ರೈತರೇ ನಿಮ್ಮ ಹಿತಶತ್ರುವನ್ನು ಹಿಮ್ಮೆಟ್ಟಿಸಿ

ನಿತ್ಯಾನಂದಸ್ವಾಮಿ

ರಾಜ್ಯದ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 30ರಂದು ಎರಡೂ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು ನವೆಂಬರ್ 2ರಂದು ಮತ ಎಣಿಕೆ ನಡೆಯಲಿದೆ. ಮಾಜಿ ಸಚಿವ ಸಿ.ಎಂ.ಉದಾಸಿ ನಿಧನದಿಂದ ತೆರವಾಗಿರುವ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರ ಮತ್ತು ಮಾಜಿ ಸಚಿವ ಎಂ.ಸಿ. ಮನಗೂಳಿ ನಿಧನದಿಂದ ತೆರವಾದ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ. ಉಭಯ ಕ್ಷೇತ್ರಗಳಿಗೆ ನಡೆಯಲಿರುವ ಈ ಉಪಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪಷ್ಟ ದಿಕ್ಸೂಚಿಯಾಗಲಿದೆ.

ಸಂಬಂಧಪಟ್ಟ ಈ ಎರಡೂ ಕ್ಷೇತ್ರಗಳು ವ್ಯವಸಾಯ ಪ್ರಧಾನ ಪ್ರದೇಶಗಳಾಗಿದ್ದು ಇಲ್ಲಿನ ರೈತರಿಗೂ ಇದೊಂದು ಮಹತ್ವದ ಚುನಾವಣೆ ಆಗಲಿದೆ. ನಮ್ಮ ದೇಶದ ಅನ್ನದಾತರು ದೇಶದ ಪ್ರಧಾನಿ ಮೋದಿ ಅವರ ಮಾತುಗಳಿಗೆ ಮರುಳಾಗಿ ಚುನಾವಣೆಗಳಲ್ಲಿ ಪದೇ ಪದೇ ಚುನಾಯಿಸಲ್ಪಟ್ಟಿದ್ದಾರೆ. ಮೋದಿಯವರ ಮಾತುಗಳು ಜನರನ್ನು ಮೋಡಿ ಮಾಡಿವೆ. ಅವರೊಬ್ಬ ರೈತರ ಹಿತಚಿಂತಕ ಎನ್ನುವ ಭಾವನೆ ದೇಶವನ್ನು ಆವರಿಸಿಕೊಂಡಿತ್ತು. ಆದರೆ ಅವರೊಂದು ರೈತರ ಹಿತಶತ್ರು ಸರ್ಕಾರದ ನೇತಾರರಾಗಿದ್ದಾರೆ ಎಂಬುದನ್ನು ದೇಶದ ರೈತರು ಗ್ರಹಿಸಲಾರಂಭಿಸಿದ್ದಾರೆ.

ಪ್ರಧಾನಿ ಮೋದಿಯವರ ಮಾತುಗಳನ್ನು ನಂಬಿ ಮೋಸ ಹೋದ ರೈತರು ದೇಶದ ರಾಜಧಾನಿಯ ಗಡಿಯಲ್ಲಿ ಕುಳಿತು ತಾವು ನಂಬಿದ ಪ್ರಧಾನಿಯೊಂದಿಗೆ ಮಾತನಾಡಲು ಬಯಸಿ ಶಾಂತಿಯುತ ಸತ್ಯಾಗ್ರಹದಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಅವರು ಆಗ್ರಹಿಸುತ್ತಿದ್ದಾರೆ. ಆದರೆ ರೈತರೊಂದಿಗೆ ಮುಕ್ತವಾದ ಚರ್ಚೆ ನಡೆಸಲು ಮೋದಿರವರು ಮುಂದಾಗುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಖಾತ್ರಿ ಪಡಿಸುವ ಕಾನೂನನ್ನು ಜಾರಿಗೆ ತರುವುದು ರೈತರ ಬೇಡಿಕೆಯಾಗಿದೆ. ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಯನ್ನು ಹಾಗೂ ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕೆಂಬುದು ರೈತರ ಕೋರಿಕೆಯಾಗಿದೆ. ಆದರೆ ಮೋದಿಯವರಿಗೆ ರೈತರ ಹಿತಕ್ಕಿಂತಲು ಕಾರ್ಪೋರೇಟ್ ಕಂಪನಿಗಳ ಹಿತ ಕಾಯುವುದು ಮುಖ್ಯವಾಗಿದೆ. ಕೊರೊನಾ ಹಾವಳಿಗೆ ತುತ್ತಾಗಿ ಜನ ಸಾಯುತ್ತಿದ್ದಾಗ ಮೋದಿಯವರು ಈ ರೈತ ವಿರೋಧಿ ಕಾಯ್ದೆಗಳನ್ನು ಅತ್ಯಂತ ತರಾತುರಿಯಲ್ಲಿ, ಸಂಸತ್ತಿನಲ್ಲಿ ಸರಿಯಾದ ಚರ್ಚೆಗೂ ಅವಕಾಶ ಕೊಡದೆ ಜಾರಿಗೆ ತಂದಿದ್ದಾರೆ. ಇಂತಹ ಮನುಷ್ಯತ್ವ ಇಲ್ಲದ ಪ್ರಧಾನಿಯನ್ನು ಈ ದೇಶ ಹಿಂದೆಂದೂ ಕಂಡಿರಲಿಲ್ಲ.

