ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಲು ಕೆಪಿಆರ್‌ಎಸ್‌ ಆಗ್ರಹ

ಬೆಂಗಳೂರು: ಕಳೆದ ಎರಡು ತಿಂಗಳುಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬೆಳೆದು ನಿಂತಿದ್ದ ಕೋಟ್ಯಾಂತರ ರೂ. ಮೌಲ್ಯದ ರಾಗಿ, ನೆಲಕಡಲೆ, ಟಮೋಟ ಇತ್ಯಾದಿ ಆಹಾರ ಧಾನ್ಯ ಮತ್ತು ತರಕಾರಿ ಬೆಳೆಗಳು ನಷ್ಟವಾಗಿದ್ದು, ಕೂಡಲೇ ರಾಜ್ಯ ಸರ್ಕಾರ ಬೆಳೆ ನಷ್ಟ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಆಹಾರ ಧಾನ್ಯ ಬೆಳೆಗಳಿಗೆ ಎಕರೆಗೆ ಕನಿಷ್ಠ 25,000 ರೂ. ಹಾಗೂ ತರಕಾರಿ ಬೆಳೆಗಳಿಗೆ ಎಕರೆಗೆ ಕನಿಷ್ಠ 1,00,000 ರೂ. ನಷ್ಟ ಪರಿಹಾರವನ್ನು ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಆಗ್ರಹಿಸಿದೆ.

ಕೋಲಾರದ 59,000 ಹೆಕ್ಟೇರ್, ಚಿಕ್ಕಬಳ್ಳಾಪುರದ 43,002 ಹೆಕ್ಟೇರ್‌ನಲ್ಲಿ ಪ್ರಮುಖ ಬೆಳೆಯಾದ ರಾಗಿಯನ್ನು ಬೆಳೆಯಲಾಗಿದೆ. ಇದರಲ್ಲಿ ಬಹುತೇಕ ಅರ್ಧಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ರಾಗಿ ಬೆಳೆ ನೆಲ ಕಚ್ಚಿ, ಮೊಳಕೆ ಬಂದಿದೆ. ರಾಗಿ ಮತ್ತು ರಾಗಿ ಹುಲ್ಲು ಎರಡನ್ನು ಕಳೆದುಕೊಂಡ ರೈತ, ಮುಂದಿನ ದಿನಗಳಲ್ಲಿ ತನಗೂ ಊಟವಿಲ್ಲ, ಜಾನುವಾರುಗಳಿಗೂ ಮೇವು ಇಲ್ಲದ ಸ್ಥಿತಿಯಿಂದ ನರಳುವಂತಾಗಿದೆ ಎಂದು ಕೆಪಿಆರ್‌ಎಸ್‌ ತಿಳಿಸಿದೆ.

ಈ ನಿಟ್ಟಿನಲ್ಲಿ ಇಬ್ಬರೂ ಲೋಕಸಭಾ ಸದಸ್ಯರು ಹಾಗು ಶಾಸಕರುಗಳು ರಾಜ್ಯ ಸರ್ಕಾರದ ಮೇಲೆ ಒತ್ತಡವನ್ನು ತರಬೇಕೆಂದು ರೈತ ಸಂಘ ಆಗ್ರಹಿಸಿದೆ. ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತವಾಗದಿದ್ದಲ್ಲಿ, ಮುಂದಿನ ಡಿಸೆಂಬರ್ 2021 ರಲ್ಲಿ ಎರಡು ಜಿಲ್ಲೆಗಳಲ್ಲಿ ಪ್ರಬಲ ಹೋರಾಟ ನಡೆಸಲಾಗುವುದು ಎಂದಿರುವ ಸಂಘಟನೆಯು, ರೈತರು ಪಕ್ಷಾತೀತವಾಗಿ ರೈತ ಸಂಘದ ಈ ಹೋರಾಟದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕೆಂದು ರೈತರಲ್ಲಿ ವಿನಂತಿಸಿಕೊಂಡಿದೆ. ಈ ಹೋರಾಟವನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜೊತೆಗೆ ಇಡೀ ರಾಜ್ಯಾದ್ಯಂತ ಸಂಘಟಿಸಲು ಸಂಘಟನೆ ತೀರ್ಮಾನಿಸಿದೆ.

ಬಂಡವಾಳ ಹಾಕಿರುವ ರೈತರು ಆತಂಕಗೊಂಡಿದ್ದಾರೆ. ಇದೇ ರೀತಿ ವಿಪರೀತ ಬಂಡವಾಳಗಳನ್ನು ಹಾಕಿ ಟಮೋಟ, ಕ್ಯಾರೇಟ್, ಆಲೂಗೆಡ್ಡೆ, ಈರುಳ್ಳಿ ಇತ್ಯಾದಿ ತರಕಾರಿ ಬೆಳೆಗಳನ್ನು ಬೆಳೆದಿರುವ ರೈತರು ಸುಧಾರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಗಿ, ಟಮೋಟೊ ಇತ್ಯಾದಿ ಬೆಳೆಗಳನ್ನು ಬೆಳೆಯಲು ರೈತರು ಹೂಡಿಕೆ ಮಾಡಿರುವ ಕನಿಷ್ಠ ಖರ್ಚುಗಳನ್ನಾದರೂ ನಷ್ಟ ಪರಿಹಾರವಾಗಿ ನೀಡಬೇಕೆಂದು ಪ್ರಾಂತ ರೈತ ಸಂಘದ ರಾಜ್ಯ ಸಮಿತಿಆಗ್ರಹಿಸುತ್ತದೆ.

ಬೆಳೆ ನಷ್ಟದ ಬಗ್ಗೆ ಛಾಯಾಚಿತ್ರ, ವಿಡಿಯೋಗಳ ದಾಖಲಿಕರಿಸಲು ರೈತರಿಗೆ ಕರೆ:

ತಮ್ಮ ತಮ್ಮ ಬೆಳಗಳ ನಷ್ಟವಾಗಿರುವುದರ ಛಾಯಾಚಿತ್ರ, ವಿಡಿಯೋಗಳನ್ನು ತೆಗೆದು ಜೋಪಾನ ಮಾಡಬೇಕೆಂದು, ಮುಂದಿನ ದಿನಗಳಲ್ಲಿ ಇಲಾಖೆಗಳ ತಪ್ಪು ಸಮೀಕ್ಷೆಗಳನ್ನು ಸರಿಪಡಿಸಲು ಇವು ಸಹಾಯವಾಗುತ್ತೇವೆಂದು ಕರ್ನಾಟಕ ಪ್ರಾಂತ ರೈತ ಸಂಘವು ರೈತರಲ್ಲಿ ವಿನಂತಿಸಿದೆ.

ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌) ರಾಜ್ಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ, ರಾಜ್ಯ ಉಪಾಧ್ಯಕ್ಷರಾದ ಪಿ.ಆರ್. ಸೂರ್ಯನಾರಾಯಣ, ಪಿ. ಮಂಜುನಾಥರೆಡ್ಡಿ, ರಾಜ್ಯ ಸಹ ಕಾರ್ಯದರ್ಶಿ ಹೆಚ್.ಪಿ. ಲಕ್ಷ್ಮೀನಾರಾಯಣರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲಾ ಅಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ, ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್ ಪ್ರಕಟಣೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *