ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಚುನಾವಣಾ ತಯಾರಿ ಪ್ರಕ್ರಿಯೆ ಸಮರ್ಥವಾಗಿ ನಿಭಾಯಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ 12 ಕೆಎಎಸ್ ಶ್ರೇಣಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳ ನೇತೃತ್ವದಲ್ಲಿ ಮತದಾರರ ಮಾಹಿತಿ ಪರಿಶೀಲನೆ ನಡೆಯಲಿದ್ದು, ಅವರು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೇಲೆ ನಿಗಾ ಇಡಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಕರಡು ಮತದಾರರ ಪಟ್ಟಿ ಕುರಿತಂತೆ ಆಕ್ಷೇಪಣೆಗಳು ಸಲ್ಲಿಕೆ ಹಾಗೂ ಹಕ್ಕುಗಳ ಪರಿಶೀಲನೆ ಕುರಿತಂತೆ ವಿಷಯ ಪ್ರಸ್ತಾಪಿಸಿದ ತುಷಾರ್ ಗಿರಿನಾಥ್, ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಸಾಪ್ತಾಹಿಕ ಸಭೆಗಳಲ್ಲಿ ನಿರಂತರತೆ ಕಾಯ್ದುಕೊಳ್ಳಲು ಬೂತ್ ಮಟ್ಟದಲ್ಲಿ ಖಾಯಂ ಏಜೆಂಟರನ್ನು ನೇಮಿಸುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ವಾರಕ್ಕೊಮ್ಮೆ ಸಭೆಗಳು ನಡೆಯಲಿದ್ದು, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ರಾಜಕೀಯ ಪಕ್ಷದ ಏಜೆಂಟರನ್ನು ಒಳಗೊಂಡು ನಮೂನೆ 6 (ಹೊಸ ನೋಂದಣಿ), ನಮೂನೆ 7 (ರದ್ದತಿ) ಮತ್ತು ನಮೂನೆ 8(ತಿದ್ದುಪಡಿ)ರ ಅಡಿಯಲ್ಲಿ ಕರಡು ಪಟ್ಟಿಯನ್ನು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ನಗರದ ಚಿಕ್ಕಪೇಟೆ, ಮಹದೇವಪುರ, ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮಾಹಿತಿ ಪರಿಷ್ಕರಣೆ ನಡೆಯುತ್ತಿದೆ. ಮತದಾರರ ಮಾಹಿತಿ ಪರಿಷ್ಕರಣೆ ಮಾಡಲಾಗುತ್ತಿದೆ. ಆ ಕ್ಷೇತ್ರಗಳಲ್ಲಿ ಸಂಪೂರ್ಣ ಮರುಪರಿಶೀಲನೆ ಪ್ರಗತಿಯಲ್ಲಿದೆ ಮತ್ತು ಆಕ್ಷೇಪಣೆಗಳು ಮತ್ತು ಹಕ್ಕುಗಳನ್ನು ಸಲ್ಲಿಸಲು ದಿನಾಂಕ ವಿಸ್ತರಿಸಲಾಗಿದ್ದು. ಡಿಸೆಂಬರ್ 24 ರವರೆಗೆ ಪರಿಷ್ಕರಣೆ ನಡೆಯಲಿದೆ ಎಂದರು.
25 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದ್ದು, ದೋಷಗಳಿದ್ದಲ್ಲಿ ಮತದಾರರು ಮತ್ತು ರಾಜಕೀಯ ಪಕ್ಷಗಳು ಬದಲಾವಣೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಮತದಾರರು ಮತ್ತು ರಾಜಕೀಯ ಪಕ್ಷಗಳ ಅನುಕೂಲಕ್ಕಾಗಿ ಎಲ್ಲಾ ಬಿಎಲ್‌ಒಗಳ ಮಾಹಿತಿಯನ್ನು ಅವರ ಫೋನ್ ಸಂಖ್ಯೆಗಳು ಮತ್ತು ವಾರ್ಡ್ ಮತ್ತು ರಸ್ತೆ ವಿವರಗಳೊಂದಿಗೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ರಾಜಕೀಯ ಪಕ್ಷಗಳು ತಮ್ಮ ಇ-ಮೇಲ್ ವಿಳಾಸವನ್ನು ನೀಡಿದ್ದು, ಪ್ರತಿ ವಾರದ ಮಾಹಿತಿ ಆಯಾ ರಾಜಕೀಯ ಪಕ್ಷಕ್ಕೆ ಕಳುಹಿಸುತ್ತೇವೆ ಎಂದು ಹೇಳಿದರು.
ಇಂದಿರಾ ಮೊಬೈಲ್ ಕ್ಯಾಂಟೀನ್ ಸ್ಥಗಿತ
ಬಿಬಿಎಂಪಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಮೊಬೈಲ್ ಕ್ಯಾಂಟೀನ್ ಗಳನ್ನು ಸ್ಥಗಿತಗೊಳಿಸಲಾಗಿದೆ. ಶೆಫ್ಟೆಕ್ ಕಂಪನಿಗಳು ಕಡಿಮೆ ಬಿಲ್ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿವೆ. ಅದಮ್ಯ ಚೇತನ ಸಂಸ್ಥೆಗೆ ವಿಸ್ತರಿಸುವ ಕುರಿತಂತೆ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.