‘ಆಂದೋಲನ ಜೀವಿ’ ಗಳೆಂದು ಹೀಯಾಳಿಸಿದ ‘ಕಾರ್ಪೊರೇಟ್ ಜೀವಿ’ ಪ್ರಧಾನಿ ದೇಶದ ಕ್ಷಮೆ ಕೇಳಬೇಕು; ಅವರ ‘ವಿದೇಶಿ ವಿಧ್ವಂಸಕಾರೀ ತತ್ವಸಿದ್ಧಾಂತ’ವೆಂಬ ಹೊಸ ‘ಎಫ್.ಡಿ.ಐ.’ ನಿರೂಪಣೆ ಅವರಿಗೇ ಚೆನ್ನಾಗಿ ಹೊಂದುತ್ತದೆ-ಎ.ಐ.ಕೆ.ಎಸ್. ಟಿಪ್ಪಣಿ
ಪ್ರಧಾನ ಮಂತ್ರಿಗಳು ಪ್ರತಿಭಟನಾ ನಿರತ ರೈತರನ್ನು ‘ಆಂದೋಲನ ಜೀವಿಗಳು’ ಎಂದು ಹೇಳಿ ಅವಮಾನ ಮಾಡಿದ್ದಾರೆ, ಸಂಸತ್ತಿನಲ್ಲಿ ಅವರ ಹೀಯಾಳಿಕೆಯ ಟಿಪ್ಪಣಿಗಳನ್ನು ಹಿಂದಕ್ಕೆ ಪಡೆಯಬೇಕು ಮತ್ತು ಕ್ಷಮೆ ಕೇಳಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ (ಎ.ಐ.ಕೆ.ಎಸ್.)ಅವರ ಮಾತುಗಳನ್ನು ಖಂಡಿಸುತ್ತ ಆಗ್ರಹಿಸಿದೆ.
ಈ ಅವಮಾನ ಒಬ್ಬ ‘ಕಾರ್ಪೊರೇಟ್ ಜೀವಿ’ ಪ್ರಧಾನ ಮಂತ್ರಿಯಿಂದ ಬಂದಿದೆ. ಆತನ ಆರೆಸ್ಸೆಸ್ ಎಂದೂ ಬ್ರಿಟಿಶರ ಗುಲಾಮಿಕೆಯ ವಿರುದ್ಧ ಭಾರತದ ಜನತೆ ನಡೆಸಿದ ಆಂದೋಲನದ ಭಾಗವಾಗಿರಲಿಲ್ಲ. ಮತ್ತು ಅವರು “ವಿದೇಶಿ ವಿಧ್ವಂಸಕಾರೀ ತತ್ವಸಿದ್ಧಾಂತ’(ಎಫ್.ಡಿ.ಐ.) ದ ಬಗ್ಗೆ ಮಾತಾಡಿರುವುದು, ಅವರದ್ದೇ ಆರೆಸ್ಸೆಸ್ ತನ್ನ ಗುರುಗಳಾದ ಹಿಟ್ಲರ್ ಮತ್ತು ಮುಸೊಲಿನಿಯಂತವರಿಂದ ಪಡೆದ ಫ್ಯಾಸಿಸಂಗೆ ಚೆನ್ನಾಗಿ ಹೊಂದುತ್ತದೆ ಎಂದು ಎ.ಐ.ಕೆ.ಎಸ್.ನ ಅಧ್ಯಕ್ಷರಾದ ಅಶೋಕ ಧವಳೆ ಮತ್ತು ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ ನೀಡಿರುವ ಹೇಳಿಕೆಯಲ್ಲಿ ತರಾಟೆಗೆ ತಗೊಂಡಿದ್ದಾರೆ.
ಪ್ರತಿಯೊಬ್ಬ ರೈತ ನಮ್ಮ ಸಂವಿಧಾನದ ಪ್ರಕಾರ ಪ್ರತಿಭಟನೆಯ ಹಕ್ಕು ಹೊಂದಿದ್ದಾರೆ. ತಮ್ಮ ಜೀವನಾಧಾರವನ್ನು ರಕ್ಷಿಸಿಕೊಳ್ಳುವ ರೈತರ ಹೋರಾಟದ ಮೇಲೆ ಅಪವಾದ ಹೊರಿಸಲು ಪ್ರಧಾನ ಮಂತ್ರಿಗಳು ತಮ್ಮ ಅಧಿಕಾರದ ದುರುಪಯೋಗ ಮಾಡಿಕೊಂಡಿದ್ದಾರೆ ಎಂದಿರುವ ಎ.ಐ.ಕೆ.ಎಸ್., ಪ್ರಧಾನ ಮಂತ್ರಿಗಳಿಂದ ರೈತರಿಗೆ ಅಗಿರುವ ಈ ಅವಮಾನವನ್ನು ಖಂಡಿಸಲು ಮುಂದೆ ಬರಬೇಕು ಎಂದು ಎಲ್ಲ ಪ್ರಜಾಪ್ರಭುತ್ವವಾದಿ ಜನವಿಭಾಗಗಳಿಗೆ, ರಾಜಕೀಯ ಪಕ್ಷಗಳಿಗೆ ಮತ್ತು ಸಮೂಹ ಹಾಗೂ ವರ್ಗ ಸಂಘಟನೆಗಳಿಗೆ ಕರೆ ನೀಡಿದೆ.