ಮೋದಿಯವರ ಆಡಳಿತದ ಬಗ್ಗೆ ದೇಶದ ರೈತರು ಭ್ರಮನಿರಸನಗೊಂಡಿದ್ದಾರೆ. ಕೇಂದ್ರ ಸರ್ಕಾರದ ದೇಶ ವಿರೋಧಿ ನೀತಿಗಳ ಎದುರು ಅಸಹಾಯಕರಾಗಿದ್ದಾರೆ. ಅವರ ಅತೃಪ್ತಿ ಬೆಳೆಯತೊಡಗಿದೆ. ಇತ್ತೀಚೆಗೆ ನಡೆದ 4 ರಾಜ್ಯಗಳ ವಿಧಾನ ಸಭಾ ಚುನಾವಣೆಗಳ ಫಲಿತಾಂಶದಲ್ಲಿ ಇದು ವ್ಯಕ್ತವಾಗಿದೆ. ಅದರ ಎಲ್ಲ ತಂತ್ರ ಕುತಂತ್ರಗಳಿಂದಲೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಗೆಲ್ಲಲಾಗಲಿಲ್ಲ. ತಮಿಳುನಾಡಿನಲ್ಲಿ ಬಿಜೆಪಿಗೆ ಎಐಡಿಎಂಕೆ ಜೊತೆ ಕೈಜೋಡಿಸಿಕೊಂಡರೂ ಗೆಲ್ಲಲಾಗಲಿಲ್ಲ. ಕೇರಳದಲ್ಲಿ ಒಂದೇ ಒಂದು ಸ್ಥಾನವನ್ನು ಸಹ ಬಿಜೆಪಿಗೆ ಗೆಲ್ಲಲಾಗಲಿಲ್ಲ. ಕೇವಲ ಅಸ್ಸಾಂನಲ್ಲಿ ಮಾತ್ರ ಕೇವಲ 1% ಮತಗಳ ಅಂತರದಿಂದ ಅದು ಅಧಿಕಾರವನ್ನು ಉಳಿಸಿಕೊಂಡಿದೆ.

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ಜನರ ಸಂಕಷ್ಟಗಳು ಹೆಚ್ಚಾಗಿವೆ. ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗಿವೆ. ಬಡವರ ಬದುಕು ಅಸಹನೀಯವಾಗುತ್ತಿದೆ. ನಿರುದ್ಯೋಗ ಸ್ಪೋಟಕ ಹಂತಕ್ಕೆ ಹತ್ತಿರವಾಗುತ್ತಿದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರಗಳಿಗೆ ತಡೆ ಇಲ್ಲದಂತಾಗಿದೆ. ದಲಿತರ ಮೇಲಿನ ದೌರ್ಜನ್ಯಗಳು ವ್ಯಾಪಕಗೊಂಡಿವೆ. ಅಲ್ಪಸಂಖ್ಯಾತರ ಮೇಲಿನ ದಾಳಿ ದಮನಗಳಿಂದಾಗಿ ಆ ಸಮುದಾಯದ ಯುವಕರಲ್ಲಿ ಸೇಡಿನ ಪ್ರವೃತ್ತಿ ಆತಂಕಕಾರಿಯಾಗಿ ಬೆಳೆಯುತ್ತಿದೆ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ಈ ಬೆಳವಣಿಗೆಗಳ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ.

