ನವದೆಹಲಿ ಫೆ 02 : ರೈತರ ಪ್ರತಿಭಟನೆ ಕುರಿತು ಚರ್ಚೆ ನಡೆಸುವಂತೆ ವಿಪಕ್ಷಗಳು ಒತ್ತಾಯಿಸಿದ ಕಾರಣ ರಾಜ್ಯಸಭೆ ಕಲಾಪ ಎರಡು ಬಾರಿ ಮುಂದೂಡಿಕೆ ಮಾಡಲಾಗಿದೆ.
ಪ್ರಸಕ್ತ ಸಾಲಿನ ಬಜೆಟ್ ಮಂಡನೆಯ ಒಂದು ದಿನದ ಬಳಿಕ ಇಂದು ಬೆಳಗ್ಗೆ ರಾಜ್ಯಸಭೆಯ ಕಲಾಪ ಆರಂಭಗೊಂಡಿತು. ಆರಂಭದಲ್ಲಿ ವಿರೋಧ ಪಕ್ಷಗಳು ರೈತರ ಪ್ರತಿಭಟನೆಯ ಬಗ್ಗೆ ಚರ್ಚಿಸಲು ನಿಲುವಳಿಯೊಂದನ್ನು ಮಂಡಿಸಿತು. ಆದರೆ ಈ ಬಗ್ಗೆ ನಾಳೆ ಅವಕಾಶ ನೀಡುತ್ತೇನೆ ಎಂದು ಸಭಾಪತಿ ವೆಂಕಯ್ಯನಾಯ್ಡು ತಿಳಿಸಿದರು. ಆದರೆ ಇದನ್ನು ವಿರೋಧಿಸಿ ವಿಪಕ್ಷ ಸದಸ್ಯರು ಘೋಷಣೆ ಕೂಗಿ, ತಕ್ಷಣ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಘೋಷಣೆಗಳನ್ನು ಕೂಗಲಾರಂಬಿಸಿದರು.
ಇದನ್ನೂ ಓದಿ : ಸಂಸತ್ ಬಜೆಟ್ ಅಧಿವೇಶನ ಆರಂಭ : ರಾಷ್ಟ್ರಪತಿ ಭಾಷಣ ಬಹಿಷ್ಕರಿಸಿದ ವಿಪಕ್ಷಗಳು
ಪ್ರತಿಭಟನಾ ನಿರತ ಕೆಲವು ಸದಸ್ಯರು ಸದನದ ಬಾವಿಗೆ ಪ್ರವೇಶಿಸಿ ಘೋಷಣೆಗಳನ್ನು ಮುಂದುವರಿಸಿದ್ದರಿಂದ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ಬೆಳಿಗ್ಗೆ 10.30 ರವರೆಗೆ ಸದನವನ್ನು ಮುಂದೂಡಿದರು. ನಂತರ ರಾಜ್ಯಸಭೆಯ ಉಪಾಧ್ಯಕ್ಷ ಹರಿವನಶ್ ನಾರಾಯಣ್ ಸಿಂಗ್ ಅವರು ಸದನವನ್ನು ಬೆಳಿಗ್ಗೆ 11: 30 ರವರೆಗೆ ಮುಂದೂಡಿದರು. ಬಹುಷ: 12:30 ಕ್ಕೆ ಕಲಾಪ ಆರಂಭವಾಗಬಹುದು. ಕೃಷಿಕಾಯ್ದೆ ಹಾಗೂ ರೈತರ ಹೋರಾಟದ ಕುರಿತು ಚರ್ಚೆಯಾಗಲೇ ಬೇಕು ಎಂದು ವಿಪಕ್ಷಗಳ ಸದಸ್ಯರು ಪಟ್ಟು ಹಿಡಿದಿದ್ದಾರೆ.