ಇದನ್ನು ಓದಿ : ದೆಹಲಿ ರೈತ ಹೋರಾಟ : ದೂರಿನಲ್ಲೂ ಪಿತೂರಿ ಮುಂದುವರೆಸಿದ ಪೊಲೀಸರು
ರೈತ ಸಂಘಟನೆಗಳು ತಮ್ಮ ಹೋರಾಟಕ್ಕೆ ಕಾರಣಗಳನ್ನು ಕೊಡಲು ಅಸಮರ್ಥರಾಗಿದ್ದಾರೆ ಎಂದು ಪ್ರಧಾನಿಗಳು ಹೇಳಿದ್ದಾರೆ. ಇದು ರೈತರ ಹೋರಾಟವನ್ನು ಹೀಯಾಳಿಸುವ ಅವರ ಆಟದ ಒಂದು ಭಾಗ. ಭಾರತವನ್ನು ಕೃಷಿ ಬಿಕ್ಕಟ್ಟು ಆವರಿಸಿಕೊಂಡಿದೆ, ಪ್ರತಿಯೊಂದು ಗಂಟೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ತಿತಿ ಇದೆ. ಇದಕ್ಕೆ ಕಾರಣ, ಬೇಸಾಯ ಪ್ರತಿಫಲದಾಯಕ ಬೆಲೆಗಳ ಕೊರತೆ ಮತ್ತುಅದರಿಂದಾಗಿರುವ ಸಾಲಗ್ರಸ್ತತೆಯಿಂದಾಗಿ ಆರ್ಥಿಕವಾಗಿ ದುಸ್ತರವಾಗಿರುವುದು. ದೇಶದ 86% ರೈತ ಕುಟುಂಬಗಳ ಬಳಿ ಇರುವುದು 2ಹೆಕ್ಟೇರುಗಳಿಗಿಂತಲೂ ಕಡಿಮೆ ಜಮೀನು. ಅವರು ಮಾರುಕಟ್ಟೆಯಲ್ಲಿ ತೀವ್ರ ಶೋಷಣೆಗೆ ಒಳಗಾಗಿದ್ದಾರೆ, ಇದರಿಂದಾಗಿ ಬೇಸಾಯ ಬಿಟ್ಟು ವಲಸೆ ಕಾರ್ಮಿಕರಾಗಬೇಕಾಗಿ ಬಂದಿದೆ.
ಇದನ್ನು ಓದಿ : ಎಂ.ಎಸ್.ಪಿ ಯಲ್ಲಿ ಯಾವುದೇ ಬದಲಾವಣೆ ಇಲ್ಲ – ಪ್ರಧಾನಿ ಸ್ಪಷ್ಟನೆ
ಪ್ರಧಾನಮಂತ್ರಿಗಳು ಮತ್ತು ಬಿಜೆಪಿ 2014 ರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸಿ2+50% ಸೂತ್ರದಂತೆ ಕನಿಷ್ಟ ಬೆಂಬಲ ಬೆಲೆ(ಎಂ.ಎಸ್.ಪಿ.) ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ವಚನವಿತ್ತಿದ್ದರು ಎಂದು ಅವರಿಗೆ ನೆನಪಿಸಿರುವ ಎ.ಐ.ಕೆ.ಎಸ್. ಈ ವಚನವನ್ನು ಈಡೇರಿಸುವ ಬದಲು ಮೋದಿ ಸರಕಾರ ಭಾರತೀಯ ಕೃಷಿಯನ್ನು ಮತ್ತು ರಾಷ್ಟ್ರದ ಆಹಾರ ಬದ್ರತೆಯನ್ನು ಕಾರ್ಪೊರೇಟ್ ಗಳಿಗೆ ಒಪ್ಪಿಸುತ್ತಿದೆ ಎಂದು ಟೀಕಿಸಿದೆ.
