ಲಿಂಗಸಗೂರು: ತಾಲೂಕಿನ ರೈತರಿಗೆ ಹಾಗೂ ಸಾರ್ವಜನಿಕರಿಗೆ ಜೆಸ್ಕಾಂ ಇಲಾಖೆಯಿಂದ ಸರಿಯಾದ ಸ್ಪಂದನೆ ಮತ್ತು ಸೇವೆ ನೀಡದೇ ಇರುವುದರಿಂದ ರೈತರಿಗೆ ಭಾರೀ ನಷ್ಟ ಉಂಟಾಗುತ್ತಿದೆ. ಅಲ್ಲದೇ ಟಿಸಿ ಸುಟ್ಟರೆ ರೈತರಿಗೆ 6,000-10,000 ರೂಪಾಯಿ ವರೆಗೆ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್) ವತಿಯಿಂದ ಪ್ರತಿಭಟನೆ ಹಮ್ಮಿಕೊಂಡರು.
ಹಣ ಕೊಟ್ಟರೂ ರೈತರ ಕೆಲಸ ಮಾಡದೇ ಸತಾಯಿಸಿ ಕಚೇರಿಗೆ ಅಲೆಯುವಂತೆ ಮಾಡಲಾಗುತ್ತಿದೆ. ಕೆಲವರಿಗೆ ಬ್ಲಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಲಾಗುತ್ತಿದೆ. ರೈತರು ಹಾಗೂ ಸಾರ್ವಜನಿಕರು ಸಮಸ್ಯೆ ತಿಳಿಸಲು ಫೋನ್ ಮಾಡಿದರೆ ಅವರ ಸಂಪರ್ಕ ಸಂಖ್ಯೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಇದು ರೈತ ಮತ್ತು ಜನವಿರೋಧಿ ನೀತಿಯಾಗಿದೆ ಎಂದು ಕೆಪಿಆರ್‌ಎಸ್ ತಾಲೂಕು ಸಮಿತಿಯು ತೀವ್ರವಾಗಿ ಖಂಡಿಸಿದೆ.
ಜೆಸ್ಕಾಂನ ಹಟ್ಟಿ ಶಾಖಾ ಅಧಿಕಾರಿ ಬಸಪ್ಪ ಅವರು ಕೂಡಾ ಈ ರೀತಿಯ ದುರ್ವರ್ತನೆ, ಬೇಜವಾಬ್ದಾರಿತನ ತೋರಿಸಿದ್ದು, ಹಲವು ಬಾರಿ ಈ ಬಗ್ಗೆ ದೂರು ನೀಡಲಾಗಿದೆ. ಒಂದು ಟಿಸಿ ನೀಡಲು ತಿಂಗಳು ವರ್ಷಗಟ್ಟಲೇ ಸತಾಯಿಸುತ್ತಾರೆ. ಟಿಸಿ ಬೇಕಿದ್ರೆ ನಿಮ್ಮದೇ ಗಾಡಿ ಹಾಗೂ ಲೇಬರ್ ಕೊಡಬೇಕು ಅನ್ನುತ್ತಾರೆ. ಆಗ ಮಾತ್ರ ಟಿಸಿ ಕೋಡ್ತೀವಿ ಎಂದು ಬೇಜವಾಬ್ದಾರಿಯಾಗಿ ಮಾತನಾಡುತ್ತಾರೆ. ಕಂಬಗಳು ಶಿಥಿಲಾವಸ್ಥೆ ತಲುಪಿ ಜನರ ಮೇಲೆ ಬೀಳುವ ಸ್ಥಿತಿ ತಲುಪಿದ್ರೂ ಹೊಸ ಕಂಬದ ವ್ಯವಸ್ಥೆ ಮಾಡೋದಿಲ್ಲ. ವಿದ್ಯುತ್ ತಂತಿಗಳು ನೆಲಕ್ಕೆ ಜೋತು ಬಿದ್ದರೂ ಸಹ ಅದನ್ನು ಸರಿಪಡಿಸಲು ಮುಂದಾಗುವುದಿಲ್ಲ. ರೈತರಿಂದ ಮಾತ್ರ ಸಾವಿರಾರು ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ ಎಂದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಕೆಪಿಆರ್‌ಎಸ್ ಮುಖಂಡರು ಖಂಡಿಸಿದ್ದಾರೆ.
ಇವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಗೆಜ್ಜಲಗಟ್ಟಾ ಗ್ರಾಮ ಪಂಚಾಯತಿಗೆ ಲೈನ್‌ಮನ್ ಅನ್ನು ನಿಯೋಜಿಸಿಲ್ಲ. ಈ ಕೂಡಲೇ ಲೈನ್‌ಮನ್ ನಿಯೋಜಿಸಿ ಒಎಂ ಕಾಫಿ ನೀಡಿ. ಇವತ್ತೇ ನಿರ್ಧಾರ ಮಾಡಿ ಎಂದು ಆಗ್ರಹಿಸಿದರು. ಈಗಲೇ ಗೆಜ್ಜಲಗಟ್ಟಾ ಗ್ರಾಮ ಪಂಚಾಯ್ತಿಯಿಂದ ಸೂಕ್ತವಾದ ಕ್ರಮವನ್ನು ಕೈಗೊಂಡು ಆ ಪ್ರತಿಯನ್ನು ಎಇಇ ಗೆ ನೀಡಿ ಒಂದು ವಾರ ಕಳೆದರೂ ಲೈನ್ ಮನ್ ಕೊಟ್ಟಿರುವುದಿಲ್ಲ. ಅದ್ದರಿಂದ ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ನಿಗದಿತ ಸಮಯದೊಳಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೆ, ನಾರಾಯಣ ಪೇಟೆ ಓಣಿಗೆ 25 ಕೆವಿಎಯ ಟಿಸಿ ನೀಡಬೇಕು. ನಿಲೋಗಲ್ ವಿಲೇಜ್ ನ 100 ಕೆವಿಎ ನ ಟಿಸಿ ಇದ್ದದ್ದನ್ನು 63ಕ್ಕೆ ಅಳವಡಿಸಿದ್ದು ಕೂಡಲೇ ವಾಪಸ್ಸು ಪಡೆಯಬೇಕು. ಟಿಸಿ ಸುಟ್ಟರೆ ಹೆಚ್ಚುವರಿ ಹಣ ಪಡೆದರೆ, ಸೂಕ್ತ ಪರೀಶಿಲಿಸಿ ಹಣ ವಾಪಿಸ್ ನೀಡಬೇಕು. ವೀರಭದ್ರ ಪ್ಪ ಅವರ ಮನೆಮೇಲೆ ವಿದ್ಯುತ್ ತಂತಿ ಇದ್ದು ಅದನ್ನು ಕೂಡಲೇ ತೆರವುಗೊಳಿಸಬೇಕು. ನಿಲೋಗಲ್ ಗ್ರಾಮದ ಅಗಸಿ ಮುಂದಿರುವ ಎಲ್‌ಟಿ ತಂತಿಗಳನ್ನು ಬದಲಿಸಬೇಕು. ಹರುಜನ ಓಣಿಯ ಶೌಚಾಲಯ ಹತ್ತಿರ ಕಂಬ ತೆರವುಗೊಳಿಸಬೇಕು.
ಗೆಜ್ಜಲಗಟ್ಟಾದ ಅಂಗಡಿಯವರ ಹೊಲದಲ್ಲಿ ವಿದ್ಯುತ್ ಸಂಬಂಧಿಸಿದ ಕಾರ್ಯಗಳು ದುರಸ್ತಿಯಲ್ಲಿದೆ. ವಾರ ಕಳೆದರೂ ಕಾಮಗಾಋಿ ಪೂರ್ಣಗೊಂಡಿಲ್ಲ. ಈ ಪ್ರದೇಶದಲ್ಲಿ ರೈತರಿಗಷ್ಟೇ ಅಲ್ಲ, ಹೊಲಗಳಲ್ಲೇ 8-10 ಮನೆಗಳಿದ್ದು ಇಲ್ಲಿಯ ನಿವಾಸಿಗಳು ಕತ್ತಲ್ಲಲ್ಲೇ ಕಾಲ ಕಳೆಯಬೇಕಾಗುತ್ತಿದೆ.
ವೀರಾಪೂರು ಕ್ರಾಸ್ ಬಳಿ ಎಸ್‌ಸಿ-ಎಸ್‌ಟಿ ಮನೆಗಳು ಇದ್ದು 15 ವರ್ಷಗಳಿಂದ ಕತ್ತಲೆಯಲ್ಲೇ ವಾಸುಸುತ್ತಿದ್ದಾರೆ. ಕೂಡಲೇ ಅಲ್ಲಿ ಟಿಸಿ ಹಾಕಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಇಲ್ಲಿನ ಅನೇಕ ಓಣಿಗಳಿಗೆ ವಿದ್ಯುತ್ ಕಂಬಗಳು ಇಲ್ಲ. ಕೂಡಲೇ ಕಂಬಗಳನ್ನು ಅಳವಡಿಸಬೇಕು. ಗ್ರಾಮದ ನೀರು ಸರಬರಾಜು ಮಾಡುವ ಟಿಸಿ ನಾಪತ್ತೆಯಾಗಿದೆ. ತನಿಖೆಯನ್ನು ಕೈಗೊಂಡು ಕಳ್ಳರನ್ನು ಬಂಧಿಸಬೇಕು ಮತ್ತು ಇಲ್ಲಿ ಕೂಡಲೇ ಟಿಸಿ ಹಾಕಬೇಕು.
ಗೋನವಾಟ್ಲ ತಾಂಡಾದಲ್ಲಿ ಟಿಸಿ ಸುಟ್ಟು 3 ತಿಂಗಳು ಕಳೆದರೂ ಟಿಸಿ ಅಳವಡಿಸಿಲ್ಲ. ಸಗರಪ್ಪನ ದೊಡ್ಡಿಯ 25 ಮನೆಗಳಿಗೆ ಟಿಸಿ ಅಳವಡಿಸಬೇಕು. ಕಾಳಾಪೂರದ 1ನೇ ವಾರ್ಡಿನ ಎಸ್‌ಸಿ ಓಣಿಯ ಟಿಸಿ ಸ್ಥಳಾಂತರ ಮಾಡಬೇಕು. ರೈತರ ಹಾಗೂ ಸಾರ್ವಜನಿಕರ ಕರೆ ಹಾಗೂ ದೂರು ಗಳಿಗೆ ಕೂಡಲೇ ಸ್ಪಂಧಿಸಬೇಕು ಎಂದು ಪ್ರತಿಭಟನೆಯ ಮೂಲಕ ಕೆಪಿಆರ್‌ಎಸ್ ಸಂಘಟನೆಯು ಆಗ್ರಹಿಸಿದೆ.