ಬೆಳಗಾವಿ: ಇಂದು ವಿಧಾನಸಭೆಯ ಕಲಾಪದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ʻʻರಾಜ್ಯದಲ್ಲಿ ಕೊಯ್ಲಿಗೆ ಬಂದ ಬೆಳೆ ಹಾನಿಯಾಗಿದೆ. ಕೈಗೆ ತುತ್ತು ಬಾಯಿಗೆ ಬರದಂತಾಗಿದೆ ಅಂತಾ ಮಾತು ಆರಂಭಿಸಿ, ಕಲಾಪದಲ್ಲಿ ಪ್ರಮುಖ ಸಚಿವರುಗಳೇ ಇಲ್ಲದಿರುವುದನ್ನು ಸಹ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನಿನ್ನೆ ಪ್ರಾಸ್ತಾವಿಕವಾಗಿ ಮಾತನಾಡಿದ್ದ ಸಿದ್ದರಾಮಯ್ಯ, ಇಂದು ಮಾತು ಮುಂದುವರೆಸಿ, ಬೆಳೆ ಹಾನಿ ಕುರಿತಂತೆ ನಿಲುವಳಿ ಸೂಚನೆ 69ರಡಿ ವಿಧಾನಸಭೆಯಲ್ಲಿ ಅತಿವೃಷ್ಟಿ ಕುರಿತಂತೆ ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಸಭೆಯ ಮುಂದಿಟ್ಟರು.
ಪ್ರಮುಖ ವಿಚಾರವನ್ನು ಪ್ರಸ್ತಾಪಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಸಚಿವರು ಗೈರಾಗಿರುವುದನ್ನು ಪ್ರಶ್ನಿಸಿದರು. ಈ ವೇಳೆ, ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ಕಂದಾಯ ಸಚಿವ ಅಶೋಕ್ ಅವರು ಪರಿಷತ್ ಕಲಾಪದಲ್ಲಿ ಭಾಗಿಯಾಗಿದ್ದಾರೆ. ಪ್ರಶ್ನೋತ್ತರ ಮುಗಿಸಿಕೊಂಡು ಸಭೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಮೂರು ವರ್ಷಗಳಲ್ಲಿ ಅಂದರೆ 2019, 2020 ಹಾಗೂ 2021 ರಲ್ಲಿ ಪ್ರವಾಹ, ಅತಿವೃಷ್ಟಿ, ಬರಗಾಲ ಕಾಣಿಸಿಕೊಂಡಿದೆ. ಕಳೆದ 60 ವರ್ಷಗಳಲ್ಲಿ ಕಾಣದಂತಹ ಮಳೆಯನ್ನು ಈ ಬಾರಿ ರಾಜ್ಯ ಕಂಡಿದೆ ಎಂದು ಸಿದ್ದರಾಮಯ್ಯ ಸಭೆಯ ಗಮನ ಸೆಳೆದರು.
2019ರಲ್ಲಿ ಉತ್ತರ ಕರ್ನಾಟಕದಲ್ಲಿ ಅತ್ಯಧಿಕ ಮಳೆ ಬಿದ್ದಿದೆ. ಈ ವೇಳೆ 2 ಲಕ್ಷ 76 ಸಾವಿರ ಮನೆಗಳು ಮಳೆ ಹಾನಿಗೆ ತುತ್ತಾಗಿವೆ. ಆದರೆ, ಮನೆ ಕಳೆದುಕೊಂಡ 1 ಲಕ್ಷ 33 ಸಾವಿರ ಕುಟುಂಬಗಳಿಗೆ ಪರಿಹಾರ ಸಿಕ್ಕಿದೆ. ಉಳಿದವರಿಗೆ ನೆರವು ದೊರೆತಿಲ್ಲ ಎಂದು ಸಿದ್ದರಾಮಯ್ಯ ಆಪಾದಿಸಿದರು.