“ಹೌದೋ ಬಸವಣ್ಣಾ, ಹೌದು, ಅಲ್ಲವೋ ಬಸವಣ್ಣಾ, ಅಲ್ಲಾ” ಎನ್ನುವ ಸರ್ಕಾರ ರಾಜ್ಯದಲ್ಲಿದೆ, ರಾಜ್ಯಕ್ಕೆ ಕೇಂದ್ರ ಸರ್ಕಾದಿಂದ ಅನ್ಯಾಯವಾಗುತ್ತಿದ್ದರೂ ಮುಖ್ಯಮಂತ್ರಿ ಏನನ್ನೂ ಕೇಳುವಂತಿಲ್ಲ. ನೂರಕ್ಕೂ ಹೆಚ್ಚು ತಾಲೂಕುಗಳು ಭೀಕರ ಮಳೆ ಮತ್ತು ಪ್ರವಾಹದಿಂದ ಹಾನಿ ಅನುಭವಿಸಿವೆ. ಬಿದ್ದು ಹೋದ ಅವರ ಮನೆಗಳು, ಕೊಚ್ಚಿ ಹೋದ ಜಾನುವಾರುಗಳು, ನಾಶವಾದ ಬೆಳೆಗಳಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಕೊರೊನಾ ಹಾವಳಿಗೆ ತುತ್ತಾದ ಕುಟುಂಬಗಳಿಗೆ ಕೊಟ್ಟ ಭರವಸೆ ಪ್ರಕಾರ ಇದುವರೆಗೂ ಯಾವುದೇ ಆರ್ಥಿಕ ನೆರವು ಸಿಕ್ಕಿಲ್ಲ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವ, ಯೋಜನೆಯನ್ನು ವಿಸ್ತರಿಸುವ, ವೇತನವನ್ನು ಹೆಚ್ಚಿಸುವ ಎಳ್ಳಷ್ಟು ಕಾಳಜಿ ಸರ್ಕಾರಕ್ಕಿಲ್ಲ.

ಬೊಮ್ಮಾಯಿ ಸರ್ಕಾರ ಕೇಂದ್ರ ಸರ್ಕಾರದ ಧೋರಣೆಗಳಿಗೆ ಬದ್ಧವಾಗಿರುವ ಸರ್ಕಾರ. ಅದರ ಧೋರಣೆಗಳು ಬದಲಾಗರಾರವು. ಆದ್ದರಿಂದ ರೈತರಿಗೆ, ಕಾರ್ಮಿಕರಿಗೆ ಉಳಿದಿರುವುದು ಒಂದೇ ಮಾರ್ಗ, ಅದು ಈ ಸರ್ಕಾರವನ್ನು ಕಿತ್ತುಹಾಕುವುದು. ಸರ್ಕಾರದ ನೀತಿಗಳು ಜನಪರವಾಗಿ ಬದಲಾಗದಿದ್ದರೆ ಅಂತಹ ಸರ್ಕಾರವನ್ನೇ ಬದಲಾಯಿಸುವುದು ಅನಿವಾರ್ಯವಾಗಲಿದೆ. ದೇಶದ ರೈತರು ಆ ಅಂತಿಮ ಘಟ್ಟಕ್ಕೆ ತಲುಪಿದಂತೆ ಭಾಸವಾಗುತ್ತಿದೆ.

ಕರ್ನಾಟಕದಲ್ಲಿ 2 ವಿಧಾನ ಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಗಳು ಬೊಮ್ಮಾಯಿ ಸರ್ಕಾರಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಬೇಕು. 10 ತಿಂಗಳಿಂದ ಶಾಂತಿಯುತವಾದ ಹೋರಾಟ ನಡೆಸುತ್ತಿರುವ ರೈತರ ಮತ್ತು ಕೃಷಿ ಕೂಲಿಕಾರರು ಸೆಪ್ಟಂಬರ್ 27 ರಂದು `ಭಾರತ್ ಬಂದ್’ ಆಚರಿಸುವ ಮೂಲಕ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅಹಿಂಸಾತ್ಮಕ ಹೋರಾಟವನ್ನು ಸರ್ಕಾರ ಬಲವಂತದ ಕ್ರಮಗಳಿಂದ ನಾಶಮಾಡಲು ಹೊಂಚುಹಾಕುತ್ತಿದೆ. ಇದರಿಂದ ಮೋದಿ ಸರ್ಕಾರ ರೈತರ ಹಿತೈಷಿ ಸರ್ಕಾರವಲ್ಲ ಎಂಬುದು ಸ್ವಷ್ಟವಾಗುತ್ತದೆ. ಈ ಸರ್ಕಾರಕ್ಕೆ ರೈತರೆಲ್ಲರೂ ಕೂಡಿ ಪಾಠ ಕಲಿಸಬೇಕಾಗಿದೆ. ಮೋದಿ ಸರ್ಕಾರ ರೈತರ ಹಿತ ರಕ್ಷಕ ಸರ್ಕಾರವಲ್ಲ. ಅದು ರೈತರ ಹಿತಶತ್ರು. ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಿ ತಕ್ಕ ಪಾಠ ಕಲಿಸಬೇಕು. ಮುಂದಿನ ವಿಧಾನಸಭಾ ಚುನಾವಣೆಗೆ ಇದು ಮೊದಲ ಮೆಟ್ಟಿಲು ಆಗಬೇಕು.

Donate Janashakthi Media

Leave a Reply

Your email address will not be published. Required fields are marked *