ರೈತ ಚಳುವಳಿಯನ್ನು ಎದೆಗಪ್ಪಿಕೊಂಡ ಕಥನ : ಬಿಳಿಮಲೆ

ಇಂದು ಬಿಡುಗಡೆಯಾಗುತ್ತಿರುವ ‘ಕದನ ಕಣ: ದೆಹಲಿ ಗಡಿಗಳಲ್ಲಿ ರೈತರೊಂದಿಗೆ” ಎಂಬ ರೈತ ನಾಯಕ ಎಚ್.ಆರ್.ನವೀನ್ ಕುಮಾರ್ ಬರೆದ ಅನುಭವ ಕಥನದ ಮುನ್ನುಡಿ

ಹಾಸನದ ಗೆಳೆಯ ಎಚ್ ಅರ್ ನವೀನ್‌ಕುಮಾರ್ ಮತ್ತು ಮೈಸೂರಿನ ಜಗದೀಶ್ ಸೂರ್ಯ ಜೊತೆಯಾಗಿ ದೆಹಲಿಗೆ ಬರುವ ಸುದ್ದಿ ತಿಳಿಯುತ್ತಿದ್ದಂತೆ ನನಗೆ ಬಹಳ ಸಂತೋಷವಾದ್ದಕ್ಕೆ ಎರಡು ಮುಖ್ಯ ಕಾರಣಗಳಿದ್ದುವು. ಮೊದಲನೆಯದ್ದೆಂದರೆ, ಜನಪರವಾಗಿ ಮಾತ್ರ ಯೋಚಿಸಬಲ್ಲ ಈ ಗೆಳೆಯನೊಳಗೊಬ್ಬ ಕಲಾವಿದ ಇದ್ದಾನೆ. ಆತ ಒಳ್ಳೆಯ ಛಾಯಾಚಿತ್ರಗ್ರಾಹಕನೂ ಹೌದು. ಕಲಾವಿದರಿಗೆ, ಛಾಯಾಚಿತ್ರಗ್ರಾಹಕರಿಗೆ ನಮ್ಮ ಸಾಮಾನ್ಯ ಕಣ್ಣಿಗೆ ಕಾಣದ್ದೆಲ್ಲ ಕಾಣುತ್ತಿರುತ್ತದೆ. ಹಾಗಾಗಿ ಈತ ಏನಾದರೂ ಹೊಸತು ಕಂಡು ಹುಡುಕಿ ನಮಗೆಲ್ಲ ಹೇಳುತ್ತಾನೆ ಎಂಬ ನಿರೀಕ್ಷೆ. ಎರಡನೆಯದು, ಉತ್ತರ ಭಾರತದಲ್ಲಿ ನಡೆಯುತ್ತಿರುವ ರೈತರ ಐತಿಹಾಸಿಕ ಹೋರಾಟದೊಂದಿಗೆ ಕರ್ನಾಟಕ ಪ್ರಾಂತ ರೈತ ಸಂಘವೂ ಸೇರಿಕೊಂಡಂತಾಯಿತು. ಪ್ರಸ್ತುತ ಪುಸ್ತಕವನ್ನು ಓದಿದಾಗ, ನನಗಾದ ಸಂತೋಷವು ಆಕಸ್ಮಿಕವಲ್ಲ ಎಂಬುದು ಖಚಿತವಾಯಿತು. ನವೀನ್ ಚಳುವಳಿಯನ್ನು ಎದೆಗಪ್ಪಿಕೊಂಡು ಈ ಪುಸ್ತಕವನ್ನು ಬರೆದಿದ್ದಾರೆ. ಬಹುಶ: ಅವರು ತೆಗೆದಿರುವ ಭಾವಚಿತ್ರಗಳನ್ನು ಬಣ್ಣದಲ್ಲಿ ಪ್ರಕಟಿಸಿದರೆ ನಮಗೆ ಇನ್ನೊಂದು ಲೋಕ ಕಂಡೀತು.

ಈ ಪುಟ್ಟ ಪುಸ್ತಕದ ಮಹತ್ವ ತಿಳಿಯಬೇಕಾದರೆ ಈಗ ನಡೆಯುತ್ತಿರುವ ರೈತ ಚಳುವಳಿಯ ಬಗೆಗೆ ಮುಖ್ಯವಾಹಿನಿಯ ಮಾಧ್ಯಮಗಳು ಮಾಡುವ ವರದಿಗಳನ್ನು ಗಮನಿಸಬೇಕು. ಭಾರತೀಯ ಪ್ರಜಾಪ್ರಭುತ್ವದ ಕೇಂದ್ರವಾದ ದೆಹಲಿಯ ಸಂಸತ್ ಭವನದಿಂದ ಸುಮಾರು 40 ಕಿಮೀ ದೂರದಲ್ಲಿ ಐದು ಕಡೆಗಳಲ್ಲಿ ಲಕ್ಷಾಂತರ ರೈತರು ಭಾರತದ ಬಾವುಟ ಹಿಡಿದು ಬೀಡು ಬಿಟ್ಟಿದ್ದರೂ ಮಾರಿಕೊಂಡ ಮಾಧ್ಯಮಗಳ ಕಣ್ಣಿಗೆ ಇವು ಬೀಳುವುದೇ ಇಲ್ಲ. ಬಿದ್ದರೂ ಅವಕ್ಕೆ ಹೋರಾಟವನ್ನು ಅರ್ಥಮಾಡಿಕೊಳ್ಳುವ ಯೋಗ್ಯತೆಯಿಲ್ಲ. ಹೀಗಾಗಿ ನಮಗೆ ನವೀನ್ ಅಂತವರು ಮಾಡುವ ವರದಿ ಮತ್ತು ಬರೆಯುವ ಪುಸ್ತಕ ಬಹಳ ಮುಖ್ಯವಾಗುತ್ತದೆ. ಅವು ಚಳುವಳಿಯನ್ನು ಹೃದಯದ ಭಾಷೆಯಲ್ಲಿ ಮಂಡಿಸುತ್ತವೆ. ಹೋರಾಟ ನಿರತ ರೈತರಿಗೆ ಇದು ಚೆನ್ನಾಗಿ ತಿಳಿದಿರುವುದರಿಂದಲೇ ಅವರು ‘ಟ್ರಾಲಿ ಟಾಯಿಮ್ಸ್ʼ ಎಂಬ ನಾಲ್ಕು ಪುಟದ ಪತ್ರಿಕೆಯನ್ನು ಸುರುಮಾಡಿಕೊಂಡರು. ಇದನ್ನು ಸುರುಮಾಡಿದವಳು 29 ವರ್ಷದ ರವಿಕಿರಣ್‌ನತ್ ಎಂಬ ಹುಡುಗಿ.  ಪತ್ರಿಕೆಯ ಮೊದಲ ಪುಟದಲ್ಲಿ ಚಳುವಳಿಯ ಸುದ್ದಿ, ಮತ್ತು ನಾಳೆ ಏನೇನು ನಡೆಯಲಿದೆ ಎಂಬುದರ ಕುರಿತು ಪ್ರಕಟಣೆ, ಎರಡು ಮತ್ತು ಮೂರನೇ ಪುಟದಲ್ಲಿ ಮೈ ನವಿರೇಳಿಸುವ ಹೋರಾಟದ ಕತೆಗಳು, ನಾಲ್ಕನೇ ಪುಟದಲ್ಲಿ ಕವಿತೆ, ಕಾರ್ಟೂನ್, ಫೋಟೋ ಇತ್ಯಾದಿಗಳಿರುತ್ತವೆ. ಚಳುವಳಿಯಲ್ಲಿ ಭಾಗಿಯಾದವರೆಲ್ಲ ಗುಂಪು ಗುಂಪಾಗಿ ಟ್ರಾಲಿ ಟಾಯಿಮ್ಸ್ ಓದುತ್ತಾರೆ. ರೈತ ನಾಯಕರು ಫೇಸ್ ಬುಕ್, ಯುಟ್ಯೂಬ್‌ಗಳಲ್ಲಿ ಲೈವ್ ಬಂದರೆ, ಟ್ರಾಲಿಯಡಿಯಲ್ಲಿ ಮಲಗಿಕೊಂಡೇ ಅದಕ್ಕೆ ಕಿವಿಗೊಡುತ್ತಾರೆ. ಇಂಥ ಪ್ರಯತ್ನಗಳ ಮೂಲಕ ರೈತರು ಪರ್ಯಾಯ ಮಾಧ್ಯಮಗಳನ್ನು ಸೃಷ್ಟಿಸಿಕೊಂಡು ಅವುಗಳ ಮೂಲಕ ತಮ್ಮ ನಿಲುವುಗಳನ್ನು ವಿಶ್ವಕ್ಕೆ ತಿಳಿಯಪಡಿಸಿದ್ದಾರೆ. ಪಂಜಾಬಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸುತ್ತಿರುವ ಯುವಕರು ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಮತ್ತು 10ಕ್ಕೂ ಹೆಚ್ಚು ಹ್ಯಾಶ್‌ಟ್ಯಾಗ್‌ಗಳ ಮೂಲಕ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮವಾಗಿ ಇವತ್ತು ರೈತ ಹೋರಾಟದ ಬಗ್ಗೆ ಜಗತ್ತಿಗೆ ತಿಳಿದಿದೆ.ಆಸ್ರ್ಟೇಲಿಯಾ, ಕೆನಡಾ, ಇಟಲಿ, ನ್ಯೂಜಿಲ್ಯಾಂಡ್, ಪಾಕಿಸ್ಥಾನ, ಇಂಗ್ಲAಡ್, ಅಮೇರಿಕಾ ಮತ್ತಿತರ ದೇಶಗಳು ರೈತರ ಪರವಾಗಿ ತಮ್ಮ ಸಹಾನುಭೂತಿಯನ್ನು ಪ್ರಕಟಿಸಿವೆ. ಕನ್ನಡದಲ್ಲೊಂದು ಪುಸ್ತಕ ಪ್ರಕಟಿಸುವುದರ ಮೂಲಕ ನವೀನ್ ಕರ್ನಾಟಕವನ್ನು ಹೊರಾಟದೊಂದಿಗೆ ಸೇರಿಸಿದ್ದಾರೆ.

ಜನವರಿ 12ರಂದು ತನ್ನ ಪ್ರಯಾಣ ಆರಂಭಿಸಿದ ನವೀನ್ ಮುಂದಿನ ತನ್ನ 10 ದಿನಗಳ ಪ್ರಯಾಣವನ್ನು ಅತ್ಯಂತ ಕುತೂಹಲದಿಂದಲೇ ಕಂಡಿದ್ದಾರೆ. ಸ್ವತ: ಬಗೆ ಬಗೆಯ ಹೋರಾಟಗಳನ್ನು ಸಂಘಟಿಸಿದ ಅವರಿಗೆ ರೈತರ ಹೋರಾಟವೇನೂ ಹೊಸದಲ್ಲ, ಆದರೆ ಈ ಹೋರಾಟವನ್ನು ಹೊಸದೆಂಬಂತೆ ಅನುಭವಿಸಲು ಒಂದು ಕಾರಣವೆಂದರೆ ದೆಹಲಿ ಪರಿಸರದ ಭೌಗೋಳಿಕತೆ. ಹಾಗಾಗಿ ಪುಸ್ತಕದಲ್ಲಿ ಅವರು ದೆಹಲಿಯ ವಿವಿಧ ಗಡಿಗಳನ್ನು ಸಂರ್ಕಿಸುವಾಗ ಕಾಣುವ ವಿಶಾಲವಾದ ಜಾಗಕ್ಕೆ ಮಾರು ಹೋಗುತ್ತಾರೆ. ಚಳುವಳಿಯ ಸ್ಥಳಗಳಲ್ಲಿ ಕಾಣುವ ಮುದುಕರು, ಯುವಕರು, ಮಕ್ಕಳು ಮತ್ತು ಮಹಿಳೆಯರನ್ನು  ಸೂಕ್ಷ್ಮವಾಗಿ ಗಮನಿಸುತ್ತಾರೆ. ಚಳುವಳಿಯ ಭಾಗವಾಗಿ ಬೆಳೆದ ಬೀದಿ ನಾಟಕವೇ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ಥೆಯಿಂದ ವೀಕ್ಷಿಸಿ ಅದರ ಬಗ್ಗೆ ಬರೆಯುತ್ತಾರೆ. ಅವರು ಒಂದೆಡೆ ಬರೆಯುವುದನ್ನು ಗಮನಿಸಿರಿ- ‘ಹಾಗೆ ಸ್ವಲ್ಪ ಮುಂದೆ ಹೋದರೆ, ಅಲ್ಲಿ ಹರಿಯಾಣದ ರೈತರು ಹಾಡುಗಳನ್ನು ಹಾಡುತ್ತಿದ್ದರು. ಇಲ್ಲಿ ಅವರು ಬಳಸುತ್ತಿದ್ದುದು ಪಕ್ಕಾ ದೇಸೀ ವಾದ್ಯಗಳು. ಹಾರ್ಮೋನಿಯಂ, ಮಣ್ಣಿನ ಮಡಕೆ, ಅದರ ಬಾಯಿಗೆ ತೆಳುವಾದ ರಬ್ಬರ್ ಶೀಟುಗಳನ್ನು ಎಳೆದು ಕಟ್ಟಲಾಗಿತ್ತು. ಇದು ಒಂದು ರೀತಿಯ ತಮಟೆ ಇದ್ದ ಹಾಗೆ. ಕೈಯಲ್ಲಿ ಟಯರ್‌ನ ಒಂದು ಸಣ್ಣ ತುಂಡನ್ನು ಹಿಡಿದುಕೊಂಡು ಗಡವನ್ನು ಬಾರಿಸುತ್ತಿದ್ದರೆ, ಅದರ ತಾಳಕ್ಕೆ ತಕ್ಕಂತೆ ಹಾಡು, ಇವುಗಳಿಗೆ ಹೆಜ್ಜೆ ಹಾಕದೆ ಮುಂದೆ ಹೋಗಲು ಸಾಧ್ಯವಿಲ್ಲʼ. ನವೀನ್ ಒಬ್ಬ ನುರಿತ ಜಾನಪದ ತಜ್ಞನಂತೆ ಬರೆಯುವ ರೀತಿ ಸೊಗಸಾಗಿದೆ.

