ಜೈಪುರ: ರಾಜಸ್ಥಾನ ರಾಜ್ಯದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು(ಫೆಬ್ರವರಿ 10) ಬಜೆಟ್ ಭಾಷಣ ಪ್ರತಿ ಓದುವ ವೇಳೆ ಕಳೆದ ವರ್ಷದ ಬಜೆಟ್ ಪ್ರತಿ ಓದಿ ನಗೆಪಾಟಲಿಗೆ ಈಡಾದ ಘಟನೆ ನಡೆದಿದೆ.
ತಮ್ಮ ಮೂರನೇ ಅವಧಿಯ ಬಜೆಟ್ ಅನ್ನು ಮಂಡಿಸಬೇಕಾಗಿತ್ತು. ಆದರೆ, ಆರಂಭದ 8-10 ನಿಮಿಷಗಳ ಕಾಲ, ಮುಖ್ಯಮಂತ್ರಿ ಅಶೋಕ್ ಹಳೆಯ ಬಜೆಟ್ ಅನ್ನು ಓದುತ್ತಿದ್ದಾರೆಂದು ಬಹುತೇಕರಿಗೆ ತಿಳಿದಿರಲಿಲ್ಲ. ಮುಖ್ಯ ಸಚೇತಕ ಮಹೇಶ್ ಜೋಶಿ ಅವರು ಪ್ರಮಾದವನ್ನು ಸರಿಪಡಿಸಲು ಮುಂದಾದರು.
ಇದನ್ನು ಓದಿ: ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸಬರ ಆಯ್ಕೆ ಸಾಧ್ಯತೆ; ಮಹತ್ವ ಪಡೆದಿದೆ ಇಂದಿನ ಸಭೆ
ಸದನದ ಅಧಿಕಾರಿಗಳಿಗೆ ಮೀಸಲಾಗಿದ್ದ ಗ್ಯಾಲರಿಯಲ್ಲಿ ಕುಳಿತಿದ್ದ ಉನ್ನತ ಹಣಕಾಸು ಇಲಾಖೆಯ ಅಧಿಕಾರಿಗಳು ಅವ್ಯವಸ್ಥೆ ಕುರಿತು ಮುಖ್ಯ ಸಚೇತಕರಿಗೆ ಮಾಹಿತಿ ರವಾನಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಪ್ರಮಾದವನ್ನು ಸರಿಪಡಿಸಿಕೊಂಡಿದ್ದಾರೆ.
ಬಜೆಟ್ ಮಂಡನೆ ವೇಳೆ ಅಶೋಕ್ ಗೆಹ್ಲೋಟ್ ಕಳೆದ ವರ್ಷ ಜಾರಿಗೆ ತಂದ ಹಳೆಯ ಯೋಜನೆಗಳು ಮತ್ತು ನಗರಾಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸಿದ್ದರು. ಆಗ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಿದ್ದು, ಪ್ರಮಾದವಾಗಿರುವ ಬಗ್ಗೆ ಗೆಹ್ಲೋಟ್ ಅವರ ಗಮನ ಬಂದ ಬಳಿಕ ಕ್ಷಮೆಯಾಚಿಸಿದರು.
ಮುಖ್ಯಮಂತ್ರಿ ಭಾಷಣದ ವೇಳೆ ಗದ್ದಲ ಎಬ್ಬಿಸಿದ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು. ಸಮಾಧಾನದಿಂದ ಇರುವಂತೆ ಸಭಾಧ್ಯಕ್ಷ ಸಿಪಿ ಜೋಶಿ ಮನವಿ ಮಾಡಿಕೊಂಡದರೂ ಕೇಳದ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದ್ದರಿಂದ ಸದನವನ್ನು ಅರ್ಧ ಗಂಟೆ ಮುಂದೂಡಬೇಕಾಯಿತು.
ಇದನ್ನು ಓದಿ: ರಾಜಸ್ಥಾನ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ: ಬಿಜೆಪಿ ನಿರ್ಧಾರ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಿಜೆಪಿ ನಾಯಕಿ ವಸುಂಧರಾ ರಾಜೆ ಸಿಂಧಿಯಾ, ’ಮುಖ್ಯಮಂತ್ರಿ 8 ನಿಮಿಷಗಳ ಕಾಲ ಹಳೆಯ ಬಜೆಟ್ ಪ್ರತಿಯನ್ನು ಓದಿದರು. ನನ್ನ ಆಡಳಿತ ಅವಧಿಯಲ್ಲಿ ಕನಿಷ್ಠ ಎರಡು-ಮೂರು ಬಾರಿ ಬಜೆಟ್ ಪ್ರತಿ ಓದುತ್ತಿದ್ದೆ ಮತ್ತು ಪರಿಶೀಲಿಸುತ್ತಿದ್ದೆ. ಈ ರೀತಿಯ ದೊಡ್ಡ ದಾಖಲೆಯನ್ನು ನಿರ್ಲಕ್ಷ್ಯದಿಂದ ಓದಿರುವ ಮುಖ್ಯಮಂತ್ರಿ ಕೈಯಲ್ಲಿ ರಾಜಸ್ಥಾನ ಎಷ್ಟು ಸುರಕ್ಷಿತ’ ಎಂದು ಟೀಕಿಸಿದ್ದಾರೆ.
ಅಲ್ಲದೇ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಬಜೆಟ್ ಅಧಿವೇಶನವನ್ನು ನೇರಪ್ರಸಾರ ಮಾಡಲು ಯೋಜಿಸಲಾಗಿತ್ತು. ರಾಜ್ಯದ ಜನಸಂಖ್ಯೆಯ ಶೇಕಡಾ 4 ರಷ್ಟಿರುವ ರಾಜ್ಯದ ಯುವಜನರ ಮತವನ್ನು ಗುರಿಯಾಗಿಟ್ಟುಕೊಂಡು ಅಶೋಕ್ ಗೆಹ್ಲೋಟ್ ಸರ್ಕಾರ ನೇರಪ್ರಸಾರದ ಮೂಲಕ ವೀಕ್ಷಣೆಗೆ ಮಾಡಲು ಸುತ್ತೋಲೆ ಹೊರಡಿಸಿತ್ತು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