- ಕಾರ್ಮಿಕ ನೀತಿ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಮಸೂದೆ, ಭೂಸ್ವಾಧೀನ ಕಾಯ್ದೆ, ವಿದ್ಯುತ್ ಖಾಸಗೀಕರಣ ನೀತಿಗಳಿಗೆ ರೈತ ಸಂಘಟನೆಗಳ ತೀವ್ರ ವಿರೋಧ
ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ವಿರುದ್ಧ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರೆ ಕೊಟ್ಟಿರುವ ಪ್ರತಿಭಟನೆಗೆ ರಾಜ್ಯದ ರೈತ ಸಂಘಟನೆಗಳು ಬೆಂಬಲ ನೀಡಿವೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮುಂತಾದ ರೈತ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿವೆ. ಹಲವೆಡೆ ರೈತರು ರಸ್ತೆ ತಡೆ, ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಸರ್ಕಾರದ ಕಾರ್ಮಿಕ ನೀತಿ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಮಸೂದೆ, ಭೂಸ್ವಾಧೀನ ಕಾಯ್ದೆ, ವಿದ್ಯುತ್ ಖಾಸಗೀಕರಣ ಇತ್ಯಾದಿ ಕ್ರಮಗಳನ್ನ ರೈತ ಸಂಘಟನೆಗಳು ಬಲವಾಗಿ ವಿರೋಧಿಸಿವೆ.
ಬೆಂಗಳೂರು, ಮೈಸೂರು, ತುಮಕೂರು, ಕೋಲಾರ, ಕಲಬುರ್ಗಿ, ಶಿವಮೊಗ್ಗ, ದಾವಣಗೆರೆ, ರಾಯಚೂರು, ಚಿತ್ರದುರ್ಗ ಮೊದಲಾದ ಜಿಲ್ಲೆಗಳಲ್ಲಿ ರೈತ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿವೆ. ಎಲ್ಲಿಯೂ ಹಿಂಸಾಚಾರ ಘಟನೆಗಳು ವರದಿಯಾಗಿಲ್ಲ. ಟೈರ್ ಸುಟ್ಟ ಘಟನೆಗಳೂ ನಡೆದಿಲ್ಲ.
ಬೆಂಗಳೂರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳ ಸದಸ್ಯರಿಂದ ಪ್ರತಿಭಟನೆ ನಡೆದಿದೆ. ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ರೈತರು ಪ್ರೀಡಂ ಪಾರ್ಕ್ನಲ್ಲಿ ಧರಣಿ ಕೂತಿದ್ದಾರೆ. ಸರ್ಕಾರವು ತನ್ನ ರೈತ ವಿರೋಧಿ ನೀತಿಗಳನ್ನ ಕೈಬಿಡಬೇಕು. ರೈತರ ಬೆಳೆಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು. ಪಂಜಾಬ್, ಕೇರಳ ಮತ್ತು ರಾಜಸ್ಥಾನದಲ್ಲಿ ಅಳವಡಿಸಲಾಗಿರುವ ಮಾದರಿ ರೈತ ನೀತಿಗಳನ್ನ ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಧರಣಿ ನಡೆಸಿದ್ದಾರೆ. ಕ್ಯಾತಸಂದ್ರ ಸರ್ಕಲ್ನಿಂದ ಜಾಸ್ ಟೋಲ್ವರೆಗೂ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ.. ನೂರಾರು ರೈತರು ಜಾಸ್ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ 48 ತಡೆಯಲು ಪ್ರಯತ್ನಿಸಿದ್ದಾರೆ. ಆದರೆ, ರಸ್ತೆ ತಡೆ ಮಾಡುವ ಪ್ರತಿಭಟನಾಕಾರರನ್ನು ಪೊಲೀಸರು ತಡೆದು ಬಂಧಿಸಿದ್ಧಾರೆ.
ಶಿವಮೊಗ್ಗದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳು ಎಂಆರ್ಎಸ್ ವೃತ್ತದ ಬಳಿ ಹೆದ್ದಾರಿ ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ದಾವಣಗೆರೆಯಲ್ಲೂ ರೈತರು ರಾ.ಹೆ.-4 ಬಂದ್ ಮಾಡಿ, ದಾವಣಗೆರೆ ಜಿ.ಪಂ. ಎದುರು ಪ್ರತಿಭಟನೆ ನಡೆಸಿದ್ದಾರೆ.
ಕಲಬುರ್ಗಿಯಲ್ಲಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಯಿತು. ಸಮಿತಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಎಐಎಎಸ್ ಮುಖಂಡ ಮೌಲಾ ಮುಲ್ಲಾ, ಭೀಮಾಶಂಕರ್ ಮಾಡುಯಾಳ ಮೊದಲಾದ ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ರಾಯಚೂರು ಮತ್ತು ಚಿತ್ರದುರ್ಗದಲ್ಲೂ ರಸ್ತೆ ತಡೆ ಮಾಡುವ ರೈತರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ಧಾರೆ.
ಮೈಸೂರಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳು ಊಟಿಗೆ ಹೋಗುವ ಹೆದ್ದಾರಿ ರಸ್ತೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿವೆ. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ನೂರಾರು ರೈತರು ಎಪಿಎಂಸಿ ಬಳಿಯ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ಹೆದ್ದಾರಿ ತಡೆ ಹಿಡಿದಿದ್ದಾರೆ. ಕಾಯ್ದೆಗಳ ಗೆಜೆಟ್ ಸುಡುವ ಮೂಲಕ ರೈತರು ಈ ವೇಳೆ ಆಕ್ರೋಶ ಹೊರಹಾಕಿದ್ದಾರೆ.