ಮೂರು ಹೊಸ ಕಾಯ್ದೆಗಳು

ಕೃಷಿ ವಿಷಯವಾದ ಪ್ರಶ್ನೆಗಳ ಗಹನತೆಯನ್ನು ಅರ್ಥಮಾಡಿಕೊಳ್ಳದ ಪ್ರಸ್ತುತ ಸರಕಾರವು ಜನರೆಲ್ಲ ಕೊರೋನಾ ಭಯದಿಂದ ತತ್ತರಿಸುತ್ತಿರುವಾಗ, ಲೋಕಸಭೆ, ರಾಜ್ಯಸಭೆಗಳಲ್ಲಿ  ವಿಸ್ತೃತ ಚರ್ಚೆಯನ್ನೂ ಮಾಡದೆ, ವಿವಾದಾಸ್ಪದವಾಗಿರುವ ಮೂರು ಕಾಯ್ದೆಗಳನ್ನು ತರಾತುರಿಯಿಂದ ಜ್ಯಾರಿಗೆ ತಂದಿದೆ. ಇದರಲ್ಲಿ ಮೊದಲನೆಯದಾದ, ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆಯು ಮೇಲ್ನೋಟಕ್ಕೆ ಮುಕ್ತ ವ್ಯವಸ್ಥೆಯಂತೆ ಕಂಡರೂ ನಿಧಾನವಾಗಿ ಅದು ಎಪಿಎಂಸಿಗಳನ್ನು ಸ್ಥಗಿತಗೊಳಿಸುತ್ತದೆ. ಜೊತೆಗೆ ಸರಕಾರವು ಈಗ ನೀಡುತ್ತಿರುವ ಅನೇಕ ಬಗೆಯ ಸಬ್ಸಿಡಿಗಳನ್ನು ಕೊನೆಗೊಳಿಸುತ್ತದೆ. ನಮ್ಮ ದೇಶದಲ್ಲಿ ಇನ್ನೂ 68.8 ಶೇಕಡಾ ಜನರು (ಸುಮಾರು 80 ಕೋಟಿ) ಬಡತನದ ರೇಖೆಯಿಂದ ಕೆಳಗಿರುವಾಗ ಸರಕಾರವು ಇಂತ ಜವಾಬ್ದಾರಿಗಳಿಂದ ತನ್ನನ್ನು ಮುಕ್ತಗೊಳಿಸಿಕೊಳ್ಳಬಾರದು.

