ಬೆಂಗಳೂರು ಫೆ 10 : ದೆಹಲಿಯಲ್ಲಿ ನಡೆಯುತ್ತಿರುವ ರೈತರ ಐತಿಹಾಸಿಕ ಹೋರಾಟ ಬೆಂಬಲಿಸಿ ರೈತರಿಗಾಗಿ ವಕೀಲರ ನಡಿಗೆ ಕಾರ್ಯಕ್ರಮ ಫೆ 12 ರಂದು ನಡೆಯಲಿದೆ ಎಂದು ಹಿರಿಯ ವಕೀಲ ಎಸ್ ಶಂಕರಪ್ಪ ತಿಳಿಸಿದ್ದಾರೆ.
ಅಖಿಲ ಭಾರತ ವಕೀಲರ ಒಕ್ಕೂಟದ (AILU) ನೇತೃತ್ವದಲ್ಲಿ ನಡೆದ ಪೂರ್ವ ಸಿದ್ಧತಾಸಭೆಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ಸಿಟಿ ಸಿವಿಲ್ ಕೊರ್ಟ ಆವರಣದಿಂದ ವಕೀಲರ ನಡಿಗೆ ಆರಂಭಗೊಂಡು ಕರ್ನಾಟಕ ಹೈಕೋರ್ಟ್ ತಲುಪಿ, ಹೈಕೋರ್ಟ್ ಮುಂದಿನ ರಸ್ತೆಯಲ್ಲಿ ವಕೀಲರು ಮಾನವ ಸರಪಳಿ ನಿರ್ಮಿಸಿ ರೈತರ ಹೋರಾಟ ಬೆಂಬಲಿಸಲಿದ್ದಾರೆ ಎಂದರು.
ಇದನ್ನೂ ಓದಿ : ರೈತರ ನಿರಂತರ ಪ್ರತಿಭಟನೆಗೆ ವಕೀಲರ ಸಾಥ್
ಕೋವಿಡ್-೧೯ ನಿಂದ ಜನ ಪರದಾಡುತ್ತಿರುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಚರ್ಚೆ, ವಿಮರ್ಶೆಗಳಿಗೆ, ಅವಕಾಶ ನೀಡದೇ ಜನ ವಿಭಾಗದ ವಿರೋಧವನ್ನು ಲೆಕ್ಕಿಸದೇ ಕಾರ್ಪೊರೇಟ್ ಕಂಪನಿಗಳ ಪರವಾದಂತಹ, ರೈತ-ಕಾರ್ಮಿಕ-ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿವೆ. ಈ ಕಾಯ್ದೆಗಳು ಜಾರಿಯಾದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಅಸ್ಥಿರಗೊಂಡು, ಇಡೀ ದೇಶದ ಜನ ಸಾಮಾನ್ಯರ ಬದುಕಿನ ಮೇಲೆ ಪರಿಣಾಮ
ಬೀರುವುದು ಮಾತ್ರವಲ್ಲ, ವಕೀಲ ವೃತ್ತಿಗೂ ಪೆಟ್ಟು ಬೀಳಲಿದೆ. ಇಂತಹ ಜನವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತ ಮತ್ತು ಜನ ವಿಭಾಗಗಳ ಸಮರಧೀರ ಐತಿಹಾಸಿಕ ಹೋರಾಟ ನಡೆಯುತ್ತಿದ್ದು, ಸದರಿ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ.
ರೈತ ವಿರೋಧಿ ಜನ ವಿರೋಧಿ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂಪಡೆಯಬೇಕೆಂದು ಒತ್ತಾಯಿಸಿ ವಕೀಲರು ರೈತರಿಗಾಗಿ ನಡಿಗೆ ಕಾರ್ಯಕ್ರಮ ನಡೆಸಲಿದ್ದಾರೆ ಎಂದರು.
ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕಾಂತರಾಜು ಹೆಚ್ ಮಾತನಾಡಿ, ಕೃಷಿ ಕಾಯ್ದೆ ಸಂವಿಧಾನ ಬಾಹಿರವಾಗಿದೆ, ದೇಶದ ತುಂಬೆಲ್ಲ ವಕೀಲರು ಬೀದಿಗಿಳಿದು ರೈತರ ಪರ ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕದಲ್ಲೂ ನಾವು ರೈತರ ಹೋರಾಟವನ್ನು ಬೆಂಬಲಿಸಿ ರೈತರಿಗಾಗಿ ವಕೀಲರ ನಡಿಗೆ ಕಾರ್ಯಕ್ರಮವನ್ನು ನಡೆಸುತ್ತಿದ್ದೆವೆ, ಇದು ಬೆಂಗಳೂರು ಅಷ್ಟೆ ಅಲ್ಲದೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲೂ ನಡೆಯಲಿದೆ ಎಂದರು.
ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನಣ್ಣ ಮಾತನಾಡಿ, ಈ ಕಾಯ್ದೆಯಲ್ಲಿ ವಕೀಲರ ಪಾತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕೇವಲ ಅಧಿಕಾರಿಗಳು ಸೇರಿಕೊಂಡು ಎಲ್ಲವನ್ನೂ ತೀರ್ಮಾನ ಮಾಡುವ ಮೂಲಕ ನ್ಯಾಯಾಂಗವನ್ನು ದೂರವಿಟ್ಟಿದ್ದಾರೆ, ರೈತರಿಗಾಗಿ ವಕೀಲರ ನಡಿಗೆ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಬೆಂಬಲಿಸಬೇಕು ಎಂದು ತಿಳಿಸಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಹಿರಿಯ ವಕೀಲರಾದ ಬಾಲನ್ ರವರು ಮಾತನಾಡುತ್ತಾ, ಕಪ್ಪುಹಣವನ್ನು ಬಿಳಿಹಣವನ್ನಾಗಿಸುವ ವ್ಯವಸ್ಥೆಯನ್ನು ಈ ಕಾಯ್ದೆ ಜಾರಿ ಮಾಡುತ್ತದೆ. ಹಾಗಾಗಿ ಈ ಕಾಯ್ದೆಯನ್ನು ರದ್ದು ಪಡಿಸಬೇಕು ಎಂದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ, ಕಾರ್ಯದರ್ಶಿ ಗಂಗಾಧರಯ್ಯ, ರಾಜ್ಯ ವಕೀಲರ ಪರಿಷತ್ ಸದಸ್ಯ ಶಿವಕುಮಾರ್ ಮಾತನಾಡಿ ರೈತರಿಗಾಗಿ ವಕೀಲರ ನಡಿಗೆ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು.
ಪ್ರಸ್ಥಾವಿಕವಾಗಿ ಎ.ಐ.ಎಲ್.ಯು ನ ಜಿಲ್ಲಾಧ್ಯಕ್ಷರಾದ ಹರೀಂದ್ರ ರವರು ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಟಿ.ಎನ್. ಶಿವಾರೆಡ್ಡಿ ಸ್ವಾಗತಿಸಿದರೆ, ರಾಜ್ಯ ಮುಖಂಡರಾದ ಶರಣಬಸವ ಮರದ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.