ಗೋಕಾಕ್, ರಾಯಭಾಗ ತಾಲೂಕುಗಳಿಗೆ ಭೇಟಿ ನೀಡಿದಾಗ 50ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿ ಅರ್ಜಿ ನೀಡಿದರು. 2019ರಲ್ಲಿ ನಾವು ಮನೆ ಕಳೆದುಕೊಂಡಿದ್ದೇವೆ. ಆದರೆ, ಇದುವರೆಗೂ 5 ಲಕ್ಷ ರೂಪಾಯಿ ಪರಿಹಾರ ಸಿಕ್ಕಿಲ್ಲ ಎಂದು ತಮಗೆ ದೂರಿದ್ದಾರೆ. ಅಲ್ಲದೆ, ಪರಿಹಾರ ಸಿಗದಿದ್ದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆಯರು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಇಲ್ಲ
ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳೇ ಇಲ್ಲ ಎಂದು ರಾಜ್ಯ ಸರ್ಕಾರವನ್ನು ಗಮನಕ್ಕೆ ತಂದ ಸಿದ್ದರಾಮಯ್ಯ, “ಆರ್ ಅಶೋಕ್ ನೀನು ಯಾವ ಜಿಲ್ಲಾ ಮಂತ್ರಿಪಾ” ಎಂದು ಪ್ರಶ್ನೆ ಮಾಡಿದರು. ಕೋಲಾರ ಜಿಲ್ಲಾ ಮಂತ್ರಿ ಯಾರು ಎಂದು ಪ್ರಶ್ನೆ ಮಾಡಿದಾಗ ಮುನಿರತ್ನ ಎಂದು ಅಶ್ವಥ್ ನಾರಾಯಣ ಉತ್ತರಿಸಿದರು. ಮುನಿರತ್ನ ಹೆಸರಿನಲ್ಲಿ ಗೊಂದಲ ಅಡಗಿದೆ. ಮುನಿ.. ರತ್ನ ಒಂದೊಕ್ಕೊಂದು ಹೊಂದಾಣಿಕೆನೆ ಇಲ್ಲ ಎಂದ ಸಿದ್ದರಾಮಯ್ಯ, ಮುನಿರತ್ನ ಕೋಲಾರಕ್ಕೆ ಭೇಟಿ ಕೊಟ್ಟಿದ್ದಾರೆಯೇ ಎಂದು ತಿವಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಆರ್.ಅಶೋಕ್, ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಮಂತ್ರಿಗಳು ಇದ್ದಾರೆ. ಆದರೆ, ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಚಿವರುಗಳು ಭೇಟಿ ನೀಡಿಲ್ಲ. ಆದರೆ, ಮುಖ್ಯಮಂತ್ರಿ, ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಸಚಿವರಿಗೆ ಮಾತ್ರ ಭೇಟಿ ನೀಡುವ ಅವಕಾಶವಿದೆ ಎಂದು ಅಶೋಕ್ ಸಮರ್ಥನೆ ಮಾಡಿಕೊಂಡರು.
ಇದಕ್ಕೆ ಪ್ರತ್ಯುತ್ತ ನೀಡಿದ ಸಿದ್ದರಾಮಯ್ಯ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಚಿವರುಗಳು ಜಿಲ್ಲೆಗಳಿಗೆ ಭೇಟಿ ನೀಡಬಹುದು. ಆದರೆ, ಅಧಿಕಾರಿಗಳಿಂದ ಮಾಹಿತಿ ಪಡೆಯುವಂತಿಲ್ಲ ಅನ್ನೋ ನಿಯಮ ನನಗೆ ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ನೀವು ಹೋಗಿ ಪ್ರಚಾರ ಮಾಡಿದ್ದು ತಮ್ಗೂ ಗೊತ್ತಿದೆಯಲ್ಲವೇ ಎಂದು ಅಶೋಕ್ ಹಾಸ್ಯ ಚಟಾಕಿ ಹಾರಿಸಿದರು.