ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯದ ಗುರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ‘ಕಳೆದ ವರ್ಷದಿಂದ ಕೋವಿಡ್‌ ಸಂಕಷ್ಟದ ಕಾರಣಕ್ಕೆ ರಾಜ್ಯವು ಎದುರಾಗಿದ್ದರೂ ಸಹ ಪ್ರಸಕ್ತ ವರ್ಷದಲ್ಲಿ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಗುರಿಯನ್ನು ಹೊಂದಲಾಗಿದೆ. ಹಾಗಾಗಿ, 30.26 ಲಕ್ಷ  ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹ 19,370 ಕೋಟಿ ಅಲ್ಪಾವಧಿ ಬೆಳೆ ಸಾಲ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಇಂದು ರಾಜ್ಯ ಸರಕಾರದ ವತಿಯಿಂದ ಸಹಕಾರ ಇಲಾಖೆ ಹಾಗೂ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ವತಿಯಿಂದ ಆಯೋಜಿಸಲಾಗಿದ್ದ ರೈತ ಸ್ಪಂದನ 2021-22ನೇ ಸಾಲಿನ ವಿವಿಧ ಕೃಷಿ ಸಾಲ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನು ಓದಿ: 54 ದಿನಗಳ ನಂತರ ಸಹಜ ಸ್ಥಿತಿಯತ್ತ ಕರ್ನಾಟಕ

ಅದೇ ರೀತಿಯಲ್ಲಿ 60 ಲಕ್ಷ ರೈತರಿಗೆ ಶೇಕಡಾ 3ರ ಬಡ್ಡಿದರದಲ್ಲಿ ₹ 1,440 ಕೋಟಿ ಮಧ್ಯಮಾವಧಿ ಅಥವಾ ದೀರ್ಘವಾಧಿ ಸಾಲ ವಿತರಿಸಲು ಗುರಿ ಹೊಂದಿರುವುದಾಗಿ ತಿಳಿಸಿದರು. ‘2021–22ನೇ ಸಾಲಿನಲ್ಲಿ 40 ಲಕ್ಷ ಸ್ತ್ರೀ ಶಕ್ತಿ ಗುಂಪುಗಳಿಗೆ ₹ 1,400 ಕೋಟಿ ಸಾಲ ಗುರಿ ಇದೆ. 2021ರ ಮೇ ಅಂತ್ಯಕ್ಕೆ 6,700 ಗುಂಪುಗಳಿಗೆ ಈಗಾಗಲೇ ₹ 233. 33 ಕೋಟಿ ಸಾಲ ನೀಡಲಾಗಿದೆʼʼ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ತಿಳಿಸಿದರು.

‘ಸಹಕಾರಿ ಕ್ಷೇತ್ರದಲ್ಲಿ ಈವರೆಗೆ 2.50 ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ರಚನೆ ಮಾಡಲಾಗಿದೆ. 32 ಲಕ್ಷ ಸದಸ್ಯರಿದ್ದಾರೆ. ಕಳೆದ ವರ್ಷ ಕೃಷಿ ಕ್ಷೇತ್ರದಲ್ಲಿ 25. 67 ಲಕ್ಷ ರೈತರಿಗೆ ₹16,451 ಕೋಟಿ ಅಲ್ಪಾವಧಿ ಸಾಲ, 52 ಸಾವಿರ ರೈತರಿಗೆ ₹ 1260.12 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಿಸಲಾಗಿದೆ. 57 ಲಕ್ಷ ರೈತರಿಗೆ ಹೈನುಗಾರಿಕೆಗೆ ₹ 105.64 ಕೋಟಿ ಸಾಲ ನೀಡಲಾಗಿದೆ’ ಎಂದು ವಿವರಿಸಿದರು.

‘ಕೋವಿಡ್‌ ಕಾರಣಕ್ಕೆ ರೈತರ ಮತ್ತು  ಸ್ವಸಹಾಯ ಸಂಘಗಳ ಸಮಸ್ಯೆಯನ್ನು ಮನಗಂಡು, ಸಾಲ ಮರು ಪಾವತಿ ಅವಧಿಯನ್ನು  ಮೂರು ತಿಂಗಳ ಅವಧಿಗೆ ವಿಸ್ತರಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ. ಇದರಿಂದ 6.17 ಲಕ್ಷ ರೈತರು ಮತ್ತು 65,500 ಸ್ವಸಹಾಯ ಸಂಘಗಳ 8.15 ಲಕ್ಷ ಸದಸ್ಯರಿಗೆ ಅನುಕೂಲ ಆಗಿದೆ’ ಎಂದೂ ತಿಳಿಸಿದರು.

ಇದನ್ನು ಓದಿ: ಅನ್‌ಲಾಕ್‌ 02 : ಮೆಟ್ರೋ ಬಸ್‌ ಸಂಚಾರಕ್ಕೆ ಅನುಮತಿ : ನೈಟ್‌ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಮುಂದುವರಿಕೆ

‘ಕೋವಿಡ್‌ ಸಂದರ್ಭದಲ್ಲಿ ಸಹಕಾರಿ ಸಂಘಗಳು ₹ 4.62‌ ಕೋಟಿಯ ವೈದ್ಯಕೀಯ ಸಲಕರಣೆಗಳು, ಆಂಬುಲೆನ್ಸ್‌, ಆಹಾರ ಕಿಟ್‌ ಉಚಿತವಾಗಿ ನೀಡಿವೆ. ಅಲ್ಲದೆ, ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 58 ಕೋಟಿ ದೇಣಿಗೆ ಸಹ ನೀಡಿವೆ’ ಎಂದೂ ಶ್ಲಾಘಿಸಿದರು.

‘ನಮ್ಮದು ರೈತಪರ ಸರ್ಕಾರ. ಕೃಷಿ, ಆರೋಗ್ಯ ಮತ್ತು ಶಿಕ್ಷಣ ನಮ್ಮ ಸರ್ಕಾರದ ಆದ್ಯತೆಯ ಕ್ಷೇತ್ರಗಳು. ಎಲ್ಲರಿಗೂ ನಾನು, ನನಗಾಗಿ ಎಲ್ಲರೂ ಎಂಬ ಸಹಕಾರಿ ತತ್ವದಡಿ ಸ್ವಾಲಂಬಿ ಜೀವನ ನಡೆಸಲು ಸಾಲ ಸೌಲಭ್ಯ ನೀಡಲಾಗುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಕೊರತೆ ಇಲ್ಲ’ ಎಂದೂ ಮುಖ್ಯಮಂತ್ರಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸಂಗಪ್ಪ ಸವದಿ, ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಮತ್ತಿತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *