ರೈತರ ಹೋರಾಟಕ್ಕೆ ವಿದೇಶಿ ಆಟಗಾರರ ಬೆಂಬಲ

ವಾಷಿಂಗ್ಟನ್ ಫೆ 05 ‌: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹಾಲಿವುಡ್ ನಟರು ಬೆಂಬಲ ನೀಡಿದ ಬೆನ್ನಲ್ಲೆ ಅಮೆರಿಕದ ಫುಟ್‌ಬಾಲ್‌ ಆಟಗಾರರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆ ಮೂಲಕ ದೆಹಲಿ ರೈತರ ಹೋರಾಟ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಅಮೆರಿಕದ ನ್ಯಾಷನಲ್‌ ಫುಟ್‌ಬಾಲ್‌ ಲೀಗ್‌ನ ಆಟಗಾರ ಜುಜು ಸ್ಮಿತ್-ಶುಸ್ಟರ್ ಅವರು 10 ಸಾವಿರ ಡಾಲರ್‌ ಮೊತ್ತವನ್ನು ದೇಣಿಗೆ ನೀಡಿರುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ವೈದ್ಯಕೀಯ ನೆರವು ನೀಡಿರುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ವೈದ್ಯಕೀಯ ನೆರವಿಗಾಗಿ 10 ಸಾವಿರ ಡಾಲರ್‌ ಮೊತ್ತವನ್ನು ದೇಣಿಗೆ ನೀಡಿದ್ದೇನೆ. ಈ ಬಗ್ಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಇಂತಹ ಸಮಯದಲ್ಲಿ ಜೀವಗಳನ್ನು ಉಳಿಸಬೇಕಿದೆ. ಹೆಚ್ಚಿನ ಜೀವಗಳನ್ನು ಕಳೆದುಕೊಳ್ಳದಂತೆ ನಾವು ತಡೆಯಬಹುದು ಎಂಬುದಾಗಿ ನಾನು ಭಾವಿಸುತ್ತೇನೆ’ ಎಂದು ತಿಳಿಸಿದ್ದಾರೆ. ರೈತರು ಕಾಯ್ದೆ ರದ್ದು ಪಡಿಸುವಂತೆ ಚಳಿ, ಹಾಗೂ ಪೊಲೀಸ್ ಮತ್ತು ಸರಕಾರದ ಅಡೆತಡೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಗಟ್ಟಿತನ, ಒಗ್ಗಟ್ಟು ನೋಡಿದರೆ ಕಾಯ್ದೆಯಲ್ಲಿ ಅಪಾಯಗಳಿವೆ. ಭಾರತ ಸರ್ಕಾರ ರೈತರಿಗೆ ಅಪಾಯವಾಗಿರುವ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಜುಜು ಸ್ಮಿತ್ ತಿಳಿಸಿದ್ದಾರೆ. 24 ವರ್ಷ ವಯಸ್ಸಿನ ಜುಜು ಸ್ಮಿತ್-ಶುಸ್ಟರ್ ಅಮೆರಿಕದ ನ್ಯಾಷನಲ್‌ ಫುಟ್‌ಬಾಲ್‌ ಲೀಗ್‌ನ ಖ್ಯಾತ ಆಟಗಾರರಾಗಿದ್ದು, ಅವರು ಪಿಟ್ಸ್‌ಬರ್ಗ್ ಸ್ಟೀಲರ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಜುಜು ಸ್ಮಿತ್-ಶುಸ್ಟರ್ ಅವರು ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಅಭಿಮಾನಿಗಳು ಸಹ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರ ಟ್ವಿಟರ್ ನಲ್ಲಿ ಹಾಕಿದ ಪೋಸ್ಟ್ ನ್ನು 55 ಸಾವಿರ ಜನ ಲೈಕ್ ಮಾಡಿದ್ದು, 26 ಸಾವಿರ ಮರು ಟ್ವೀಟ್ ಆಗಿದೆ.

ಇದನ್ನೂ ಓದಿ : ಅನ್ನದಾತರ ಹೋರಾಟಕ್ಕೆ ಹೆಚ್ಚಿದ ಸೆಲೆಬ್ರಿಟಿಗಳ ಬೆಂಬಲ

ಅಮೆರಿಕದ ಬಾಸ್ಕೆಟ್‌ಬಾಲ್‌ ಆಟಗಾರ ಕೈಲ್‌ ಕುಜ್ಮಾ ಅವರು ಸಹ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಿಎನ್‌ಎನ್ ಲೇಖನ ಸಮೇತ ಟ್ವೀಟ್ ಮಾಡಿರುವ ಕುಜ್ಮಾ, ‘ಈ ಬಗ್ಗೆ ಮಾತನಾಡಬೇಕಿದೆ’ ಎಂದು ಹೇಳಿದ್ದಾರೆ.

ಕೈಲ್‌ ಕುಜ್ಮಾ ಅವರು ಅಮೆರಿಕದ ನ್ಯಾಷನಲ್ ಬಾಸ್ಕೆಟ್‌ ಬಾಲ್‌ ಅಸೋಸಿಯೇಷನ್‌(ಎನ್‌ಬಿಎ) ಆಟಗಾರರಾಗಿದ್ದು, ಲಾಸ್‌ ಎಂಜಲೀಸ್‌ ಲೇಕರ್ಸ್‌ ತಂಡವನ್ನು ಪ್ರತಿನಿಧಿಸುತ್ತಾರೆ. ಇವರ ಟ್ವಿಟ್ಟರ್ ಗೆ 38 ಸಾವಿರ ಜನ ಲೈಕ್ ಮಾಡಿದ್ದು, 20 ಸಾವಿರ ಮರು ಟ್ವೀಟ್ ಆಗಿದೆ.

ಮಾಜಿ ಎನ್‌ಬಿಎ ಆಟಗಾರ ಬ್ಯಾರನ್ ಡೇವಿಸ್ ಅವರು ರೈತರ ಪ್ರತಿಭಟನೆಯ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ‘ಭಾರತದಲ್ಲಿ ಏನಾಗುತ್ತಿದೆ ಎಂಬುದನ್ನು ನಾವು ತಿಳಿಯಲಿದ್ದೇಯೇ? ನನ್ನ ಒಳ್ಳೆಯ ಜನರು ಸ್ವತಂತ್ರವಾಗಲಿ. ರೈತರು ನಮಗೆ ಜೀವನ ವಿಧಾನವನ್ನು ಒದಗಿಸುತ್ತಾರೆ. ಅವರು ಉತ್ತಮವಾಗಿ ಜೀವಿಸುವ ಹಕ್ಕನ್ನು ಹೊಂದಿರಲೇಬೇಕು’ ಎಂದು ಹೇಳಿದ್ದಾರೆ. ಇವರ ಟ್ವಿಟರ್ ಗೆ 29 ಸಾವಿರ ಜನ‌ ಲೈಕ್ ಮಾಡಿದ್ದು, 14 ಸಾವಿರ ಮರು ಟ್ವೀಟ್ ಆಗಿದೆ.

ರೈತರು ನಡೆಸುತ್ತಿರುವ ಪ್ರತಿಭಟನೆಗೆ ಅಂತರ ರಾಷ್ಟ್ರೀಯ ಪಾಪ್ ಗಾಯಕಿ ರಿಹಾನ್ನಾ ಬೆಂಬಲ ಸೂಚಿಸಿದ್ದರು. ರಿಹಿನ್ನಾ ಟ್ವೀಟ್ ಗೆ ಪರ ವಿರೋಧದ ಚರ್ಚೆ ನಡೆದಿತ್ತು. ರೈತರ ಹೋರಾಟಕ್ಕೆ ಬೆಂಬಲ ನೀಡದೆ, ರಿಹನ್ನಾ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದ
ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ರನ್ನು ನೆಟ್ಟಿಗರು ಹಿಗ್ಗಾ ಮುಗ್ಗ ಜಾಡಿಸಿದ್ದರು. ” ನಿಮ್ಮ ಸೆಂಚುರಿ ಹಿಂದೆ ಅನ್ನದಾತರ ಶಕ್ತಿ” ಮರೆಯಬೇಡಿ ಎಂದೆಲ್ಲ ಸಚಿನ್ ರನ್ನು ಟ್ರೋಲ್ ಮಾಡಿದ್ದರು. ಒಟ್ಟಾರೆ Farmers Protest ಹ್ಯಾಶ್ ಟ್ಯಾಗ್ ಟ್ವೀಟರ್ ಭಾರಿ ಸದ್ದು ಮಾಡುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ.

Donate Janashakthi Media

2 thoughts on “ರೈತರ ಹೋರಾಟಕ್ಕೆ ವಿದೇಶಿ ಆಟಗಾರರ ಬೆಂಬಲ

Leave a Reply

Your email address will not be published. Required fields are marked *