ಎರಡನೆಯದಾದ ಅಗತ್ಯ ಸರಕುಗಳ (ತಿದ್ದುಪಡಿ) ಸುಗ್ರೀವಾಜ್ಞೆಯು ಏಜೆಂಟರು ಯಾವುದೇ ಕಾನೂನು ಕ್ರಮದ ಭಯವಿಲ್ಲದೆ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ, ಒಬ್ಬ ರೈತನಿಗೆ ಏನಾದರೂ ಅನ್ಯಾಯವಾದರೆ, ಆತ ನ್ಯಾಯಾಲಯಕ್ಕೆ ಹೋಗದಂತೆಯೂ ಮಾಡಿದೆ.  ಒಂದು ಕಾಯ್ದೆಯನ್ನು ಹೀಗೆ ನ್ಯಾಯಾಂಗ ವ್ಯವಸ್ಥೆಯಿಂದಲೇ ಹೊರಗಿಟ್ಟಿರುವುದು ಇದುವೇ ಪ್ರಥಮ. ಮೂರನೆಯದಾದ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆಗಳ ಖಾತರಿ ಒಪ್ಪಂದದ ಭರವಸೆ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆಯು ಕಾರ್ಪೋರೇಟ್ ಕಂಪೆನಿಗಳು ಕೃಷಿಗೆ ಪ್ರವೇಶಿಸಲು ಒಂದು ಚೌಕಟ್ಟನ್ನು ಒದಗಿಸಿಕೊಡುತ್ತದೆ. ಇದು ಪರೋಕ್ಷವಾಗಿ ತಮ್ಮದೇ ಜಮೀನಿಗೆ ರೈತರು ತಾವೇ ಕೂಲಿಯಾಳುಗಳಾಗುವಂತೆ ಮಾಡುತ್ತದೆ. ಕ್ಷಿಪ್ರವಾಗಿ ಹಣ ಮಾಡುವ ಕಲೆಯಲ್ಲಿ ನುರಿತರಾಗಿರುವ ಕಾರ್ಪೊರೇಟ್ ಕಂಪೆನಿಗಳು, ಹೆಚ್ಚು ಉತ್ಪಾದಿಸಲು ಬಗೆ ಬಗೆಯ ರಾಸಾಯನಿಕಗಳನ್ನು ಬಳಸಿ, ಭೂಮಿಯನ್ನು ಬಂಜರುಗೊಳಿಸುತ್ತವೆ. ಪಂಜಾಬ್, ಹರಿಯಾಣಗಳಲ್ಲಿ ಈಗ ಆದದ್ದು ಇದುವೇ. ಇದರಿಂದ ಅಲ್ಲಿಯ ರೈತರು ಎಚ್ಚತ್ತಿದ್ದಾರೆ, ಆದರೆ ಉಳಿದವರಿಗೆ ಅಪಾಯದ ಅರಿವಿದ್ದಂತಿಲ್ಲ.

ಇವತ್ತು ಭಾರತದಲ್ಲಿ ನಡೆಯುತ್ತಿರುವ ರೈತ ಚಳುವಳಿಯು ಅತ್ಯಂತ ಮಹತ್ವದ ಘಟನೆ ಎಂಬುದನ್ನು ಜಗತ್ತು ಒಪ್ಪಿಕೊಂಡಿದೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಬಂಧಗಳನ್ನು (ಫೆಡರಲ್ ರಚನೆ) ಪರಿಶೀಲಿಸಲು ಒತ್ತಾಯಿಸಿದೆ. ಕೃಷಿ ಭೂಮಿಯ ಖಾಸಗೀಕರಣವು ಭಾರತದಂಥ ಅಭಿವೃದ್ಧಿಶೀಲ ದೇಶದಲ್ಲಿ ಉಂಟು ಮಾಡಬಹುದಾದ ಅನಾಹುತಗಳ ಬಗ್ಗೆ ಎಲ್ಲೆಡೆಯೂ ಚರ್ಚೆ ನಡೆಯುತ್ತಿದೆ.

ತತ್ಕಾಲೀನ ರಾಜಕೀಯ ಲಾಭಗಳನ್ನು ಬದಿಗಿರಿಸಿ ಎಲ್ಲರೂ ಈ ಕುರಿತು ಯೋಚಿಸಿದರೆ ಬಹಳ ಪ್ರಯೋಜನವಿದೆ. ಇದು ಸಾಧ್ಯವಾಗಲು, ಸರಕಾರವು ಈಗ ಗಡಿಬಿಡಿಯಿಂದ ಜ್ಯಾರಿಗೆ ತಂದ ಮೂರೂ ಕಾಯ್ದೆಗಳನ್ನು ಹಿಂಪಡೆಯಬೇಕು. ಕೃಷಿ ಅಭಿವೃದ್ಧಿಯ ಕುರಿತು ಚರ್ಚಿಸಲೆಂದೇ ವಿಶೇಷ ಪಾರ್ಲಿಮೆಂಟ್ ಅಧಿವೇಶನವನ್ನು ಕರೆಯಬೇಕು. ಅದಕ್ಕೂ ಮುನ್ನ ರೈತರೊಂದಿಗೆ, ಕೃಷಿ ತಜ್ಞರೊಂದಿಗೆ, ರಾಜ್ಯ ಸರಕಾರಗಳೊಂದಿಗೆ ಕೇಂದ್ರವು ಮುಕ್ತವಾದ ಚರ್ಚೆಯನ್ನು ನಡೆಸಬೇಕು.

ಸದ್ಯ ರೈತರು 10 ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ, ಅವುಗಳಲ್ಲಿ ಮುಖ್ಯವಾದುವುಗಳೆಂದರೆ –

  1. ಕಾನೂನು ಹಿಂದೆಗೆಯಲು ಸ್ಪೆಷಲ್ ಪಾರ್ಲಿಮೆಂಟ್ ಸೆಷನ್ ಕರೆಯುವುದು
  2. ಎಂ ಎಸ್ ಪಿ ಕಾನೂನು ಬದ್ಧಗೊಳಿಸುವುದು
  3. ಎಂ.ಎಸ್. ಸ್ವಾಮಿನಾಥನ್ ವರದಿ ಜ್ಯಾರಿ ಮಾಡುವುದು
  4. ಡೀಸೆಲ್ ಬೆಲೆ ಯಲ್ಲಿ 50 % ರಿಯಾಯಿತಿ ಕೊಡುವುದು
  5. ವಿದ್ಯುತ್ ಕಾಯ್ದೆಯ ರದ್ದತಿಯ ಮರುಪರಿಶೀಲನೆ
  6. ರಾಜ್ಯದ ಅಧಿಕಾರಗಳನ್ನು ಮೊಟಕುಗೊಳಿಸದೇ ಇರುವುದು ಇತ್ಯಾದಿ

ಈ ಬೇಡಿಕೆಗಳ ಜೊತೆಗೆ ರೈತರ ಈ ಹೋರಾಟವು ಕೇಂದ್ರ ರಾಜ್ಯಗಳ ಸಂಬಂಧದ (ಫೆಡರಲ್ ರಚನೆ) ಪರಿಶೀಲನೆ ನಡೆಸಲು ಒತ್ತಾಯಿಸಿದೆ ಮತ್ತು ಖಾಸಗೀಕರಣ ಮತ್ತು ನವ ವಸಾಹತುಶಾಹಿ ಶಕ್ತಿಗಳ ಆಕ್ರಮಣದ ವಿರುದ್ಧ ಧ್ವನಿ ಎತ್ತಿದೆ. ನವೀನ್ ಈ ಪುಸ್ತಕದಲ್ಲಿ ಗುರುತಿಸಿದ ಹಾಗೆ, ಹೋರಾಟದ ಹೊಸ ತಂತ್ರಗಳ ಅನ್ವೇಷಣೆಯನ್ನೂ ನಡೆಸಿದೆ.

ಪುಟ್ಟ ಅದರೆ ಚಾರಿತ್ರಿಕ ಮಹತ್ವದ ಈ ಪುಸ್ತಕವನ್ನು ಬರೆದ ನವೀನರಿಗೆ ಅಭಿನಂದನೆಗಳು. ಅವರೊಳಗೊಬ್ಬ ಲೇಖಕನೂ ಇರುವುದು ನನಗೆ ಗೊತ್ತಾಗಲು ರೈತ ಹೋರಾಟವೇ ಬೇಕಾಯಿತು.

ಪುರುಷೋತ್ತಮ ಬಿಳಿಮಲೆ
ಫೆಬ್ರವರಿ 10, 2021
ಸಿಂಘು ಗಡಿ

Donate Janashakthi Media

Leave a Reply

Your email address will not be published. Required fields are marked *