ಬೆಂಗಳೂರು ಫೆ 21 : ಕೇಂದ್ರದ ಮೂರು ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಬರಹಗಾರರು ಮೌನ ಮುರಿಯಬೇಕು ಎಂದು ಹಿರಿಯ ಚಿಂತಕ ಡಾ. ಪುರುಷೋತ್ತಮ ಬಿಳಿಮಲೆಯವರು ಆಗ್ರಹಿಸಿದರು.
ಅವರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಸರ್ಕಾರದ ಧೋರಣೆ ಪ್ರತಿಭಟಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಕುರಿತಾದ ಕೆ. ಷರೀಫಾ ಹಾಗೂ ಯಮುನಾ ಗಾಂವ್ಕರ್ ಸಂಪಾದಿತ ‘ಹೊನ್ನಾರು ಒಕ್ಕಲು’ ಮತ್ತು ಹೆಚ್.ಆರ್. ನವೀನಕುಮಾರ ಅವರ ‘ಕದನ ಕಣ’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕೃಷಿಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಕಳೆದ 84 ದಿನಗಳಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದರೂ ಸೌಜನ್ಯಕ್ಕಾಗಿ ಕೇಂದ್ರ ಸರ್ಕಾರ ಮಾತನಾಡಿಸುವ ಹೊಣೆಗಾರಿಕೆ ಪ್ರದರ್ಶಿಸುತ್ತಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ಆಡಳಿತ ಕ್ರೌರ್ಯದ ವಿರುದ್ಧ ಬರಹಗಾರರು , ಸಾಹಿತಿಗಳು ಮಾತನಾಡುತ್ತಿಲ್ಲ.ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.?
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ತಮ್ಮನ್ನು ನಿರ್ಲಕ್ಷಿಸುತ್ತಿರುವ ಕೇಂದ್ರ ಸರ್ಕಾರವನ್ನು ರೈತರು ಅತ್ಯಂತ ಸಹನೆಯಿಂದಲೇ ಕಾಣುತ್ತಿದ್ದಾರೆ. ಇದು ರೈತರ ದೊಡ್ಡ ಗುಣ. ಯುವ ಬರಹಗಾರರು ರೈತರ ಹೋರಾಟ ಬೆಂಬಲಿಸಿ ಸಾಹಿತ್ಯ ರಚನೆ ಮಾಡುತ್ತಿದ್ದರೆ ಹಿರಿಯ ಬರಹಗಾರರು ಮೌನವಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಜಾಸತಾತ್ಮಕ ನೆಲೆಯಲ್ಲಿ ಹೋರಾಟ ನಡೆಸುತ್ತಿರುವ ರೈತರ ವಿರುದ್ಧ ಕೇಂದ್ರ ಸರ್ಕಾರ ಕೆಟ್ಟದ್ದಾಗಿ ನಡೆದುಕೊಳ್ಳುತ್ತಿದೆ. ರೈತ ಪರ ಘೋಷಣೆ ಕೂಗಿದವರನ್ನು ಜೈಲಿಗಟ್ಟುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರದ ಇಂತಹ ಯಾವ ಕ್ರಮವೂ ರೈತರನ್ನು ಹಿಮ್ಮೆಟ್ಟಿಸಲಾಗದು ಎಂದು ಎಚ್ಚರಿಸಿದರು.
ಬ್ರಿಟಿಷರ ಕಾಲದ ವಸಾಹತುಶಾಹಿ ವ್ಯವಸ್ಥೆಗೂ ನವ ವಸಾಹತುಶಾಹಿ ಪದ್ಧತಿಗೂ ವ್ಯತ್ಯಾಸ ಇದೆ. ವೈರಿಗಳು (ಬ್ರಿಟಿಷರು) ಯಾರು ಎಂಬುದು ಅವರ ಮುಖ ಮತ್ತು ವೇಷಭೂಷಣದ ಮೂಲಕವೇ ಅಂದು ತಿಳಿಯಬಹುದಿತ್ತು. ನವ ವಸಾಹತುಶಾಹಿ ವ್ಯವಸ್ಥೆಯಲ್ಲಿ ವೈರಿಗಳನ್ನು ಆ ರೀತಿ ಗುರುತಿಸಲು ಆಗುವುದಿಲ್ಲ. ಹೀಗಾಗಿ, ಹೋರಾಟ ನಡೆಸುವುದು ಕಷ್ಟವಾಗಲಿದೆ. ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ತೀರ್ಮಾನಿಸುವ ಅಧಿಕಾರ ಸಂವಿಧಾನದ ಪ್ರಕಾರ ರಾಜ್ಯಗಳಿಗೆ ಇದೆ. ವಿದ್ಯುತ್ ಸಂಬಂಧಿಸಿದ ವಿಷಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ತೀರ್ಮಾನ ಕೈಗೊಳ್ಳಬೇಕು. ಆದರೆ, ರಾಜ್ಯಗಳ ಅಧಿಕಾರ ಪರಿಗಣಿಸದೆ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಂಡು ಕಾಯ್ದೆಗಳನ್ನು ರೂಪಿಸುತ್ತಿರುವುದು ಸಂವಿಧಾನಕ್ಕೆ ವಿರುದ್ಧವಾದ ನಡೆ’ ಎಂದು ಬಿಳಿಮಲೆ ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ನಿರ್ದೇಶಕ ಕೇಸರಿ ಹರವೂ ಅವರ ಸಾಕ್ಷಿ ಚಿತ್ರವನ್ನು ಪ್ರದರ್ಶಿಸಲಾಯಿತು. ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿಯಾದ ವಿಜೂ ಕೃಷ್ಣನ್, ಚಲನ ಚಿತ್ರ ನಿರ್ದೇಶಕ ಕೇಸರಿ ಹರವೂ, ಲೇಖಕರಾದ ಕೆ. ಷರೀಫಾ, ಹೆಚ್. ಆರ್. ನವೀನ್ ಕುಮಾರ್ ಮಾತನಾಡಿದರು. ಯಮುನಾ ಗಾಂವ್ಕರ್ ಕಾರ್ಯಕ್ರಮವನ್ನು ನಿರ್ವಹಿಸಿದರು. ವೇದಿಕೆಯ ಮೇಲೆ ಕ್ರೀಯಾ ಮಾಧ್ಯಮದ ಎನ್. ಕೆ. ವಸಂತರಾಜ್, ಚಂದ್ರಶೇಖರ್ ಗಂಗಾಧರ್ ಉಪಸ್ಥಿತರಿದ್ದರು.