- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಕೃಷಿ ಕಾನೂನುಗಳಿಗೆ ದೇಶವ್ಯಾಪಿ ಪ್ರತಿಭಟನೆ
ಬೆಂಗಳೂರು: ‘ಕನ್ನಡ ಚಲನಚಿತ್ರ ನಟರು ಚುನಾವಣಾ ಪ್ರಚಾರಕ್ಕೆ ವೇಗವಾಗಿ ಸ್ಪಂದಿಸುತ್ತಾರೆ. ಆದರೆ, ರೈತರ ಪರವಾಗಿ ಒಂದೂ ಮಾತನ್ನು ಆಡಿಲ್ಲ’ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಇಡೀ ದೇಶದ ರೈತರು ಕಳೆದ 12 ದಿನಗಳಿಂದ ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿರುವ ಚೇತನ್, ರೈತರನ್ನು ಬೆಂಬಲಿಸದ ನಟರ ನಿಲುವನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರಶ್ನಿಸಿದ್ದಾರೆ.
‘ಕೇಂದ್ರ ಕೃಷಿ ಮಸೂದೆಯನ್ನು ಖಂಡಿಸಿ ರೈತರು ಕಳೆದ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಚುನಾವಣಾ ಪ್ರಚಾರದ ಬ್ಯಾಂಡ್‌ವ್ಯಾಗನ್‌ಗಳ ಮೇಲೆ ವೇಗವಾಗಿ ನೆಗೆಯುವ ಕನ್ನಡ ಚಲನಚಿತ್ರ ನಟರು ರೈತರಿಗೆ ಬೆಂಬಲವಾಗಿ ಒಂದು ಮಾತನ್ನೂ ಹೇಳಿಲ್ಲ. ನಾವು ನಟರು ಜನರಿಗೆ ಸಹಾಯ ಮಾಡುವ ಬಗ್ಗೆ ಕಾಳಜಿ ವಹಿಸುತ್ತೇವೆಯೇ? ಅಥವಾ ನಮ್ಮ ಶ್ರೀಮಂತ ಗಣ್ಯ ಸ್ನೇಹಿತರನ್ನು ಇನ್ನಷ್ಟು ಪ್ರಚೋದಿಸಲು ನಾವು ನಟರು ಮಾತ್ರ ಆಸಕ್ತಿ ಹೊಂದಿದ್ದೇವೆಯೇ? ಎಂದು ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಚುನಾವಣಾ ಸಂದರ್ಭ ರಾಜಕಾರಣಿಗಳನ್ನು ಬೆಂಬಲಿಸಿ ಚುನಾವಣಾ ಪ್ರಚಾರ ನಡೆಸುವ ನಟ–ನಟಿಯರ ನಡೆಗೆ ಅವರು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
Kannada film actors who are so quick to jump on election campaign bandwagons haven’t uttered a peep in solidarity w/ #farmers who have been protesting for months
Do we actors care abt helping people at large or is just about sucking up to wealthy elite friends of ours even more?
— Chetan Kumar / ಚೇತನ್ (@ChetanAhimsa) December 7, 2020
ನಟನೆಯ ಜತೆಗೆ ಸಾಮಾಜಿಕ ಮತ್ತು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಚೇತನ್, ರೈತರ ಹೋರಾಟಕ್ಕೆ ಸಿನಿಮಾ ರಂಗದವರಿಂದಲೂ ಬೆಂಬಲ ವ್ಯಕ್ತವಾಗಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮೂರು ಪ್ರಮುಖ ಕೃಷಿ ಮಸೂದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆ ಜಾರಿಗೊಳಿಸಲು ಮುಂದಾಗಿತ್ತು. ಇದನ್ನು ವಿರೋಧಿಸಿ ದೇಶ ವ್ಯಾಪಿ ಲಕ್ಷಾಂತರ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪಂಜಾಬಿನ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದು 12ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಹಲವು ಸುತ್ತಿನ ಮಾತುಕತೆಗಳು ನಡೆದರೂ ಅವು ಸಫಲವಾಗಿಲ್ಲ. ಇದೇ 8ರಂದು ರಾಷ್ಟ್ರವ್ಯಾಪಿ ಬಂದ್ಗೂ ರೈತರು ಕರೆ ನೀಡಿದ್ದಾರೆ. ಕಾಂಗ್ರೆಸ್, ಎಡಪಕ್ಷಗಳು ಹಾಗೂ ಎಲ್ಲಾ ಕಾರ್ಮಿಕ ಸಂಘಟನೆಗಳು ಈ ಬಂದ್‍ಗೆ ಬಲ ಸೂಚಿಸಿವೆ.