ಖಾಕಿಕೋಟೆಯಾಯ್ತು ಕೆಂಪುಕೋಟೆ ನಗರ – ಅನ್ನದಾತರ ತಡೆಗೆ ಸರ್ಕಾರದ ವಿಫಲ ಯತ್ನ
ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ಕೃಷಿ ಕಾನೂನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಲು ರಾಜಧಾನಿ ಹೊಸದಿಲ್ಲಿ ಕಡೆಗೆ ನಡೆಯುವುದನ್ನು ತಡೆಯುವ ಹರಿಯಾಣ ಸರ್ಕಾರದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ರೈತರು ದೆಹಲಿ ಕಡೆಗೆ ನಡೆದಿದ್ದಾರೆ.
ಶುಕ್ರವಾರ ಬೆಳಗ್ಗೆಯಿಂದಲೇ ಕೃಷಿಕರು ಜಮಾಯಿಸುತ್ತಿದ್ದಾರೆ. ದಿಲ್ಲಿ-ಹರಿಯಾಣ ಮಾರ್ಗದ ಗಡಿಯತ್ತ ಅನ್ನದಾತರು ಲಗ್ಗೆ ಹಾಕಿದ್ದಾರೆ. ರೈತರ ಪ್ರತಿಭಟನೆಯನ್ನು ನಿಯಂತ್ರಿಸಲು ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಾಹನ ಸಂಚಾರವನ್ನು ನಿಯಂತ್ರಿಸಲು ಪೊಲೀಸರು ಸಜ್ಜಾಗಿದ್ದಾರೆ. ಇತರೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ
.
ರಾಜಧಾನಿಯತ್ತ ಆಗಮಿಸುತ್ತಿರುವ ರೈತರನ್ನು ಮಾರ್ಗ ಮಧ್ಯೆ ತಡೆಯಲು ರಸ್ತೆಗಳನ್ನು ದೊಡ್ಡದೊಡ್ಡ ಕಲ್ಲುಗಳನ್ನು ಹಾಕಿ ಬಂದ್ ಮಾಡಿದ್ದರು. ಬ್ಯಾರಿಕೇಡ್‍ಗಳನ್ನು ಮುಳ್ಳುತಂತಿಗಳಿಂದ ಸುತ್ತಿ ಪಾಕಿಸ್ತಾನ ಗಡಿಯಲ್ಲಿ ಹಾಕಿರುವಂತೆ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಜೊತೆಗೆ ಸಾವಿರಾರು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಆದರೆ ಈ ಯಾವ ಅಡ್ಡಿಗಳೂ ರೈತರನ್ನು ತಡೆಯಲಾಗಲಿಲ್ಲ. ಕೊನೆಗೆ ರೈತರನ್ನು ಚದುರಿಸಲು ಹರಿಯಾಣ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಆದರೂ ರೈತರನ್ನು ತಡೆಯಲಾಗದೆ ಪೊಲೀಸರು ಅಸಹಾಯಕರಾಗಿದ್ದಾರೆ.
ಗಡಿ ಭಾಗದಿಂದ ಹೊಸದಿಲ್ಲಿಗೆ ಆಗಮಿಸುತ್ತಿರುವ ವಾಹನಗಳನ್ನು ಪೊಲೀಸರು ತಪಾಸಣೆ ಮಾಡಿ ಒಳಗೆ ಬಿಡುತ್ತಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಹೆಚ್ಚುವರಿ ಸಿಐಎಸ್‌ಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. ಗಡಿ ಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಗಡಿ ಭಾಗದಲ್ಲಿ ಖಾಕಿ ಕೋಟೆ ನಿರ್ಮಾಣವಾಗಿದೆ. ಈ ಕೋಟೆಗೆ ಮುತ್ತಿಗೆ ಹಾಕಲು ಕೃಷಿಕರ ದಂಡಯಾತ್ರೆ ಜೋರಾಗಿ ಸಾಗಿದೆ.