ಗಾಜಿಯಾಬಾದ್ ಫೆ 14: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ದೆಹಲಿ-ಮೀರತ್ ನ ಗಾಜಿಪುರ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಹಾತ್ಮ ಗಾಂಧಿಯವರ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಯ ರವರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಗಾಂಧಿ ಫೌಂಡೇಶನ್ ನ ಕಾರ್ಯಕರ್ತರೊಂದಿಗೆ ಅವರು ನಿನ್ನೆ ಗಾಜಿಪುರ ಗಡಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಬಗ್ಗೆ ಮಾತನಾಡಿದ ಅವರು, ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ಯಾವ ರಾಜಕೀಯ ಪಕ್ಷದ ಬೆಂಗಾವಲೂ ನಮ್ಮ ಜೊತೆಗೆ ಇಲ್ಲ. ನಾನು 87 ವರ್ಷದ ಹಿರಿಯ ನಾಗರಿಕಳಾಗಿ ರೈತರ ಪರವಾಗಿ ಮಾತನಾಡಲು ಬಂದಿದ್ದೇನೆ. ರೈತರು ನಮ್ಮ ಜೀವನಕ್ಕೆ ಅನ್ನ ನೀಡುತ್ತಾರೆ. ಅವರಿಗೆ ಕೃಷಿ ಕಾಯ್ದೆ ಲಾಭವಾಗದಿದ್ದರೆ ದೇಶಕ್ಕೆ ಪ್ರಯೋಜನವಿಲ್ಲ ಎಂದರು.
ಕೂಡಲೆ ಕೇಂದ್ರ ಸರಕಾರ ಕೃಷಿ ಕಾಯ್ದೆಗಳನ್ನು ರದ್ದು ಪಡಿಸಬೇಕು, ರೈತರ ಹಿತವನ್ನು ಕಾಪಾಡಬೇಕು ಎಂದರು. ರೈತರು ಈ ಕಾಯ್ದೆಯ ವಿರುದ್ಧ ಎಲ್ಲಿಯವರೆಗೆ ಹೋರಾಟ ನಡೆಸುತ್ತಾರೆ, ಅಲ್ಲಿಯವರೆಗೆ ನಾನು ಜೊತೆಯಾಗಿರುತ್ತೇನೆ ಎಂದು ಹೇಳುವ ಮೂಲಕ ಹೋರಾಟಕ್ಕೆ ಸ್ಪೂರ್ತಿ ತುಂಬಿದರು.
ಮತ್ತೊಬ್ಬ ರೈತ ಹುತಾತ್ಮ : ಸಿಂಘು ಗಡಿಯಲ್ಲಿ 72 ವರ್ಷದ ರೈತ ಹಸ್ಸಾ ಸಿಂಗ್ ಸಾವನ್ನಪ್ಪಿದ್ದಾರೆ. ಮೋಗಾ ಜಿಲ್ಲಿಗೆ ಸೇರಿರುವ ಹಸ್ಸಾ ಸಿಂಗ್ ಕೃಷೆಕಾಯ್ದೆ ವಿರೋಧಿಸಿ 80 ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿದ್ದರು. ಹೃದಯಾಘಾತದಿಂದ ನಿನ್ನೆ ( ಶನಿವಾರ) ಸಾವನ್ನಪ್ಪಿದ್ದಾರೆ.