೊಂದಷ್ಟು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಿರುವ ರಾಜ್ಯದ ಬಿಜೆಪಿ ಸರ್ಕಾರ ವಿಶ್ರಾಂತಿಯ ಮಧ್ಯಂತರವನ್ನು 5 ರಿಂದ 6 ಗಂಟೆಗೆ ಹೆಚ್ಚಿಸಿದೆ. ಇದರಿಂದ ಕಾರ್ಮಿಕರ ಶೋಷಣೆ ಹೆಚ್ಚಾಗುವುದು, ಗಾರ್ಮೆಂಟ್ಸ್ ನಂತಹ ಕೈಗಾರಿಕೆಗಳಲ್ಲಿ ಅಸುರಕ್ಷಿತ ಪರಿಸ್ಥಿತಿಗಳಲ್ಲಿ ಮಹಿಳಾ ಕಾರ್ಮಿಕರನ್ನು ರಾತ್ರಿಯ ಪಾಳೆಯಲ್ಲಿ ಬಲವಂತಪಡಿಸಲಾಗುವುದು, ರಾಜ್ಯ ಸರ್ಕಾರದ ಈ ತಿದ್ದುಪಡಿಗಳು, ದಿನಕ್ಕೆ 14 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸಲ್ಪಟ್ಟ ಬ್ರಿಟಿಷ್ ವಸಾಹತುತಾಹಿ ಯುಗಕ್ಕೆ ಕಾರ್ಮಿಕರನ್ನು ಹಿಂದಕ್ಕೆ ತಳ್ಳುತ್ತದೆ ಎಂದು ಜೆಸಿಟಿಯು ತಿಳಿಸಿದೆ.
ಇದನ್ನು ಓದಿ: ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ಮಾಡಿದ ರಾಜ್ಯ ಸರಕಾರದ ವಿರುದ್ಧ ಸಿಐಟಿಯು ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನ
ಪ್ರಪಂಚಾದ್ಯಂತ ಕೆಲಸದ ಅವಧಿಯನ್ನು ಕಡಿಮೆ ಮಾಡಿ, ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ಕೈಗೊಂಡ ಈ ತಿದ್ದುಪಡಿಗಳು ನಮ್ಮ ದೇಶ ಅನುಮೋದಿಸಿರುವ ಐಎಲ್‌ಒ convention no.1 ನ ವಿರುದ್ಧವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸರ್ಕಾರ ಕೆಲಸದ ಅವಧಿಯನ್ನು ಹೆಚ್ಚಿಸಿ, ಓವರ್ ಟೈಮ್ ಗಂಟೆಗಳನ್ನು 75ರಿಂದ 140 ಗಂಟೆಗಳಿಗೆ ಹೆಚ್ಚಿಸಿರುವ ಕ್ರಮದಿಂದ ನಿರುದ್ಯೋಗವೂ ಹೆಚ್ಚಲಿದೆ ಎಂದು ತಿಳಿಸಲಾಗದೆ.
ರಾಜ್ಯ ಸರ್ಕಾರ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಚರ್ಚೆ ಮಾಡದೆ, ಇಂತಹ ಏಕಪಕ್ಷೀಯ ತಿರ್ಮಾನದ ಕ್ರಮ ಸಾಮಾಜಿಕ ಒಪ್ಪಂದಕ್ಕೆ ದ್ರೋಹವಾಗಿದೆ ಹಾಗೂ ಕೇವಲ ದೊಡ್ಡ ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ತೀರ್ಮಾನವಾಗಿದೆ. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಸರ್ಕಾರ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ವಿರೋಧಿದೆ.
ಇದನ್ನು ಓದಿ: ಕಾರ್ಖಾನೆಗಳಲ್ಲಿ ಕಾರ್ಮಿಕರ ದುಡಿಮೆಯ ಅವಧಿ 9 ರಿಂದ 12 ಗಂಟೆಗೆ ಹೆಚ್ಚಳ; ಮಸೂದೆ ಅಂಗೀಕರಿಸಿದ ರಾಜ್ಯ ಸರ್ಕಾರ
ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ರಾಜ್ಯ ಸರ್ಕಾರ ಹಿಂಪಡಿಯಬೇಕೆಂದು ರಾಜ್ಯ ಮಟ್ಟದಲ್ಲಿ ಒಂದು ದಿನದ ಕೈಗಾರಿಕಾ ಮುಷ್ಕರವು ಭಗತ್ ಸಿಂಗ್ ಹುತಾತ್ಮರಾದ ದಿನವಾದ ಮಾರ್ಚ್ 23, 2023ರಂದು ಹಮ್ಮಿಕೊಳ್ಳಲು ಕರೆ ನೀಡಲಾಗಿದೆ. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದಲ್ಲಿ, ಕಾರ್ಮಿಕರ ಹೋರಾಟ ಮತ್ತಷ್ಟು ಬಲಗೊಳ್ಳಲಿದೆ. ಇಡೀ ರಾಜ್ಯದ ಜನತೆ ತೀವ್ರತರ ಹೋರಾಟಕ್ಕೆ ಮುಂದಾಗಲಿದ್ದಾರೆ. ಬೆಂಗಳೂರು ನಗರದ ಸ್ಥಾತಂತ್ರ ಉದ್ಯಾನವನದಲ್ಲಿ ಕೈಗಾರಿಕಾ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಲಿದೆ ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದೆ.
ರಾಜ್ಯ ಸರ್ಕಾರದ ತಿದ್ದುಪಡಿ ವಿಧೇಯಕ ವಿರುದ್ಧ ನಡೆಯುತ್ತಿರುವ ಪ್ರತಿರೋಧದ ಹಿನ್ನೆಲಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವಾದ 8 ಮಾರ್ಚ್‌ರಂದು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮುಷ್ಕರದ ನೋಟಿಸ್ಸನ್ನು ಸಲ್ಲಿಸಲಾಗುವುದು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾರ್ಖಾನೆಗಳ ನಿರ್ದೇಶಕರಿಗೆ ಮುಷ್ಕರದ ನೋಟಿಸ್ಸನ್ನು ನೀಡಲಾಗುವುದು ಎಂದು ಜೆಸಿಟಿಯು ತಿಳಿಸಿದೆ.
ಇದನ್ನು ಓದಿ: ದಿನದ ಕೆಲಸದ ಅವಧಿ 3 ಗಂಟೆ ಹೆಚ್ಚಳ: ಮಾರ್ಚ್ 1 ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಸಿಐಟಿಯು ಕರೆ
ಜೆಸಿಟಿಯು ವೇದಿಕೆಯಡಿ ಎಐಯುಟಿಯುಸಿ, ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಹೆಚ್‌ಎಂಎಸ್, ಟಿಯುಸಿಸಿ, ಎಐಸಿಸಿಟಿಯು, ಹೆಚ್‌ಎಂಕೆಪಿ, ಜಿಎಟಿಡಬ್ಲ್ಯೂಯು, ಎನ್‌ಸಿಎಲ್, ಕೆಡಬ್ಲ್ಯೂಯು ಸಂಘಟನೆಯಡಿಯಲ್ಲಿನ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಲಾಗಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