ನವದೆಹಲಿ ಫೆ 08 : ರೈತರು ಯಾವುದೇ ಬೆದರಿಕೆಗೆ ಹೆದರುವುದಿಲ್ಲ, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದೊಂದೆ ಕೇಂದ್ರ ಸರಕಾರಕ್ಕಿರುವ ಮಾರ್ಗ ಎಂದು ರಾಷ್ಟ್ರೀಯ ಲೋಕದಳ (ಆರ್.ಎಲ್.ಡಿ) ಉಪಾಧ್ಯಕ್ಷ ಜಯನಾಥ್ ಚೌದರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ರೈತರಿಗೆ ರಸ್ತೆಗಳಲ್ಲಿ ಹಾಕಿರುವ ಮೊಳೆಗಳು ಬಿಜೆಪಿ ಪಕ್ಷವನ್ನು ಸರ್ವನಾಶ ಮಾಡುತ್ತವೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಿಮ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕಿಸಾನ್ ಮಹಾ ಪಂಚಾಯಿತ್ ನಲ್ಲಿ ಪಾಲ್ಗೊಂಡಿರುವ ಜಯನಾಥ್ ಚೌದರಿ, ಕೇಂದ್ರ ಸರ್ಕಾರ ಕೂಡಲೆ ಈ ಕೃಷಿ ಕಾಯ್ದೆಗಳನ್ನು ಹಿಂಪಡೆದ ನಂತರವೆ ರೈತರು ಮಾತನಾಡಲು ಸಿದ್ದ ಎಂದಿದ್ದಾರೆ.
ಇದನ್ನು ಓದಿ : ರೈತರ ಪ್ರತಿಭಟನೆಯ ಹಿಂದಿನ ಕತೆ-ವ್ಯಥೆ
‘ಇದು ಹಿಟ್ಲರ್ ಸರ್ಕಾರ ಈ ಸರ್ಕಾರದವರು ಅವರದೇ ಪಕ್ಷದ ಎಂ.ಪಿ, ಮತ್ತು ಎಂ.ಎಲ್.ಎ ಗಳ ಮಾತನ್ನು ಕೇಳುತ್ತಿಲ್ಲ. ಬಹುತೇಕ ಬಿಜೆಪಿ ನಾಯಕರು ಅವರ ಸರ್ಕಾರದ ವಿರುದ್ದ ಪರೋಕ್ಷವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಸಾಮಾನ್ಯ ಜನರು ಕೂಡ ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕಿದ್ದಕೆ ಈಗ ಪರಿತಪಿಸುತ್ತಿದ್ದಾರೆ. ಈ ಐಕ್ಯತೆಯ ರೈತ ಹೋರಾಟ ಐತಿಹಾಸಿಕ ಹೋರಾಟವಾಗಿದ್ದು, ಕೃಷಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವವರೆಗೂ ರೈತರು ಧರಣಿಯಿಂದ ಹಿಂದಕ್ಕೆ ಸರಿಯುದಿಲ್ಲ ಎಂದರು.
ಇದನ್ನು ಓದಿ : ರೈತ ಪ್ರತಿಭಟನೆ : ರಸ್ತೆಗೆ ಹಾಕಲಾಗಿದ್ದ ಮೊಳೆ ತೆರವುಗೊಳಿಸುತ್ತಿರುವ ಪೊಲೀಸರು
ಈ ಕಿಸಾನ್ ಪಂಚಾಯಿತ್ ಗೆ ರೈತರು ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಸಾಕಷ್ಟು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ರೈತರು ತಮ್ಮ ಊರುಗಳನ್ನು ಬಿಟ್ಟು ಕಿಲೋಮೀಟರ್ ಗಟ್ಟಲೆ ಕಾಲ್ನಡಿಗೆಯಿಂದ ದೆಹಲಿಯತ್ತ ಪ್ರಯಾಣ ಬೆಳಸಿದ್ದಾರೆ. ಈ ಸಂದರ್ಭದಲ್ಲಿ ರೈತರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, 150ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ತಮ್ಮ ಪ್ರಾಣವನ್ನು ಕಳದುಕೊಂಡಿದ್ದಾರೆ. ಈ ಕೃಷಿ ಕಾಯ್ದೆ ರೈತರ ಪರವಾಗಿಲ್ಲ, ನಾವು ಯಾವುದೇ ಕಾರಣಕ್ಕೆ ಕಾಯ್ದೆಗಳನ್ನ ಒಪ್ಪಿಕೊಳ್ಳುವುದಿಲ್ಲ ಎಂದು ರೈತರು ಸ್ಪಷ್ಟವಾಗಿ ಹೇಳುತ್ತಿದ್ದಾರೆ ಎಂದು ತಿಳಿಸಿದರು. ದೆಹಲಿಯ ಗಡಿಯಲ್ಲಿ ಹಾಕಿರುವ ಬ್ಯಾರಿಕೇಡ್ ಗಳು, ಮತ್ತು ರಸ್ತೆಗಳಲ್ಲಿ ಹಾಕಿರುವ ಮೊಳೆಗಳು “ಅವು ದೆಹಲಿಯ ರಸ್ತೆಗೆ ಹಾಕಿರುವ ಮೊಳೆಗಳು ಅಲ್ಲ , ಅವು ಬಿಜೆಪಿಯ ರಾಜಕೀಯ ಶವಪೆಟ್ಟಿಗೆಗೆ ಹಾಕಿರುವ ಮೊಳೆಗಳು ಎಂದು ಚೌದರಿ ಆರೋಪಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