ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಸಚಿವರಾದ ಆನಂದ್ ಸಿಂಗ್, ಶ್ರೀರಾಮುಲು ಮತ್ತು ಆರ್ ಅಶೋಕ್ ಹಾಜರಾಗಿರಲಿಲ್ಲ. ಖಾತೆ ಬಗ್ಗೆ ಅತೃಪ್ತಿಗೊಂಡಿರುವ ಆನಂದ್ ಸಿಂಗ್ ಅಧಿಕಾರ ಸ್ವೀಕಾರ ಮಾಡಿಲ್ಲ. ಅಲ್ಲದೆ, ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಸಚಿವ ಶ್ರೀರಾಮುಲು ಅವರಿಗೂ ಅಸಮಾಧಾನ ಇತ್ತು. ಇಂದಿನ ಸಭೆ ಇವರು ಗೈರಾಗಿರುವುದು ಅಚ್ಚರಿ ಮೂಡಿಸಿದೆ. ಆರ್ ಅಶೋಕ್ ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಿರುವುದರಿಂದ ಭಾಗವಹಿಸಿಲಿಲ್ಲ.
ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕೆಲವು ಕ್ಷೇತ್ರಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಮತ್ತು ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಇದನ್ನು ಓದಿ: ಅನಿಯಮಿತ ವರ್ಗಾವಣೆಗೆ ಕಡಿವಾಣ-ಕೌನ್ಸಿಲಿಂಗ್ ವ್ಯವಸ್ಥೆ ಜಾರಿ: ಸಚಿವ ಡಾ.ಸುಧಾಕರ್
ವಿಧಾನಮಂಡಲದ ಅಧಿವೇಶವನ್ನು ಸೆಪ್ಟಂಬರ್ 13ರಿಂದ ಸೆಪ್ಟೆಂಬರ್ 24ರವರೆಗೆ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಸಂಪುಟ ಸಭೆಯ ತೀರ್ಮಾನಗಳ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಅವರಿಗೆ ಇದು ಮೊದಲ ಅಧಿವೇಶನವಾಗಿದೆ.
ಆರೋಗ್ಯ ಉಪ ಕೇಂದ್ರಗಳ ಅಭಿವೃದ್ಧಿಗೆ 478.91 ಕೋಟಿ
ರಾಜ್ಯದಲ್ಲಿನರುವ 2,859 ಆರೋಗ್ಯ ಉಪ ಕೇಂದ್ರಗಳನ್ನು ‘ಆರೋಗ್ಯ ಮತ್ತು ಕ್ಷೇಮ ಕೇಂದ್ರ’ಗಳನ್ನಾಗಿ 478.91 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಆರೋಗ್ಯ ಇಲಾಖೆಯ 1ರಿಂದ 5 ಹಂತದ ಕಾರ್ಯಕ್ರಮಗಳನ್ನು ಸೇರಿಸಲಾಗುತ್ತದೆ. ಉಪಕೇಂದ್ರಕ್ಕೆ ಕೊಠಡಿಗಳಿಲ್ಲವಾದರೆ ಐದು ಸಾವಿರ ರೂ. ಮೊತ್ತದ ಕಟ್ಟಡವನ್ನು ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳಲು ಅನುಮತಿ ನೀಡಲಾಗಿದೆ.
ಆರೋಗ್ಯ ಪೂರೈಕೆದಾರರ ಹುದ್ದೆಗಳ ಸೃಷ್ಠಿಗೆ ಸಂಬಂಧಿಸಿದಂತೆ ಹಾಗೂ ರೋಸ್ಟರ್ ಮೆರಿಟ್ ಅನ್ನು ಗುತ್ತಿಗೆ ಆಧಾರದಲ್ಲಿ ಮೂರು ವರ್ಷದವರೆಗೆ ನೇಮಕ ಮಾಡಿಕೊಳ್ಳುವುದು, ಆರ್‌ಜಿಯುಜಿಎಸ್ ಸಂಯೋಜಿತ ಕೋರ್ಸ್ ನಡಿ ನರ್ಸಿಂಗ್ ಓದಿರುವ ವಿದ್ಯಾರ್ಥಿಗಳನ್ನು ಕೂಡ ಇದರಡಿ ನೇಮಕಾತಿ ಮಾಡಲಾಗುವುದು.
ಸಚಿವ ಸಂಪುಟ ಸಭೆಯಲ್ಲಿನ ಕೆಲವು ತೀರ್ಮಾನಗಳು
ರಾಜ್ಯದ ಸಚಿವ ಸಂಪುಟ ಉಪಸಮಿತಿಗಳನ್ನು ರಚನೆ ಮಾಡಲು ತಿರ್ಮಾನಿಸಲಾಗಿದ್ದು 14 ಸಂಪುಟ ಉಪಸಮಿತಿಯ ರಚನೆಗೆ ಸಭೆಯು ಮುಖ್ಯಮಂತ್ರಿಗಳಿಗೆ ಅಧಿಕಾರವನ್ನು ನೀಡಿದೆ.
75ನೇ ವರ್ಷದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಿನ್ನೆಲೆ ಮುಖ್ಯಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆಯಂದು ಘೋಷಿಸಿದ್ದ ಆಜಾದಿ ಅಮೃತ ಮಹೋತ್ಸವ ಅಂಗವಾಗಿ 400 ಕೋಟಿ ಮೊತ್ತದ ವಿವಿಧ ಕಾರ್ಯಕ್ರಮಗಳಿಗೆ ಅನುನೋದನೆ. ಇದರಲ್ಲಿ 75 ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಗರಗಳನ್ನು ಸ್ವಚ್ಛ ಮತ್ತು ಸುಂದರಗೊಳಿಸಲು 75 ಕೋಟಿ, ಆರೋಗ್ಯ ಇಲಾಖೆಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ.
ಇದನ್ನು ಓದಿ: ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಕ್ಷಯ ರೋಗ ತಪಾಸಣೆ: ಸಚಿವ ಡಾ. ಸುಧಾಕರ್
ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಬಗ್ಗೆ ಯಾವುದೇ ವಿಚಾರವನ್ನೂ ಪ್ರಸ್ತಾಪಿಸಿಲ್ಲ.
ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಆರೈಕೆ ನಿಯಮ, 2021ಕ್ಕೆ ಅನುಮೋದನೆ ನೀಡಲಾಗಿದೆ.
2020-21 ನೇ ಸಾಲಿನ ಸರ್ಕಾರಿ ಹಾಗೂ ಅನುದಾನಿತ ಶಾಲಾ- ಕಾಲೇಜುಗಳ ಹದಿಹರೆಯದ ಹೆಣ್ಣುಮಕ್ಕಳಿಗೆ “ಶುಚಿ” ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್‌ಗಳನ್ನು ವಿತರಿಸಲು 47 ಕೋಟಿ ರೂ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ
ಕಲಬುರಗಿ ಜಿಲ್ಲೆ, ಆಳಂದ ತಾಲ್ಲೂಕು ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿಯ ರೂ.12,48 ಕೋಟಿ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ
ಮಂಗಳೂರು ಮಹಾನಗರ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ 73.73 ಕೋಟಿ ರೂ.ಗಳ ವಿಸ್ತ್ರತ ಯೋಜನಾ ವರದಿಗೆ ಅನುಮೋದನೆ
ಕಾನೂನು ಅಧಿಕಾರಿ (ಕಿರಿಯ) ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಕಾನೂನು ಅಧಿಕಾರಿ ಎಂ.ಎಲ್.ಶೈಲಜಾ ಅವರು ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಸೇವೆಯಿಂದ ವಜಾಗೊಳಿಸುವ ಮತ್ತು ದಂಡನೆ ವಿಧಿಸಲು ಅನುಮೋದನೆ
ಸಭೆಯಲ್ಲಿ ವಿಚಾರಗಳಿಗೆ ಸಂಬಂಧಿಸಿದಂತೆ ಸಚಿವ ಜೆ ಸಿ ಮಾಧುಸ್ವಾಮಿ ಅವರು ಸಭೆಯಲ್ಲಿ ನೀರಾವರಿ ಯೋಜನೆಗಳನ್ನು ತ್ವರಿತಗೊಳಿಸುವ ಬಗ್ಗೆ ವಿಶೇಷ ಒತ್ತು ನೀಡಲಾಯಿತು. ರಾಜ್ಯದಲ್ಲಿ ಸದ್ಯ ಕೋವಿಡ್-19 ನಿಯಂತ್ರಣದಲ್ಲಿರುವುದರಿಂದ ಮೂರನೇ ಅಲೆ ಬಗ್ಗೆ ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿಲ್ಲ ಎಂದರು.