ರೈತರು ದೇಶಾದ್ಯಂತ ಎಲ್ಲ ಬೆಳೆಗಳಿಗೆ ಕಾನೂನಾತ್ಮಕ ಖಾತ್ರಿಯಿರುವ ಎಂ.ಎಸ್.ಪಿ. ಮತ್ತು ಸರಕಾರದಿಂದ ಖರೀದಿಯನ್ನು ಆಗ್ರಹಿಸಿ ಹೋರಾಟ ನಡೆಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ರೈತರು ನಡೆಸುತ್ತಿರುವ ಈ ಹೋರಾಟಕ್ಕೆ ಕಳೆದ ಏಳು ವರ್ಷಗಳಿಂದ ತನ್ನದೇ ವಚನವನ್ನು ಉಲ್ಲಂಘಿಸಿರುವ ಪ್ರಧಾನ ಮಂತ್ರಿಗಳೇ ಏಕೈಕ ಹೊಣೆಗಾರರು ಎಂದಿರುವ ಎ.ಐ.ಕೆ.ಎಸ್. ಸಂಸತ್ತಿನಲ್ಲಿ ಅವರ ಭಾಷಣ ವಿದೇಶಿ ಮತ್ತು ದೇಶೀ ಕಾರ್ಪೊರೇಟ್ ಬಂಡವಾಳದ ಬಿಗಿಮುಷ್ಠಿಯಲ್ಲಿರುವ ಅವರ ಸರಕಾರ ಎಂತಹ ಒತ್ತಡಕ್ಕೆ ತಲೆಬಾಗಿದೆ ಎಂಬುದನ್ನು ಬಯಲಿಗೆ ತಂದಿದೆ ಎಂದು ಟಿಪ್ಪಣಿ ಮಾಡಿದೆ.
ಪ್ರಧಾನ ಮಂತ್ರಿಗಳು ಯಾವುದೇ ರೈತ ಸಂಘಟನೆ, ಅಥವ ರಾಜ್ಯ ಸರಕಾರದೊಡನೆ, ಅಷ್ಟೇ ಏಕೆ, ಸ್ವತ: ಸಂಸತ್ತಿನಲ್ಲೂ ಸಮಾಲೋಚನೇ ನಡೆಸದೆಯೇ ಮೂರು ಕಾರ್ಪೊರೇಟ್-ಪರ ರೈತರ-ವಿರೋಧಿ ಮತ್ತು ಜನ-ವಿರೋಧಿ ಕೃಷಿ ಕಾಯ್ದೆಗಳನ್ನು ತುರುಕಿಸಿದ್ದಾರೆ.
ರೈತರು, ಈ ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕು, ಸಿ2+50% ಸೂತ್ರದಂತೆ ಕಾನೂನಿನ ಖಾತ್ರಿಯಿರುವ ಎಂ.ಎಸ್.ಪಿ. ಕೊಡಬೇಕು, ವಿದ್ಯುಚ್ಛಕ್ತಿ(ತಿದ್ದುಪಡಿ) ಮಸೂದೆ, 2020ನ್ನು ಹಿಂತೆಗೆದುಕೊಳ್ಳಬೇಕು ಮತ್ತು ಪರಿಸರ ಮಾಲಿನ್ಯ ಸುಗ್ರೀವಾಜ್ಷೆಯ ರೈತ-ವಿರೋಧಿ ಪರಿಚ್ಛೇದಗಳನ್ನು ಕೈಬಿಡಬೇಕು ಎಂಬ ತಮ್ಮ ಎಲ್ಲ ನೈಜ ಬೇಡಿಕೆಗಳನ್ನು ಈಡೇರಿಸುವ ವರೆಗೆ ಹಿಂದಕ್ಕೆ ಸರಿಯುವದಿಲ್ಲ ಎಂದು ಎ.ಐ.ಕೆ.ಎಸ್. ಪುನರುಚ್ಛರಿಸಿದೆ.
ಪ್ರಧಾನಮಂತ್ರಿಗಳು ರೈತ ಸಮುದಾಯಕ್ಕೆ ಮಾಡಿರುವ ಈ ಅವಮಾನದ ವಿರುದ್ಧ ಬೃಹತ್ ಸ್ವರೂಪದ ಪ್ರತಿಭಟನೆಗಳನ್ನು ಸಂಘಟಿಸಬೇಕು ಮತ್ತು ದೇಶದ ಉದ್ದಗಲದಲ್ಲೂ ಇನ್ನು ದೃಢನಿರ್ಧಾರದ ಸಾಮೂಹಿಕ ಹೋರಾಟಗಳಿಗೆ ಸಿದ್ಧರಾಗಬೇಕು ಎಂದು ತನ್ನ ಎಲ್ಲ ಘಟಕಗಳಿಗೆ ಹಾಗೂ ಭಾರತದ ಎಲ್ಲ ರೈತರಿಗೆ ಕರೆ ನೀಡಿದೆ.