ಬೆಂಗಳೂರು: ರಾಜ್ಯದಲ್ಲಿ ಎಲ್ಲ ಬಗೆಯ ಆನ್‌ಲೈನ್ ಗೇಮ್‌ಗಳು, ಬೆಟ್ಟಿಂಗ್‌ಗಳನ್ನು ನಿಷೇಧಿಸಿ ಕರ್ನಾಟಕ ಪೊಲೀಸ್ ಕಾಯ್ದೆಗೆ ಮಾಡಿದ್ದ ತಿದ್ದುಪಡಿಯನ್ನು ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕರ್ನಾಟಕ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟಿಗೆ ಅರ್ಜಿಯನ್ನು ಸಲ್ಲಿಸಿದೆ.
ಆನ್‌ಲೈನ್ ಗೇಮಿಂಗ್ ನಿಷೇಧಿಸಿದ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ- 2021ರ ಕೆಲವು ನಿಯಮಾವಳಿಗಳನ್ನು ಹೈಕೋರ್ಟ್ ಕಳೆದ ಫೆಬ್ರವರಿ 14ರಂದು ರದ್ದುಗೊಳಿಸಿತ್ತು. ಆ ಮೂಲಕ ಸರ್ಕಾರ ಹೈಕೋರ್ಟಿನಲ್ಲಿ ಆಗಿದ್ದ ಹಿನ್ನೆಡೆಯನ್ನು ಸರಿಪಡಿಸಿಕೊಳ್ಳುವ ಜೊತೆಗೆ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ.
ಸಂವಿಧಾನದ ಪ್ರಕಾರ ಸೂಕ್ತ ಕಾಯಿದೆ ಜಾರಿಗೊಳಿಸುವುದನ್ನು ತಡೆಯಲು ತೀರ್ಪಿನಲ್ಲಿರುವ ಯಾವುದೇ ಅಂಶವನ್ನು ಅಡ್ಡಿ ಎಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ತಿಳಿಸಿತ್ತು.
ಇದನ್ನು ಓದಿ: ಆನ್‌ಲೈನ್ ಆಟಗಳು: ಕೆಲ ನಿಬಂಧನೆಯನ್ನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಕರ್ನಾಟಕ ಪೊಲೀಸ್ ಕಾಯ್ದೆಗೆ ಮಾಡಿದ್ದ ತಿದ್ದುಪಡಿ ಸಂವಿಧಾನಬಾಹಿರವೆಂದು ಸಾರಿದ್ದ ಹೈಕೋರ್ಟ್, ಸರ್ಕಾರ ನಿಯಮಾನುಸಾರ ಹೊಸ ಕಾಯಿದೆ ಮಾಡಬಹುದೆಂದು ಆದೇಶಿಸಿತ್ತು. ಅಲ್ಲದೆ, ಸದ್ಯಕ್ಕೆ ಸರ್ಕಾರ ಆನ್‌ಲೈನ್ ಗೇಮ್ಸ್ ಕಂಪನಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳಬಾರದು, ಅವುಗಳ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಮಹತ್ವದ ಆದೇಶ ನೀಡಿತ್ತು.
ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿರುವ ಮೇಲ್ಮನವಿಯಲ್ಲಿ, “ಸಾರ್ವಜನಿಕ ಸುವ್ಯವಸ್ಥೆ” ಮತ್ತು “ಸಾರ್ವಜನಿಕ ಆರೋಗ್ಯ” ಕಾಪಾಡಲು ವಿಶೇಷವಾಗಿ ಮಾಡಲಾದ ಕಾಯಿದೆ ಎಂಬುದನ್ನು ಹೈಕೋರ್ಟ್ ಪರಿಗಣಿಸಿಲ್ಲ. ಕಳೆದ ಮೂರು ವರ್ಷದಲ್ಲಿ ಪೊಲೀಸರು ಆನ್‌ಲೈನ್ ಬೆಟ್ಟಿಂಗ್ ಕುರಿತು 28 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿವೆ. ಈ ಎಲ್ಲ ಅಂಶಗಳನ್ನು ಹೈಕೋರ್ಟ್ ಪರಿಗಣಿಸಿರಲಿಲ್ಲ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ.
ಅಕ್ಟೋಬರ್ 5, 2021 ರಂದುಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ತಿದ್ದುಪಡಿ ಕಾಯಿದೆ ಮೊದಲೇ ಹಣ ಪಾವತಿಸಿ ಟೋಕನ್ ಪಡೆದು ಆಡುವ ಇಲ್ಲವೇ ನಂತರ ಪಾವತಿಸಬಹುದಾದ ಜೂಜು ಅಥವಾ ಬೆಟ್ಟಿಂಗ್ ಗಳನ್ನು ನಿಷೇಧಿಸಿದೆ. ಅಲ್ಲದೆ ಇದು ಯಾವುದೇ ಜೂಜಾಟಕ್ಕೆ ಸಂಬಂಧಿಸಿದಂತೆ ವರ್ಚುವಲ್ ನಗದು ಮತ್ತು ಹಣದ ಎಲೆಕ್ಟ್ರಾನಿಕ್ ವರ್ಗಾವಣೆಯನ್ನು ಕೂಡ ತಡೆಯುತ್ತಿತ್ತು. ತಿದ್ದುಪಡಿ ಕಾಯಿದೆ ಉಲ್ಲಂಘಿಸಿದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗೆ ದಂಡ ವಿಧಿಸಬಹುದಾಗಿತ್ತು.