ಜೈಪುರ: ಜುಲೈ 20ರಂದು ಜಲೋರ್ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯಲ್ಲೊಂದರಲ್ಲಿ ಪಾತ್ರೆಯಲ್ಲಿದ್ದ ನೀರು ಕುಡಿದ ದಲಿತ ವಿದ್ಯಾರ್ಥಿಯೊಬ್ಬನನ್ನು ಶಿಕ್ಷಕನೊಬ್ಬ ಅಮಾನವೀಯವಾಗಿ ಹಿಂಸೆ ಮಾಡಿದ್ದ ಘಟನೆ ನಡೆದಿದ್ದು, ಇದೀಗ ದಲಿತ ಬಾಲಕ ಸಾವನ್ನಪ್ಪಿದ್ದಾನೆ.
ಶಿಕ್ಷಕ ನೀಡಿದ ಶಿಕ್ಷೆಯಿಂದಾಗಿ ಒಂಬತ್ತು ವರ್ಷದ 3ನೇ ತರಗತಿ ದಲಿತ ವಿದ್ಯಾರ್ಥಿ ಇಂದರ್ ಮೇಘವಾಲ್ ತುಂಬಾ ಗಂಭೀರವಾಗಿ ಗಾಯಗೊಂಡಿದ್ದನು. ಮೊದಲಿಗೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಶನಿವಾರ(ಆಗಸ್ಟ್ 13) ಮೃತಪಟ್ಟಿದ್ದಾನೆ.
ಗಾಯಗೊಂಡ ಇಂದರ್ ಮೇಘವಾಲ್ ನನ್ನು ಮೊದಲು ಜಲೋರ್‌ನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉದಯಪುರಕ್ಕೆ ಉಲ್ಲೇಖಿಸಲಾಯಿತು. ಅಲ್ಲಿನ ವೈದ್ಯರು ಆತನ ಕಿವಿಯ ನರಗಳಿಗೆ ಹಾನಿಯಾಗಿರುವುದನ್ನು ಪತ್ತೆ ಮಾಡಿದರು. ಮಗುವಿನ ಸ್ಥಿತಿ ಮತ್ತಷ್ಟು ಹದಗೆಟ್ಟಾಗ, ತಜ್ಞರಿಂದ ಚಿಕಿತ್ಸೆಗಾಗಿ ಅಹಮದಾಬಾದ್‌ಗೆ ಕರೆದೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಇಂದರ್ ಮೇಘವಾಲ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸರಸ್ವತಿ ವಿದ್ಯಾ ಮಂದಿರದಲ್ಲಿ ಕಾರ್ಯನಿರ್ವಹಿಸುವ 40 ವರ್ಷದ ಆರೋಪಿ ಶಿಕ್ಷಕ ಚೈಲ್ ಸಿಂಗ್ ಶಾಲೆಯಲ್ಲಿ ಕುಡಿಯಲು ಇಟ್ಟಿದ್ದ ಮಣ್ಣಿನ ಮಡಿಕೆಯಲ್ಲಿನ ನೀರನ್ನು ದಲಿತ ಬಾಲಕ ಕುಡಿದನೆಂದು ಕೋಪಗೊಂಡು ಬಾಲಕನನ್ನು ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೊಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬಾಲಕನ ತಂದೆ ಶ್ರೀದೇವ್ ರಾಮ್ ಪೊಲೀಸರಿಗೆ ವಿಷಯ ಮುಟ್ಟಿಸಿದರು. ಕೂಡಲೇ ಸೈಲಾ ಪೊಲೀಸ್ ಠಾಣೆಯವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದರು.
ಬಾಲಕನ ತಂದೆ ಶ್ರೀದೇವ್ ರಾಮ್ ಶಾಲೆಯಲ್ಲಿ ದೊಡ್ಡ ತೊಟ್ಟಿಯೂ ಇದ್ದು, ಎಲ್ಲ ಸಮುದಾಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನೀರು ಕುಡಿಯುತ್ತಾರೆ. ಆದರೆ, ಉನ್ನತ ಜಾತಿಗೆ ಸೇರಿದ ಶಿಕ್ಷಕರಿಗೆ ಮಣ್ಣಿನ ಮಡಕೆ ಮೀಸಲಿಡಲಾಗಿದೆ. ಇಂದರ್ ಮೇಘವಾಲ್ ಮಡಕೆಯನ್ನು ಮುಟ್ಟಿದನು ಮತ್ತು ಬಾಯಾರಿಕೆಯಾದಾಗ ಅದರಲ್ಲಿ ನೀರು ಕುಡಿದನು. ಅದನ್ನು ಗಮನಿಸಿದ ಶಿಕ್ಷಕ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ ನೀಡಿ, ಈ ಘಟನೆ ಯಾಕಾಗಿ ನಡೆಯಿತು, ಕೇವಲ ನೀರು ಕುಡಿದ ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಯಿತೇ ಅಥವಾ ಬೇರೇನಾದರು ಕಾರಣಗಳಿವೆಯೇ ಎಂದು ಕೂಲಂಕುಷ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಇದೊಂದು ದುರಂತ ಘಟನೆ. ಜಾಲೋರ್‍ನ ಸೈಲಾ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರ ಶಿಕ್ಷಕನ ಇಂತಹ ವರ್ತನೆಯಿಂದ ವಿದ್ಯಾರ್ಥಿಯೊಬ್ಬ ಹಲ್ಲೆಗೊಳಗಾಗಿ ಮೃತಪಟ್ಟಿರುವುದು ದುರಂತ. ಆರೋಪಿಗಳ ವಿರುದ್ಧ ಕೊಲೆ ಹಾಗೂ ಎಸ್‍ಸಿ/ಎಸ್‍ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಕೂಡ ಘಟನೆ ಕುರಿತು ತನಿಖೆ ಆರಂಭಿಸಿದೆ. ಮುಖ್ಯ ಬ್ಲಾಕ್ ಶಿಕ್ಷಣಾಧಿಕಾರಿಗಳು ವಿಚಾರಣಾ ಸಮಿತಿಯನ್ನು ರಚಿಸಿದ್ದು, ತನಿಖೆಯನ್ನು ಪಂಚಾಯತ್ ಪ್ರಾಥಮಿಕ ಶಿಕ್ಷಣಾಧಿಕಾರಿ ಅಶೋಕ್ ಕುಮಾರ್ ದವೆ ಅವರಿಗೆ ವಹಿಸಲಾಗಿದೆ.