ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕಗೊಂಡಿದ್ದಾರೆ. ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾಗಿ, ಅತಿ ಹಿರಿಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮೇ 15ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಹಾಲಿ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮೇ 14ರಂದು ನಿವೃತ್ತಿ ಹೊಂದಲಿದ್ದಾರೆ.
ಸುಶೀಲ್ ಚಂದ್ರ 24ನೆ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದವರು. ಈ ಹಿಂದೆ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ ಸುನೀಲ್ ಅರೋರಾ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿ 2021ರ ಏಪ್ರಿಲ್ 12ರಂದು ನಿವೃತ್ತಿ ಹೊಂದಿದ್ದರು. 2019ರ ಫೆಬ್ರವರಿ 15ರಿಂದ ಚುನಾವಣಾ ಆಯೋಗದಲ್ಲಿ ಸುಶೀಲ್ ಚಂದ್ರ ಸೇವೆ ಸಲ್ಲಿಸುತ್ತಿದ್ದಾರೆ.
ಮೇ 12ರ ಅಧಿಸೂಚನೆಯ ಪ್ರಕಾರ ಸಂವಿಧಾನದ 324ನೇ ವಿಧಿಯ ಷರತ್ತು (2) ರ ಅನುಸಾರವಾಗಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ರಾಜೀವ್ ಕುಮಾರ್ ಅವರನ್ನು ನೇಮಕಾತಿ ಮಾಡಿದ್ದಾರೆ.
1984ರ ಅವಧಿಯ ಜಾರ್ಖಂಡ್ ರಾಜ್ಯದ ಐಐಎಸ್ ಅಧಿಕಾರಿ ರಾಜೀವ್ ಕುಮಾರ್ ಮಾರ್ಚ್ 19, 2012 ರಿಂದ ಮಾರ್ಚ್ 12, 2015 ರವರೆಗೆ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯ ಜಂಟಿ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
2021ರ ಜುಲೈನಲ್ಲಿ ಇವರನ್ನು ಹಣಕಾಸು ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಈ ವರ್ಷದ ಫೆಬ್ರವರಿವರೆಗೆ ಅವರು ಈ ಹುದ್ದೆಯಲ್ಲಿದ್ದರು. ನಿವೃತ್ತಿಯ ನಂತರ ಇವರು ‘ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿ (ಪಿಇಎಸ್‌ಬಿ)’ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ದರು. ಸರಕಾರಿ ಸ್ವಾಮ್ಯದ ಸಂಸ್ಥೆಗಳ ಉನ್ನತ ಸ್ಥಾನಗಳಲ್ಲಿನ ಜವಾಬ್ದಾರಿಯನ್ನು ಈ ಮಂಡಳಿಯು ನೋಡಿಕೊಳ್ಳುತ್ತದೆ.
ರಾಜೀವ್ ಕುಮಾರ್ ಜಾರ್ಖಂಡ್ ರಾಜ್ಯದಲ್ಲಿ ತಮ್ಮ ಆರಂಭಿಕ ಆಡಳಿತಾತ್ಮಕ ವೃತ್ತಿ ಜೀವನದಲ್ಲಿ ವಿವಿಧ ಪ್ರಮುಖ ಕಾರ್ಯಯೋಜನೆಗಳನ್ನು ನಿರ್ವಹಿಸಿದ ಅನುಭವವಿದೆ. ಸುಮಾರು 30 ವರ್ಷಗಳ ತಮ್ಮ ಸೇವೆಯಲ್ಲಿ ವ್ಯಾಪಕವಾದ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ರಾಜೀವ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ.